ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ರಾಜಸ್ಥಾನದ ವಿರುದ್ಧದ ಪಂದ್ಯದಲ್ಲಿ ಪಿಚ್ ಕುರಿತು ತಪ್ಪಾಗಿ ಗ್ರಹಿಸಿದ್ದೆ ನಾವು ಸೋಲಲು ಕಾರಣ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.
ಪಂದ್ಯದ ಬಳಿಕ ಮಾತನಾಡಿದ ಕೊಹ್ಲಿ. ಚಿನ್ನಸ್ವಾಮಿ ಪಿಚ್ ಸ್ಲೋ ಟರ್ನ್ ಪಡೆಯುವ ಮೂಲಕ ಬೌಲರ್ ಗಳಿಗೆ ಸಹಕಾರಿಯಾಗಲಿದೆ ಎಂದು ಗ್ರಹಿಸಿದ್ದೆವು. ಆದರೆ ಬ್ಯಾಟ್ಸ್ ಮನ್ ಗಳಿಗೆ ಸ್ವರ್ಗವಾಯಿತು. ಮೊದಲ ಇನ್ನಿಂಗ್ಸ್ ನಲ್ಲಿ ಚೆಂಡು ನೇರವಾಗಿ ಬ್ಯಾಟ್ ಸಂಪರ್ಕಕ್ಕೆ ಸಿಗುತ್ತಿತ್ತು. ಅಲ್ಲದೇ ನಾವು 200 ಪ್ಲಸ್ ರನ್ ಗುರಿ ಪಡೆಯುವ ಕುರಿತು ಯೋಚನೆ ಮಾಡಿರಲಿಲ್ಲ ಎಂದು ತಿಳಿಸಿದರು.
ಇದೇ ವೇಳೆ ಅಧಿಕ ರನ್ ನೀಡಿದ ತಮ್ಮ ತಂಡದ ಬೌಲರ್ ಗಳ ಕುರಿತು ಪ್ರತಿಕ್ರಿಯಿಸಿದ ಅವರು, ಉಮೇಶ್ ಯಾದವ್ 4 ಓವರ್ ಬೌಲ್ ಮಾಡಿ 59 ರನ್ ನೀಡಿದ್ದಾರೆ. ಆದರೆ ಪಿಚ್ ನಲ್ಲಿ ಈ ಹಿಂದೆ 400 ರನ್ ಗಳಿಸಿದ ಉದಾಹರಣೆ ಇದೆ. ಈ ಪಂದ್ಯದಲ್ಲಿ ಬೌಲರ್ ಗಳು ಹೆಚ್ಚು ಪರಿಣಾಮಕಾರಿಯಾಗಿ ಇರಬೇಕಿತ್ತು ಎಂದು ನಾನು ಹೇಳುವುದಿಲ್ಲ ಎಂದು ತಿಳಿಸಿದ್ದಾರೆ.
ಸದ್ಯ ಕೊಹ್ಲಿ ಅವರ ಈ ಹೇಳಿಕೆ ಆರ್ ಸಿಬಿ ಬೌಲರ್ ಗಳಿಗೆ ಹೊಸ ಚೈತನ್ಯ ನೀಡಿದೆ. ಯುವ ಆಟಗಾರ ಸರ್ಫರಾಜ್ ಖಾನ್ ಗೆ ಈ ಪಂದ್ಯದಲ್ಲಿ ಅವಕಾಶ ನೀಡದ ಕುರಿತು ಉತ್ತರಿಸಿದ ಕೊಹ್ಲಿ, ನಾವು ಯಾವುದೇ ಆಟಗಾರನ ಒಂದು ಪಂದ್ಯದ ಪ್ರದರ್ಶನವನ್ನು ನೋಡಿ ಆಯ್ಕೆ ಮಾಡುವುದಿಲ್ಲ. ಒಟ್ಟಾರೆ ಸಮತೋಲನ ತಂಡವನ್ನು ಆಯ್ಕೆ ಮಾಡವ ಉದ್ದೇಶ ಹೊಂದಿದ್ದೇವೆ ಎಂದು ಸ್ಪಷ್ಟಪಡಿಸಿದರು.
ಕೇವಲ 45 ಎಸೆತಗಳಲ್ಲಿ 92 ರನ್ ಸಿಡಿಸಿದ ರಾಜಸ್ಥಾನದ ತಂಡದ ಸಂಜು ಸ್ಯಾಮ್ಸನ್ ಬ್ಯಾಟಿಂಗ್ ಬಗ್ಗೆ ಮೆಚ್ಚುಗೆ ಸೂಚಿಸಿದ ಕೊಹ್ಲಿ, ಈ ರೀತಿ ಉತ್ತಮ ಪ್ರದರ್ಶನ ಭವಿಷ್ಯದಲ್ಲಿ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯಲು ಸಹಕಾರಿಯಾಗುತ್ತದೆ ಎಂದರು.