ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ 13ನೇ ಆವೃತ್ತಿಗೆ ಕೊರೊನಾ ವೈರಸ್ ಕರಿ ನೆರಳು ಬಿದ್ದು, ರದ್ದಾಗುವ ಹಂತಕ್ಕೆ ಬಂದು ನಿಂತಿದೆ. ಈ ಬಾರಿಯ ಐಪಿಎಲ್ ರದ್ದಾದರೆ ಫ್ರಾಂಚೈಸ್‍ಗಳಿಗೆ ನಷ್ಟವಾಗುವುದು ಅಷ್ಟೇ ಅಲ್ಲದೆ ಭಾರತದ ಮೂರು ಆಟಗಾರರ ಭವಿಷ್ಯದ ಮೇಲೆ ಕೆಟ್ಟ ಪರಿಣಾಮ ಬೀರುವ ಸಾಧ್ಯತೆ ಇದೆ.
ಕೊರೊನಾ ವೈರಸ್ ಏಕಾಏಕಿ ವಿಶ್ವದಾದ್ಯಂತದ ಪ್ರಮುಖ ಕ್ರೀಡಾಕೂಟಗಳನ್ನು ರದ್ದುಗೊಳಿಸುವಂತೆ ಮಾಡಿದೆ. ಮಾರಕ ವೈರಸ್‍ನಿಂದಾಗಿ ಐಪಿಎಲ್ 2020 ರದ್ದಾಗುವ ಸಾಧ್ಯತೆ ಹೆಚ್ಚಾಗಿದೆ. ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಐಪಿಎಲ್ ಟೂರ್ನಿ ನಡೆಸುವ ಆಶಯವನ್ನು ಹೊಂದಿದ್ದು, ಏಪ್ರಿಲ್ 15ರ ಬಳಿಕ ಇಲ್ಲವೇ ಜೂನ್-ಸೆಪ್ಟಂಬರ್ ನಡುವೆ ವೇಳಾಪಟ್ಟಿ ನಿಗದಿಪಡಿಸಲು ಸಜ್ಜಾಗಿದೆ.
Advertisement
Advertisement
ಟೂರ್ನಿ ನಡೆಯದಿದ್ದರೆ ಬಿಸಿಸಿಐ ಮಾತ್ರವಲ್ಲದೆ ಆಟಗಾರರು ಸಹ ಹೆಚ್ಚಿನ ಪರಿಣಾಮ ಎದುರಿಸಲಿದ್ದಾರೆ. ಅವರಲ್ಲಿ ಕೆಲವರು ಬೃಹತ್ ಮೊತ್ತದ ಹಣ ಪಡೆಯುವುದನ್ನು ತಪ್ಪಿಸಿಕೊಳ್ಳುತ್ತಾರೆ. ಜೊತೆಗೆ ಮುಂದಿನ ಆವೃತ್ತಿ ಹಾಗೂ ಇತರ ವೇದಿಕೆಯನ್ನು ತಪ್ಪಿಸಿಕೊಳ್ಳುತ್ತಾರೆ. ಐಪಿಎಲ್‍ನಲ್ಲಿ ಆಟಗಾರರು ತೋರುವ ಫಾರ್ಮ್ ಟೀಂ ಇಂಡಿಯಾ ಆಯ್ಕೆಗೆ ವೇದಿಕೆ ಆಗಿರುತ್ತದೆ. ಈ ಸಾಲಿನಲ್ಲಿ ಮೂರು ಆಟಗಾರರಿದ್ದು, ಐಪಿಎಲ್ 2020 ರದ್ದಾದರೆ ಅವರು ಸಂಕಷ್ಟಕ್ಕೆ ಸಿಲುಕಬಹುದು ಎನ್ನಲಾಗುತ್ತಿದೆ.
Advertisement
ಎಂ.ಎಸ್.ಧೋನಿ:
ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಜುಲೈ 2019ರಿಂದ ಯಾವುದೇ ರೀತಿಯ ಕ್ರಿಕೆಟ್ ಆಡಿಲ್ಲ. ಹೀಗಾಗಿ ಟೀಂ ಇಂಡಿಯಾ ಆಯ್ಕೆ ಸಮಿತಿಯು ಅವರನ್ನು ನೇರವಾಗಿ ಆಯ್ಕೆ ಮಾಡಲು ಸಾಧ್ಯವಿಲ್ಲ. ಒಂದು ವೇಳೆ ನೇರ ಆಯ್ಕೆ ಕೊಟ್ಟರೆ ಈಗಾಗಲೇ ಅಭ್ಯಾಸ ನಡೆಸುತ್ತಿರುವ ಇತರ ಆಟಗಾರರಿಗೆ ಅನ್ಯಾಯವಾಗುತ್ತದೆ. ಎಂ.ಎಸ್.ಧೋನಿ ಅವರು ಕೆಲವು ಸ್ಪರ್ಧಾತ್ಮಕ ಕ್ರಿಕೆಟ್ ಆಡುವವರೆಗೂ ಆಯ್ಕೆಯಿಂದ ದೂರವಿರುತ್ತಾರೆ ಎನ್ನಲಾಗುತ್ತಿದೆ.
Advertisement
ಈ ನಡುವೆ ಭಾರತದ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಅವರು, ಎಂ.ಎಸ್.ಧೋನಿ ಮತ್ತೆ ತಂಡಕ್ಕೆ ಮರಳುವ ಸಾಧ್ಯತೆಗಳೇ ಇಲ್ಲ ಎಂದು ಹೇಳಿದ್ದಾರೆ. ಎಂ.ಎಸ್.ಧೋನಿ ಅಂತರರಾಷ್ಟ್ರೀಯ ಕ್ರಿಕೆಟ್‍ಗೆ ಕಮ್‍ಬ್ಯಾಕ್ ಮಾಡುತ್ತಾರೆ ಅಂತ ಅಭಿಮಾನಿ ನಿರೀಕ್ಷೆ ಹೊಂದಿದ್ದರು. ಐಪಿಎಲ್‍ನಲ್ಲಿ ಮಿಂಚಿದರೆ, ಉತ್ತಮ ಪ್ರದರ್ಶನ ನೀಡಿದರೆ ಐಸಿಸಿ ಟಿ20 ವಿಶ್ವಕಪ್‍ಗೆ ಧೋನಿ ಮರಳುತ್ತಾರೆ ಎನ್ನಲಾಗುತ್ತಿತ್ತು. ಆದರೆ ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಐಪಿಎಲ್ ರದ್ದಾಗುವ ಸಾಧ್ಯತೆ ಹೆಚ್ಚಾಗುತ್ತಿದೆ.
ಎಂ.ಎಸ್.ಧೋನಿ ಐಪಿಎಲ್ 13ನೇ ಆವೃತ್ತಿ ಆರಂಭಕ್ಕಾಗಿ ಕಾಯುತ್ತಿದ್ದರು. ಈ ನಿಟ್ಟಿನಲ್ಲಿ ಚೆನ್ನೈನಲ್ಲಿ ಅಭ್ಯಾಸ ಕೂಡ ಆರಂಭಿಸಿದ್ದರು. ಆದರೆ ಟೂರ್ನಿಯನ್ನು ಏಪ್ರಿಲ್ 15ರವರೆಗೆ ರದ್ದುಗೊಳಿಸುತ್ತಿದ್ದಂತೆ ಧೋನಿ ತವರಿಗೆ ಮರಳಿದರು.
ಪೃಥ್ವಿ ಶಾ:
ಟೀಂ ಇಂಡಿಯಾ ಯುವ ಆಟಗಾರ ಪೃಥ್ವಿ ಶಾ ಅವರು ಈವರೆಗೂ ಅಂತರರಾಷ್ಟ್ರೀಯ ಟಿ20 ಪಂದ್ಯ ಆಡಿಲ್ಲ. ಈ ಅವಕಾಶ ಪಡೆದುಕೊಳ್ಳಲು ಅವರು ಐಪಿಎಲ್‍ನಲ್ಲಿ ಉತ್ತಮ ಪ್ರದರ್ಶನ ನೀಡುವುದ ಅಗತ್ಯವಾಗಿದೆ. ಆರಂಭಿಕ ಆಟಗಾರ ಶಿಖರ್ ಧವನ್ ಗಾಯಗೊಂಡಿದ್ದಾರೆ. ಹೀಗಾಗಿ ಆಯ್ಕೆ ಸಮಿತಿಯು ಟಿ20 ಪಂದ್ಯಗಳ ಓಪನರ್ ಆಟಗಾರರಿಗೆ ಹುಡುಕಾಟ ನಡೆಸಿದೆ.
ಪೃಥ್ವಿ ಶಾ ಈ ಬಾರಿಯ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿದರೆ ತಮ್ಮ ಚೊಚ್ಚಲ ಅಂತರರಾಷ್ಟ್ರೀಯ ಟಿ20 ಪಂದ್ಯ ಆಡಬಹುದಾಗಿದೆ. ಆದರೆ ಆಯ್ಕೆ ಸಮಿತಿಯು ಧವನ್ ಅವರನ್ನು ಉಳಿಸಿಕೊಳ್ಳುವ ಸಾಧ್ಯತೆಗಳಿದೆ. ಹೀಗಾಗಿ ಶಾ ಅವಕಾಶ ತಪ್ಪಿಸಿಕೊಳ್ಳಬಹುದು. ಕೆ.ಎಲ್.ರಾಹುಲ್ ಮತ್ತು ರೋಹಿತ್ ಶರ್ಮಾ ಅವರನ್ನು ಆರಂಭಿಕರನ್ನಾಗಿ ಮೈದಾನಕ್ಕೆ ಇಳಿಸಲು ಸಾಧ್ಯತೆ ಹೆಚ್ಚಾಗಿದೆ. ಇದರಿಂದಾಗಿ ಧವನ್ ಅವರಿಗೆ ವಿಶ್ರಾಂತಿ ಕೊಡುವ ವಾತಾವರಣವೂ ಸೃಷ್ಟಿಯಾಗಬಹುದು.
ಸಂಜು ಸ್ಯಾಮ್ಸನ್:
ನ್ಯೂಜಿಲೆಂಡ್ ವಿರುದ್ಧ ನಡೆದ ಟಿ20 ಸರಣಿಯಲ್ಲಿ ಎರಡು ಪಂದ್ಯಗಳಿಗಾಗಿ ಆಡುವ ಇಲೆವೆನ್‍ನಲ್ಲಿ ಸಂಜು ಸ್ಯಾಮ್ಸನ್ ಅವರನ್ನು ಆಯ್ಕೆ ಮಾಡಲಾಗಿತ್ತು. ಈ ಮೂಲಕ ತಂಡದ ಆಡಳಿತವು ರಿಷಭ್ ಪಂತ್ ಅವರಿಗೆ ಸ್ಪಷ್ಟ ಎಚ್ಚರಿಕೆಯನ್ನು ರವಾನಿಸಿತ್ತು. ಭವಿಷ್ಯದಲ್ಲಿ ಸ್ಯಾಮ್ಸನ್ ತಮ್ಮ ಸ್ಥಾನವನ್ನು ಉಳಿಸಿಕೊಳ್ಳಲು ಅವಕಾಶ ನೀಡಲಾಗಿತ್ತಾದರೂ ಅವರು ವಿಫಲರಾಗಿದ್ದರು.
ಐಪಿಎಲ್‍ನಲ್ಲಿ ಉತ್ತಮ ಪ್ರದರ್ಶನ ನೀಡಿದರೆ ಸ್ಯಾಮ್ಸನ್ ಭವಿಷ್ಯದಲ್ಲಿ ಟೀಂ ಇಂಡಿಯಾ ಸೇರುವ ಸಾಧ್ಯತೆಗಳಿವೆ. ಆದರೆ ಐಪಿಎಲ್ ನಡೆಯದಿದ್ದರೆ ಅವರು ಆಯ್ಕೆಯಿಂದ ದೂರ ಉಳಿಯಲಿದ್ದಾರೆ.