ಬೆಂಗಳೂರು: ಬಿಡಿಎ ಆರ್ಥಿಕವಾಗಿ ಕುಸಿದಿದ್ದು, ಕಂಪ್ಯೂಟರ್ ಗಳಿಗೆ ಇಂಟರ್ ನೆಟ್ ಸಂಪರ್ಕ ಸಹ ಇಲ್ಲದೆ ಇ-ಆಡಳಿತ ವ್ಯವಸ್ಥೆ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂಬ ಮಾಹಿತಿ ಬಹಿರಂಗವಾಗಿದೆ.
ಬಿಡಿಎ ಆರ್ಥಿಕ ಕುಸಿತ ಕಂಡಿದೆ ಎಂದು ಈ ಹಿಂದಿನಿಂದಲೂ ಹೇಳಲಾಗುತ್ತಿತ್ತು. ಆದರೆ ಅದಕ್ಕೆ ಸೂಕ್ತ ಪುರಾವೆ ಸಿಕ್ಕಿರಲಿಲ್ಲ. ಇದೀಗ ಆರ್ಥಿಕ ಕುಸಿತ ಕಂಡಿರುವುದು ಜಗಜ್ಜಾಹೀರಾಗಿದ್ದು, ಇದಕ್ಕೆ ತಾಜಾ ನಿದರ್ಶನ ಎಂಬಂತೆ ಬಿಡಿಎ ಕಚೇರಿಯಲ್ಲಿನ ಕಂಪ್ಯೂಟರ್ ಗಳು ಇಂಟರ್‍ನೆಟ್ ಸಂಪರ್ಕ ಕಳೆದುಕೊಂಡಿವೆ.
Advertisement
ಬಿಡಿಎ ಈ ವರ್ಷದ ಏಪ್ರಿಲ್ ತಿಂಗಳಿನಿಂದ ಇ-ಆಡಳಿತ ವ್ಯವಸ್ಥೆಯನ್ನು ಅಳವಡಿಸಿಕೊಂಡಿದೆ. ಆದರೆ ಕಳೆದ 4 ದಿನಗಳಿಂದ ಇ-ಆಡಳಿತ ವ್ಯವಸ್ಥೆ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಕಾರಣ 2019-20ನೇ ಸಾಲಿನ ಮುಂಗಡ ಬಿಲ್ ಕಟ್ಟಿಲ್ಲ ಎಂದು ಬಿಎಸ್‍ಎನ್‍ಎಲ್ ಸಂಸ್ಥೆ ಕಳೆದ ನಾಲ್ಕು ದಿನಗಳಿಂದ ಇಂಟರ್ ನೆಟ್ ಸಂಪರ್ಕ ಕಡಿತಗೊಳಿಸಿದೆ.
Advertisement
Advertisement
ಮಾರ್ಚ್ ನಲ್ಲೇ ಬಿಡಿಎ 13 ಲಕ್ಷ ರೂಪಾಯಿಯಷ್ಟು ಇಂಟರ್‍ನೆಟ್ ಶುಲ್ಕವನ್ನು ಬಿಎಸ್‍ಎನ್‍ಎಲ್‍ಗೆ ಕಟ್ಟಬೇಕಿತ್ತು. ಸೆಪ್ಟೆಂಬರ್ ತಿಂಗಳಾಂತ್ಯ ಬಂದರೂ ಬಿಲ್ ಪಾವತಿಸದ ಕಾರಣ ಬಿಎಸ್‍ಎನ್‍ಎಲ್ ಇಂಟರ್ ನೆಟ್ ಸೇವೆಯನ್ನು ಕಡಿತಗೊಳಿಸಿದೆ. ಇದರಿಂದ ಬಿಡಿಎ ಕಚೇರಿಯಲ್ಲಿ ದೈನಂದಿನ ಕೆಲಸ ಕಾರ್ಯಗಳು ಹಳಿ ತಪ್ಪಿದಂತಾಗಿವೆ.
Advertisement
ಈ ಬಗ್ಗೆ ಬಿಡಿಎ ಕಾರ್ಯದರ್ಶಿ ಡಾ.ವಾಸಂತಿ ಅಮರ್ ಪ್ರತಿಕ್ರಿಯಿಸಿ, ಬಿಎಸ್‍ಎನ್‍ಎಲ್ ಸದ್ಯ 30 ಎಂಬಿಪಿಎಸ್ (ಮೆಗಾಬೈಟ್ ಪರ್ ಸೆಕೆಂಡ್) ಸ್ಪೀಡ್‍ನಲ್ಲಿ ಇಂಟರ್ ನೆಟ್ ಒದಗಿಸುತ್ತಿದೆ. ಆದರೆ ಆಕ್ಟ್ ಫೈಬರ್ ನೆಟ್ 100 ಎಂಬಿಪಿಎಸ್ ಸ್ಪೀಡ್‍ನಲ್ಲಿ ವರ್ಷಕ್ಕೆ ಕೇವಲ 2.75 ಲಕ್ಷದಲ್ಲಿ ಸೇವೆ ಕೊಡುತ್ತಿದೆ. ಈ ಸೇವೆ ಪಡೆಯಲು ಬಿಡಿಎ ಚಿಂತನೆ ನಡೆಸಿದೆ. ಬಿಎಸ್‍ಎನ್‍ಎಲ್ ಸೇವೆ ಸುರಕ್ಷತೆ ಎಂಬ ಕಾರಣಕ್ಕೆ ಮುಂದುವರಿಸುತ್ತೇವೆ. ಅವರಿಗೂ ಇದೇ ಸ್ಪೀಡ್‍ನಲ್ಲಿ ಇಂಟರ್ ನೆಟ್ ಸೇವೆ ನೀಡಲು ಕೋರಿದ್ದೇವೆ. ಇಂದಿನಿಂದ ಎಲ್ಲ ಸೇವೆಗಳು ಯಥಾಪ್ರಕಾರ ಮುಂದುವರಿಯುತ್ತಿವೆ ಎಂದು ಸ್ಪಷ್ಟನೆ ನೀಡಿದ್ದಾರೆ.