ಮುಂಬೈ: ರಾಯಲ್ಸ್ ಚಾಲೆಂಜರ್ಸ್ ತಂಡದ ನಾಯಕ ವಿರಾಟ್ ಕೊಹ್ಲಿ ಅಂಪೈರ್ ಲೋಪಕ್ಕೆ ಆಕ್ರೋಶ ವ್ಯಕ್ತಪಡಿಸಿದ ಪರಿಣಾಮ ಮುಂದಿನ ಐಪಿಎಲ್ ಆವೃತ್ತಿಯಲ್ಲಿ ನೋಬಾಲ್ ಗುರುತಿಸಲೆಂದೇ ಪ್ರತ್ಯೇಕ ಅಂಪೈರ್ ನೇಮಕವಾಗಲಿದ್ದಾರೆ.
ಮಂಗಳವಾರ ಮುಂಬೈನಲ್ಲಿ ಅಧ್ಯಕ್ಷ ಬ್ರಿಜೇಶ್ ಪಟೇಲ್ ನೇತೃತ್ವದಲ್ಲಿ ನಡೆದ ಐಪಿಎಲ್ ಆಡಳಿತ ಸಭೆಯಲ್ಲಿ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆದಿದ್ದು, ಈ ಸಭೆಯಲ್ಲಿ ನೋಬಾಲ್ ಗಮನಿಸಲೆಂದೇ ಪ್ರತ್ಯೇಕ ಅಂಪೈರ್ ನಿಯೋಜಿಸಲು ನಿರ್ಧಾರ ತೆಗೆದುಕೊಳ್ಳಲಾಯಿತು.
Advertisement
Advertisement
ನೋಬಾಲ್ ಗಮನಿಸಲು ಪ್ರತ್ಯೇಕ ಅಂಪೈರ್ ನೇಮಕಕ್ಕೆ ಐಪಿಎಲ್ ಮುಂದಾಗಿದ್ದು ಯಾಕೆ ಎನ್ನುವುದಕ್ಕೆ ಅಧಿಕೃತ ಕಾರಣ ಸಿಗದೇ ಇದ್ದರೂ ಕಳೆದ ಬಾರಿ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ ಅಂಪೈರ್ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದ್ದನ್ನು ಗಂಭೀರವಾಗಿ ಪರಿಗಣಿಸಿರುವ ಐಪಿಎಲ್ ಆಡಳಿತ ಮಂಡಳಿ ಈ ನಿರ್ಧಾರಕ್ಕೆ ಬಂದಿದೆ ಎನ್ನಲಾಗುತ್ತಿದೆ.
Advertisement
ಸಭೆಯ ಬಳಿಕ ಮಾತನಾಡಿದ ಅಧಿಕಾರಿಯೊಬ್ಬರು, ಮುಂದಿನ ಐಪಿಎಲ್ ಆವೃತ್ತಿಯಲ್ಲಿ ಅಂಪೈರ್ ಅಲ್ಲದೇ ನೋಬಾಲ್ ಗಮನಿಸಲೆಂದೇ ಅಂಪೈರ್ ಇರಲಿದ್ದಾರೆ. ಈ ಕಲ್ಪನೆ ನಿಮಗೆ ಸ್ವಲ್ಪ ವಿಚಿತ್ರ ಎನಿಸಬಹುದು. ಈ ವಿಚಾರದ ಬಗ್ಗೆ ಮೊದಲ ಐಪಿಎಲ್ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ ಎಂದು ತಿಳಿಸಿದರು.
Advertisement
ನೋಬಾಲ್ ಗಮನಿಸಲು ನಾವು ತಂತ್ರಜ್ಞಾನವನ್ನು ಬಳಸಿಕೊಳ್ಳುತ್ತೇವೆ. ಈ ಅಂಪೈರ್ ಮೂರು ಅಥವಾ ನಾಲ್ಕನೇಯ ಅಂಪೈರ್ ಅಲ್ಲ ಎಂದು ಅಧಿಕಾರಿ ವಿವರಿಸಿದರು.
ಪವರ್ ಪ್ಲೇಯರ್ ಕಲ್ಪನೆಗೆ ತಡೆ:
2020ರ ಐಪಿಎಲ್‌ನಲ್ಲಿ ಪವರ್ ಪ್ಲೇಯರ್ ಕಲ್ಪನೆ ಜಾರಿಗೆ ಬರಲಿದೆ ಎನ್ನುವ ಸುದ್ದಿ ಹಬ್ಬಿತ್ತು. ಆದರೆ ಸಮಯದ ಅಭಾವದಿಂದಾಗಿ ಈ ಕಲ್ಪನೆಯನ್ನು ಕೈಬಿಡಲಾಗಿದೆ. ಇದನ್ನೂ ಓದಿ: ಐಪಿಎಲ್‌ನಲ್ಲಿ ಪವರ್ ಪ್ಲೇಯರ್ – ಕೊನೆಯ ಓವರಿನಲ್ಲಿ ಪಂದ್ಯದ ಫಲಿತಾಂಶವೇ ಬದಲಾಗುತ್ತೆ
ಅಂದು ಏನಾಗಿತ್ತು?
ಮಾರ್ಚ್ 28 ರಂದು ಬೆಂಗಳೂರಿನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ 8 ವಿಕೆಟ್ ನಷ್ಟಕ್ಕೆ 187 ರನ್ ಗಳಿಸಿತ್ತು. ಈ ಗುರಿ ಬೆನ್ನಟ್ಟಿದ್ದ ಬೆಂಗಳೂರು ತಂಡಕ್ಕೆ ಕೊನೆಯ ಓವರಿನಲ್ಲಿ 17 ರನ್ ಬೇಕಿತ್ತು. ಕ್ರೀಸಿನಲ್ಲಿ ಎಬಿಡಿ ವಿಲಿಯರ್ಸ್ 68 (39 ಎಸೆತ) ರನ್ ಗಳಿಸಿದ್ದರೆ ಶಿವಂ ದುಬೆ 1 ರನ್ ಗಳಿಸಿದ್ದರು. ಮಾಲಿಂಗ ಎಸೆದ ಕೊನೆಯ ಓವರಿನ ಮೊದಲ ಎಸೆತವನ್ನು ದುಬೆ ಸಿಕ್ಸರ್‌ಗೆ ಅಟ್ಟಿದ್ದರು. ಒಟ್ಟು ಐದು ಎಸೆತಗಳಲ್ಲಿ 10 ರನ್ ಬಂದಿತ್ತು. ಕೊನೆಯ ಎಸೆತದಲ್ಲಿ ಜಯಗಳಿಸಲು 7 ರನ್ ಬೇಕಿತ್ತು. ಮಾಲಿಂಗ ಎಸೆದ ಕೊನೆಯ ಎಸೆತದಲ್ಲಿ ದುಬೆ ಬಲವಾಗಿ ಹೊಡೆದರೂ ಬಾಲ್ ಬ್ಯಾಟಿಗೆ ತಾಗದ ಕಾರಣ ಯಾವುದೇ ರನ್ ಬಂದಿರಲಿಲ್ಲ. ಆದರೆ ಟಿವಿ ರಿಪ್ಲೇಯಲ್ಲಿ ಮಾಲಿಂಗ ನೋಬಾಲ್ ಎಸೆದಿದ್ದು ಸ್ಪಷ್ಟವಾಗಿತ್ತು. ಹೀಗಾಗಿ ಮುಂದಿನ ಎಸೆತ ಫ್ರೀ ಹಿಟ್ ಆಗಬೇಕಿತ್ತು. ಆದರೆ ಅಂಪೈರ್ ರವಿ ನೋಬಾಲ್ ನೀಡದ ಪರಿಣಾಮ ಮುಂಬೈ ತಂಡ 6 ರನ್‌ಗಳಿಂದ ಪಂದ್ಯವನ್ನು ಗೆದ್ದುಕೊಂಡಿತ್ತು.
ಕೊಹ್ಲಿ ಹೇಳಿದ್ದು ಏನು?
ಪಂದ್ಯದ ಬಳಿಕ ಕೊಹ್ಲಿ ಮಾತನಾಡಿ, ನಾವು ಐಪಿಎಲ್ ಪಂದ್ಯ ಆಡುತ್ತಿದ್ದೇವೆ ಹೊರತು ಕ್ಲಬ್ ಕ್ರಿಕೆಟ್ ಆಡುತ್ತಿಲ್ಲ. ಅಂಪೈರ್ ಗಳು ಕಣ್ಣನ್ನು ತೆರೆದು ಗಮನಿಸುತ್ತಿರಬೇಕು. ಅಂಪೈರ್ ನೋಬಾಲ್ ನೀಡುತ್ತಿದ್ದರೆ ಪಂದ್ಯದ ಫಲಿತಾಂಶವೇ ಬದಲಾಗುವ ಸಾಧ್ಯತೆ ಇತ್ತು. ನೋಬಾಲ್ ಮತ್ತು ಫ್ರೀ ಹಿಟ್ ನೀಡಿದ್ದರೆ ನಾವು ಗೆಲ್ಲುವ ಸಾಧ್ಯತೆ ಇತ್ತು. ಅಂಪೈರ್ ನಿರ್ಲಕ್ಷ್ಯದಿಂದ ಎಲ್ಲ ಹಾಳಾಯಿತು. ಅಂಪೈರ್ ಗಳು ಮೈದಾನದಲ್ಲಿ ಜಾಗೃತೆಯಿಂದ ಕರ್ತವ್ಯ ನಿರ್ವಹಿಸಬೇಕು ಎಂದು ಆಕ್ರೋಶ ಹೊರಹಾಕಿದ್ದರು.
ಮೈದಾನ ಪ್ರವೇಶಿಸಿದ್ದ ಧೋನಿ:
ರಾಜಸ್ಥಾನ ಮತ್ತು ಚೆನ್ನೈ ತಂಡದ ವೇಳೆಯೂ ಅಂಪೈರ್ ನೋಬಾಲ್ ನೀಡಿರಲಿಲ್ಲ. ಈ ವೇಳೆ ನಾಯಕ ಧೋನಿ ಮೈದಾನ ಪ್ರವೇಶಿಸಿ ಅಂಪೈರ್ ಜೊತೆ ಜಗಳವಾಡಿದ್ದರು. ಅಂಪೈರ್ ಎಡವಟ್ಟುಗಳಿಂದ ಪದೇ ಪದೇ ಮುಜುಗರಕ್ಕೆ ಒಳಗಾಗುತ್ತಿರುವ ಹಿನ್ನೆಲೆಯಲ್ಲಿ ಈ ಪ್ರಮಾದ ಆಗದಂತೆ ತಡೆಯಲು ನೋಬಾಲ್ ಗಮನಿಸಲೆಂದೇ ಪ್ರತ್ಯೇಕ ಅಂಪೈರ್ ನಿಯೋಜಿಸಲು ಐಪಿಎಲ್ ಆಡಳಿತ ಮಂಡಳಿ ಮುಂದಾಗಿದೆ.