– 32 ರನ್ ಅಂತರದಲ್ಲಿ 9 ವಿಕೆಟ್ ಪತನ
– ಮುಂಬೈಗೆ ಹೀನಾಯ ಸೋಲು
ದುಬೈ: ಗ್ಲೇನ್ ಮ್ಯಾಕ್ಸ್ ವೆಲ್ ಆಲ್‍ರೌಂಡರ್ ಆಟ, ಹರ್ಷಲ್ ಪಟೇಲ್ ಅವರ ಹ್ಯಾಟ್ರಿಕ್ ಸಾಧನೆಯಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮುಂಬೈ ವಿರುದ್ಧ 54 ರನ್ ಗಳಿಂದ ಪಂದ್ಯ ಗೆದ್ದುಕೊಂಡಿದೆ.
ಗೆಲ್ಲಲು 166 ರನ್‍ಗಳ ಗುರಿಯನ್ನು ಪಡೆದ ಮುಂಬೈ 18.1 ಓವರ್ ಗಳಲ್ಲಿ 111 ರನ್‍ಗಳಿಗೆ ಆಲೌಟ್ ಆಯ್ತು. ಈ ಪಂದ್ಯವನ್ನು ಗೆಲ್ಲುವ ಮೂಲಕ ಅಂಕ ಪಟ್ಟಿಯಲ್ಲಿ 12 ಅಂಕವನ್ನು ಪಡೆದು ಬೆಂಗಳೂರು ಮೂರನೇ ಸ್ಥಾನದಲ್ಲೇ ಮುಂದುವರಿದಿದೆ.
Advertisement
Advertisement
ನಾಯಕ ರೋಹಿತ್ ಶರ್ಮಾ ಮತ್ತು ಕ್ವಿಂಟಾನ್ ಡಿ ಕಾಕ್ 6.4 ಓವರ್ ಗಳಲ್ಲಿ ಮೊದಲ ವಿಕೆಟಿಗೆ 57 ರನ್ ಜೊತೆಯಾಟವಾಡಿ ಉತ್ತಮ ಆರಂಭ ನೀಡಿದರು. ಕ್ವಿಂಟಾನ್ ಡಿ ಕಾಕ್ 24 ರನ್(23 ಎಸೆತ, 4 ಬೌಂಡರಿ) ಹೊಡೆದು ಚಹಲ್‍ಗೆ ವಿಕೆಟ್ ಒಪ್ಪಿಸಿದರೆ ರೋಹಿತ್ ಶರ್ಮಾ 43 ರನ್(28 ಎಸೆತ, 5 ಬೌಂಡರಿ, 1 ಸಿಕ್ಸರ್) ಹೊಡೆದು ಔಟಾದರು.
Advertisement
ರೋಹಿತ್ ಶರ್ಮಾ ಔಟಾದ ಬೆನ್ನಲ್ಲೇ ಮುಂಬೈ ಕುಸಿತ ಆರಂಭವಾಯಿತು. ಕೇವಲ 32 ರನ್ ಅಂತರದಲ್ಲಿ 9 ವಿಕೆಟ್ ಕಳೆದುಕೊಂಡ ಪರಿಣಾಮ ಹೀನಾಯವಾಗಿ ಮುಂಬೈ ಸೋಲು ಕಾಣುವಂತಾಯಿತು. ಇದನ್ನೂ ಓದಿ: ಸಂಜು ಸ್ಯಾಮ್ಸನ್‍ಗೆ 24 ಲಕ್ಷ ದಂಡ – ಆಟಗಾರರಿಗೂ ಭಾರೀ ಫೈನ್
Advertisement
ಆರಂಭದಲ್ಲಿ ಚಹಲ್ ಮತ್ತು ಮ್ಯಾಕ್ಸ್ ವೆಲ್ ಮುಂಬೈ ಬ್ಯಾಟ್ಸ್ ಮನ್‍ಗಳನ್ನು ಕಟ್ಟಿಹಾಕಿದರೆ ನಂತರ ಹರ್ಷಲ್ ಪಟೇಲ್ ಬಿಗಿಯಾದ ಬೌಲಿಂಗ್ ಮುಂದೆ ರನ್ ಗಳಿಸಲು ಪರದಾಡಿದರು.
ಹಾರ್ದಿಕ್ ಪಾಂಡ್ಯ ಕೊಹ್ಲಿಗೆ ಕ್ಯಾಚ್ ನೀಡಿದರೆ, ಪೊಲಾರ್ಡ್ ಬೌಲ್ಡ್ ಆದರು. ರಾಹುಲ್ ಚಹರ್ ಅವರನ್ನು ಎಲ್‍ಬಿ ಗೆ ಕೆಡವುವ ಮೂಲಕ ಹರ್ಷಲ್ ಪಟೇಲ್ ಹ್ಯಾಟ್ರಿಕ್ ಸಾಧನೆ ಮಾಡಿದರು. ಹರ್ಷಲ್ ಪಟೇಲ್ 4, ಚಹಲ್ 3, ಮ್ಯಾಕ್ಸ್ ವೆಲ್ 2 ವಿಕೆಟ್ ಕಿತ್ತರೆ ಸಿರಾಜ್ 1 ವಿಕೆಟ್ ಪಡೆದರು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಬೆಂಗಳೂರು ಆರಂಭದಲ್ಲೇ ದೇವದತ್ ಪಡಿಕ್ಕಲ್ ಅವರ ವಿಕೆಟ್ ಕಳೆದುಕೊಂಡಿತು. ಪಡಿಕ್ಕಲ್ ಸೊನ್ನೆಗೆ ಔಟಾದರು.
ಎರಡನೇ ವಿಕೆಟಿಗೆ ನಾಯಕ ಕೊಹ್ಲಿ ಶ್ರಿಕಾರ್ ಭರತ್ 68 ರನ್‍ಗಳ ಜೊತೆಯಾಟವಾಡಿದರು. ಭರತ್ 32 ರನ್( 24 ಎಸೆತ, 2 ಬೌಂಡರಿ, 2 ಸಿಕ್ಸರ್) ಹೊಡೆದರೆ ಕೊಹ್ಲಿ 51 ರನ್(42 ಎಸೆತ, 3 ಬೌಂಡರಿ, 3 ಸಿಕ್ಸರ್) ಹೊಡೆದು ಔಟಾದರು.
ಕೊನೆಯಲ್ಲಿ ಗ್ಲೇನ್ ಮ್ಯಾಕ್ಸ್ ವೆಲ್ ಮತ್ತು ಎಬಿ ಡಿವಿಲಿಯರ್ಸ್ 16 ಎಸೆತಗಳಲ್ಲಿ 35 ರನ್ ಚಚ್ಚಿದರು. ಅಂತಿಮವಾಗಿ 6 ವಿಕೆಟ್ ನಷ್ಟಕ್ಕೆ 165 ರನ್ ಗಳಿಸಿತು.