ಉಡುಪಿ: ಶ್ರೀಕೃಷ್ಣಮಠದ ಪೂಜಾಧಿಕಾರವನ್ನು ಪಲಿಮಾರು ಸ್ವಾಮೀಜಿಗಳಿಗೆ ಇಂದು ಪೇಜಾವರಶ್ರೀ ಬಿಟ್ಟುಕೊಡಲಿದ್ದಾರೆ. ಎರಡು ವರ್ಷದ ತಮ್ಮ ಪರ್ಯಾಯ ಅಧಿಕಾರಾವಧಿ ಬಗ್ಗೆ ಪಬ್ಲಿಕ್ ಟಿವಿ ಜತೆ ಮನಬಿಚ್ಚಿ ಮಾತನಾಡಿದ್ದಾರೆ.
ತಮ್ಮ ಅಧಿಕಾರಾವಧಿ ಮುಗಿಯುವಾಗ ರಾಜಕಾರಣಿಗಳು ಮನಸ್ಸಿಲ್ಲದೆ ತಮ್ಮ ಸೀಟು ಬಿಟ್ಟುಕೊಡುತ್ತಾರೆ. ಆದ್ರೆ ನಾವು ಸಂಪ್ರದಾಯಕ್ಕೆ ಬದ್ಧರು. ಮೊದಲೇ ನಿಶ್ಚಿತವಾದ ಅಧಿಕಾರ ಇದು. ರಾಜಕಾರಣಿಗಳಿಗಾದ್ರೆ ಬೇಸರವಾಗ್ತದೆ. ನಾವು ಯಾವುದೇ ಬೇಸರವಿಲ್ಲದೆ ಪೂಜಾಧಿಕಾರ ಬಿಟ್ಟುಕೊಡುತ್ತಿದ್ದೇವೆ. ರಾಜಕಾರಣಿಗಳಿಗೆ ಅಧಿಕಾರ ಬಿಡುವಾಗ ದುಃಖವಾಗುತ್ತದೆ. ನಾವು ಖುಷಿಯಿಂದ ಪೀಠಾಧಿಕಾರ ಬಿಟ್ಟು ಕೊಡುತ್ತಿದ್ದೇವೆ ಅಂತ ಹೇಳಿದ್ರು.
Advertisement
ಎರಡು ವರ್ಷದ ಪರ್ಯಾಯ ತೃಪ್ತಿಯಿದೆಯೇ?
ನಮಗೆ ಮಹಾತ್ವಾಕಾಂಕ್ಷೆ ಬಹಳ ಇತ್ತು. ಅದರಲ್ಲಿ ಕೆಲವು ಮಹತ್ವದ ಕೆಲಸಗಳು ಆಗಿದೆ. ಕನಸು ಬಹಳ ಇತ್ತು. ಮಠಕ್ಕೆ ಜಮೀನು ಖರೀದಿಸುವ ಆಸೆ ಇತ್ತು. ಆದ್ರೆ ಸಂತೃಪ್ತಿಯಿಲ್ಲ, ತೃಪ್ತಿ ಇದೆ. ಮುಂದಿನ ಸ್ವಾಮೀಜಿಗಳು ನನ್ನೆಲ್ಲಾ ಉಳಿದ ಆಕಾಂಕ್ಷೆಗಳನ್ನು, ಅವರ ಕನಸುಗಳನ್ನು ಈಡೆರಿಸುತ್ತಾರೆ ಎಂಬ ನಂಬಿಕೆಯಿದೆ ಅಂದ್ರು.
Advertisement
Advertisement
ವಿಚಾರಗಳು ವಿವಾದವಾಯ್ತು- ಪ್ರಚಾರವಾಯ್ತು:
ನಮ್ಮ ಅಧಿಕಾರಾವಧಿಯಲ್ಲಿ ಕೆಲ ವಿಚಾರಗಳು ವಿವಾದವಾಗಿದೆ. ವಿವಾದವಾದಾಗಲೇ ವಿಚಾರಗಳು ಪ್ರಚಾರವಾಗಿ ಮಹತ್ವ ಪಡೆದುಕೊಳ್ಳುವುದು. ನಮ್ಮ ನಿಲುಮೆಗಳು ಇಂತಹ ಘಟನೆಗಳಾದಾಗ ಸಮಾಜಕ್ಕೆ ಅದು ಅರ್ಥವಾಗುತ್ತದೆ. ಸಮಾಜದ ಎಲ್ಲಾ ವರ್ಗದ ಮೇಲೆ ನಮಗೆ ಪ್ರೀತಿಯಿದೆ. ಯಾರ ಮೇಲೂ ದ್ವೇಷ ಇಲ್ಲ. ಸಂವಿಧಾನ ರಚನೆ ವಿಚಾರದಲ್ಲಿ ವಿರೋಧವಿಲ್ಲ. ಅಲ್ಪಸಂಖ್ಯಾತರು, ಬಹುಸಂಖ್ಯಾತರ ನಡುವೆ ದೇಶದಲ್ಲಿ ವ್ಯತ್ಯಾಸಗಳನ್ನು ಸರ್ಕಾರಗಳು ಮಾಡುತ್ತಿದೆ. ಅಲ್ಪಸಂಖ್ಯಾತರ ಶಿಕ್ಷಣ ಸಂಸ್ಥೆಗೆ ಸಾಕಷ್ಟು ಅನುದಾನ ಇದೆ. ದಲಿತರಿಗೆ ಸರಿಯಾಗಿ ಅನುದಾನ ಸಿಗ್ತಾಯಿಲ್ಲ. ದಲಿತರ ಶಿಕ್ಷಣಕ್ಕೆ ಸರ್ಕಾರಗಳು ಒತ್ತು ಕೊಡುತ್ತಿಲ್ಲ. ಇದನ್ನು ನಾನು ಹೇಳಲು ಹೊರಟಿದ್ದೇನೆ. ನನ್ನ ವಾದ ಇಲ್ಲಿಗೆ ನಿಲ್ಲಲ್ಲ. ಜಾತಿಯ ಆಧಾರದಲ್ಲಿ ಸರ್ಕಾರ ಪಕ್ಷಪಾತ ಮಾಡುವುದು ಸರಿಯಲ್ಲ ಅಂತ ಹೇಳಿದ್ರು. ಇದನ್ನೂ ಓದಿ: ದಾಖಲೆಯ ಪರ್ಯಾಯ ಮುಗಿಸುತ್ತಿರೋ ಪೇಜಾವರಶ್ರೀ- ಇಂದು ಕೃಷ್ಣನಿಗೆ ಕೊನೆಯ ಪೂಜೆ
Advertisement
ಮೋದಿ ಕಿವಿ ಹಿಂಡಿದ ಪೇಜಾವರಶ್ರೀ:
ರಾಮಮಂದಿರ ವಿಚಾರದಲ್ಲಿ ಪೇಜಾವರರು ಮೋದಿ ಕಿವಿ ಹಿಂಡಿದ್ದಾರೆ. ರಾಜಕಾರಣಿಗಳು ಎಡವಿದಾಗ ನೋಡಿಕೊಂಡು ಸುಮ್ಮನೆ ಕುಳಿತುಕೊಳ್ಳುವುದಿಲ್ಲ. ರಾಮಮಂದಿರ ವಿಚಾರದಲ್ಲಿ ಕೋರ್ಟ್ ಹೊರಗೆ ಚರ್ಚೆ ನಡೆಸಿ ಒಂದು ನಿರ್ಧಾರಕ್ಕೆ ಬರಬೇಕು. ಲೋಕಸಭೆ, ರಾಜ್ಯಸಭೆಯಲ್ಲಿ ವಿಧೇಯಕ ತರಬೇಕು. ಸರ್ಕಾರದ ಅಧಿಕಾರದ ಪರಿಮಿತಿಯಲ್ಲಿ ವಿಶೇಷ ಪ್ರಯತ್ನ ಮಾಡಬೇಕು. ಕೇಂದ್ರ ಪ್ರಯತ್ನ ಮಾಡುತ್ತಿಲ್ಲ ಅಂತ ಜನ ಹೇಳುತ್ತಾರೆ. ಕೇಂದ್ರ ಸರ್ಕಾರ ತನ್ನ ಅಧಿಕಾರದ ಅವಧಿಯಲ್ಲಿ ಒತ್ತಡ ತಂದು ಮಂದಿರ ನಿರ್ಮಾಣವಾಗಬೇಕು ಎಂದರು.
ಪೇಜಾವರಶ್ರೀಗಳಿಗೆ ರಾಜಕೀಯ ಯಾಕೆ ಇಷ್ಟ?
ರಾಜಕಾರಣಿಗಳು ಧರ್ಮದ ವಿಚಾರದಲ್ಲಿ ಯಾಕೆ ಮೂಗು ತೂರಿಸಬೇಕು? ಸ್ವಾಮೀಜಿಗಳು ಧರ್ಮದ ಕೆಲಸ ಮಾಡುತ್ತೇವೆ. ಅವರು ಧರ್ಮದ ವಿಚಾರದಲ್ಲಿ ಮೂಗು ತೂರಿಸಿದಾಗ ನಾವು ರಾಜಕಾರಣದಲ್ಲಿ ಹಸ್ತಕ್ಷೇಪ ಮಾಡುತ್ತೇವೆ. ಧರ್ಮದ, ಮಠದ ಬಗ್ಗೆ ಮಾತನಾಡುವ ರಾಜಕಾರಣಿಗಳು ರಾಜಕೀಯದಲ್ಲಿ ತಪ್ಪು ಮಾಡಿದಾಗ ನಾವು ನಮ್ಮ ಅಭಿಪ್ರಾಯ ಹೇಳುತ್ತೇವೆ. ಪೀಠಾಧಿಪತಿಗಳು ಚುನಾವಣೆಗೆ ನಿಲ್ಲಲ್ಲ. ಹೀಗಾಗಿ ನಮಗೆ ಆಕಾಂಕ್ಷೆಗಳಿಲ್ಲ. ಆಳುವವರು ತಪ್ಪು ಮಾಡಿದಾಗ ನಾನು ಸುಮ್ಮನೆ ಕುಳಿತುಕೊಳ್ಳುವ ಪ್ರಶ್ನೆಯೇ ಇಲ್ಲ ಎಂದರು.
ವಯಸ್ಸಾಯ್ತು, ದೇಹದಲ್ಲಿ ಶಕ್ತಿಯಿಲ್ಲ:
ನನಗೆ ವಯಸ್ಸಾಯ್ತು, ಅದು ನನ್ನ ಗಮನಕ್ಕೆ ಬರುತ್ತಿದೆ. ಓಡಾಡಲು ಶಕ್ತಿ ಸಾಲದು ಎಂದು ಪೇಜಾವರಶ್ರೀ ಹೇಳಿದರು. ದೇಹದಲ್ಲಿ ದೋಷವಿದೆ, ನಡೆದಾಡಲು ಆಗುವುದಿಲ್ಲ. ಕಾರಿನಲ್ಲಿ ಓಡಾಟ ಮಾಡಿ ನನ್ನ ಧಾರ್ಮಿಕ ಮತ್ತು ಸಾಮಾಜಿಕ ಚಟುವಟಿಕೆ ಮುಂದುವರೆಸುತ್ತೇನೆ ಎಂದು ಪೇಜಾವರ ಮಠಾಧೀಶ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದ್ರು.
ಪೇಜಾವರ ಶ್ರೀಗಳು ಜನವರಿ 18ರಂದು ಪರ್ಯಾಯ ಪೀಠಾವರೋಹಣ ಮಾಡಲಿದ್ದಾರೆ. ಎರಡು ವರ್ಷಗಳ ಕಾಲ ಕಡೆಗೋಲು ಶ್ರೀಕೃಷ್ಣನ ಪೂಜೆ ಮಾಡಿದ್ದ ಪೇಜಾವರಶ್ರೀಗಳ ಪೂಜಾಧಿಕಾರ ಇಂದಿಗೆ ಮುಗಿದಿದ್ದು, ಐತಿಹಾಸಿಕ ಐದು ಪರ್ಯಾಯಗಳನ್ನು ಯಶಸ್ವಿಯಾಗಿ ಮುಗಿಸಿದ್ದಾರೆ. ಶ್ರೀಕೃಷ್ಣನ ಪೂಜಾಧಿಕಾರ ಪೇಜಾವರ ಮಠದಿಂದ ಪಲಿಮಾರು ಮಠಕ್ಕೆ ಹಸ್ತಾಂತರವಾಗಲಿದೆ.