ದೇಹ ಮತ್ತು ಮನಸ್ಸಿನ ಸಂಯೋಗವೇ ಯೋಗ. ಭಾರತೀಯ ಯೋಗ (Yoga) ಪರಂಪರೆಯಿಂದು ವಿಶ್ವವ್ಯಾಪಿಯಾಗಿದೆ. ಭಾರತ ಮತ್ತು ಇತರ ದೇಶಗಳ ಸಂಬಂಧವನ್ನು ಆರೋಗ್ಯಪೂರ್ಣವಾಗಿಸುವ ಮಹತ್ವದ ಕಾರ್ಯವಾಗಿ ರೂಪುಗೊಂಡಿದೆ. ಯೋಗವು ಯಾವುದೇ ಜಾತಿ, ಧರ್ಮ, ಮತಕ್ಕೆ ಸೀಮಿತವಾಗದೇ ಎಲ್ಲವನ್ನೂ ಎಲ್ಲರನ್ನೂ ಮೀರಿಸುವ ವಿಶ್ವಕುಟುಂಬಿಯಾಗಿ ಹಾಗೂ ವಿಶ್ವ ಆರೋಗ್ಯಕ್ಕಾಗಿ (World Health) ಎನ್ನುವ ನಿಟ್ಟಿನಲ್ಲಿ ಸಾಕಾರಾರಗೊಂಡಿದೆ.
Advertisement
ವಿಶ್ವ ಎಂದರೇನು? ಆರೋಗ್ಯ ಎಂದರೇನು? ಎಂಬುನ್ನು ವಿಶ್ಲೇಷಿಸಿದಾಗ ಕಾಮ, ಕ್ರೋಧ, ಲೋಭ, ಮೋಹ, ಮದ ಮತ್ಸರಗಳೆಂಬ ಅರಿಷಡ್ವರ್ಗಗಳು ಹೆಚ್ಚಾಗದೆಯೇ ಯೋಗ್ಯ ಸ್ಥಿತಿಯಲ್ಲಿ ಇರುವುದೇ ಆರೋಗ್ಯ. ಆದ್ರೆ ಇದೆಲ್ಲವನ್ನೂ ಮೀರಿ ನಾವು ಸಾಧಿಸಬೇಕು ಎಂದರೆ ತಾಳ್ಮೆ ಅತ್ಯಗತ್ಯ. ಅದಕ್ಕಾಗಿ ಅತ್ಯುತ್ತಮ ಮಾರ್ಗವನ್ನು ಯೋಗ ತೋರುತ್ತದೆ. ಯೋಗವು ದೈಹಿಕ, ಮಾನಸಿಕ ಮತ್ತು ಬೌದ್ಧಿಕವಾಗಿ ಮನುಷ್ಯನನ್ನು ಗಟ್ಟಿಗೊಳಿಸುತ್ತದೆ ಎಂಬುದನ್ನು ಯೋಗಗುರುಗಳು ಹೇಳಿದ್ದಾರೆ ಮತ್ತು ನಂಬಿದ್ದಾರೆ. ಭಾರತದಲ್ಲಿ ಪ್ರಸಿದ್ಧಿ ಪಡೆದ ಈ ಯೋಗವನ್ನು ಇಂದು 190ಕ್ಕೂ ಹೆಚ್ಚು ರಾಷ್ಟ್ರಗಳು ಅಳವಡಿಸಿಕೊಂಡು ಆಚರಣೆ ಮಾಡುತ್ತಿವೆ. ವಿಶ್ವದಾದ್ಯಂತ ಜನರು ತಮ್ಮ ಮಾನಸಿಕ ಮತ್ತು ದೈಹಿಕ ಆರೋಗ್ಯ ವೃದ್ಧಿಗೆ ಯೋಗಾಭ್ಯಾಸ ಮಾಡುವುದು ಸಾಮಾನ್ಯವಾಗಿದೆ. ಯೋಗದಿಂದ ನಮ್ಮ ವೈಯಕ್ತಿಕ ಹಾಗೂ ಸಾಮಾಜಿಕ ಬದುಕು ವೃದ್ಧಿಯಾಗುತ್ತದೆ. ಮಾನವನ ಯೋಗಕ್ಷೇಮ ಕಾಪಾಡುವಲ್ಲಿ ತನ್ನದೇ ಆದ ಪ್ರಾಮುಖ್ಯತೆಯನ್ನು ಹೊಂದಿರುವ ಯೋಗದ ಮಹತ್ವವನ್ನು ತಿಳಿಸುವ ಉದ್ದೇಶದಿಂದ ಪ್ರತಿವರ್ಷ ಜೂನ್ 21ರ ದಿನವನ್ನು ಅಂತಾರಾಷ್ಟ್ರೀಯ ಯೋಗ ದಿನವನ್ನಾಗಿ (International Yoga day) ಆಚರಿಸಲಾಗುತ್ತದೆ.
Advertisement
ಈ ಬಾರಿಯ 10ನೇ ಅಂತಾರಾಷ್ಟ್ರೀಯ ಯೋಗ ದಿನದ ಥೀಮ್ (ವಸ್ತು ವಿಷಯ) ʻಸ್ವಯಂ ಮತ್ತು ಸಮಾಜಕ್ಕಾಗಿ ಯೋಗ’ (Yoga for Self and Society) ಎಂದಾಗಿದೆ. ಜೂನ್ 21 ರಂದು ಪ್ರಧಾನಿ ಮೋದಿ ಅವರು ಜಮ್ಮು ಮತ್ತು ಕಾಶ್ಮೀರದಲ್ಲಿ ಈ ವಿಶೇಷ ದಿನವನ್ನು ಆಚರಣೆ ಮಾಡಲಿದ್ದಾರೆ. ವೈಯಕ್ತಿಕ ಮತ್ತು ಸಾಮಾಜಿಕ ಯೋಗಕ್ಷೇಮವನ್ನು ಬೆಳೆಸುವಲ್ಲಿ ಯೋಗದ ಪಾತ್ರವನ್ನು ಎತ್ತಿ ತೋರಿಸುವುದು ಇದರ ಉದ್ದೇಶ.
Advertisement
Advertisement
ಕಾಶ್ಮೀರದಲ್ಲಿ ಮೋದಿ ʻಯೋಗʼ
ಈ ಬಾರಿ ಪ್ರಧಾನಿ ಮೋದಿ (Narendra Modi) ಅವರು ಯೋಗ ದಿನವನ್ನು ಜಮ್ಮು ಮತ್ತು ಕಾಶ್ಮೀರದಲ್ಲಿ (Jammu and Kashmir) ಆಚರಿಸಲಿದ್ದಾರೆ. ದೇಶದ ವಿವಿಧ ಭಾಗಗಳಿಂದ ಜಮ್ಮು ಮತ್ತು ಕಾಶ್ಮೀರಕ್ಕೆ ಸುಮಾರು 7 ಸಾವಿರಕ್ಕೂ ಹೆಚ್ಚು ಜನ ಆಗಮಿಸಲಿದ್ದಾರೆ. ದಾಲ್ ಸರೋವರದ ದಡದಲ್ಲಿ ಯೋಗ ದಿನ ಆಚರಿಸಲು ನಿರ್ಧರಿಸಲಾಗಿದೆ. ಮುಖ್ಯ ಕಾರ್ಯಕ್ರಮವು ಶ್ರೀನಗರದ ಶೇರ್–ಇ–ಕಾಶ್ಮೀರ್ ಅಂತಾರಾಷ್ಟ್ರೀಯ ಸಮ್ಮೇಳನ ಕೇಂದ್ರದಲ್ಲಿ ನಡೆಯಲಿದೆ.
ಯೋಗ ಅಸ್ವಿತ್ತಕ್ಕೆ ಬಂದಿದ್ದು ಯಾವಾಗ?
ಯೋಗಕ್ಕೆ ಸರಿಸುಮಾರು 2,500 ವರ್ಷಗಳ ಪುರಾತನ ಇತಿಹಾಸವಿದೆ. ನಾಗರಿಕತೆಯ ಆರಂಭದಿಂದಲೂ ಯೋಗವನ್ನು ಅಭ್ಯಾಸ ಮಾಡಲಾಗುತ್ತಿತ್ತು ಎಂದು ಹೇಳಲಾಗುತ್ತದೆ. ಯಾವುದೇ ಧರ್ಮ, ನಂಬಿಕೆಗಳು ಅಸ್ತಿತ್ವಕ್ಕೆ ಬರುವ ಮೊದಲೇ ಯೋಗ ಅಸ್ತಿತ್ವಕ್ಕೆ ಬಂದಿತು ಎಂಬುದು ನಂಬಿಕೆ. ಭಗವಾನ್ ಶಿವನನ್ನು ಯೋಗ ಪುರಾಣಗಳಲ್ಲಿ ಮೊದಲ ಯೋಗಿ ಅಥವಾ ಆದಿಯೋಗಿ ಎಂದು ಪರಿಗಣಿಸಲಾಗಿದೆ. ಪರಮೇಶ್ವರನನ್ನು ಯೋಗದ ಮೊದಲ ಗುರು ಎಂದು ಕೂಡ ಕರೆಯಲಾಗುತ್ತದೆ. ಆದಿಯೋಗಿ ಅಂದರೆ ಶಿವನು ಸಾವಿರಾರು ವರ್ಷಗಳ ಹಿಂದೆ ಹಿಮಾಲಯದ ಕಾಂತಿ ಸರೋವರದ ತೀರದಲ್ಲಿ ಸಪ್ತಋಷಿಗಳಿಗೆ ತನ್ನ ವ್ಯಾಪಕವಾದ ಬುದ್ಧಿವಂತಿಕೆ ಧಾರೆ ಎರೆಯುತ್ತಾರೆ. ಆ ಋಷಿಗಳು ಏಷ್ಯಾ, ಮಧ್ಯಪ್ರಾಚ್ಯ, ಉತ್ತರ ಆಫ್ರಿಕಾ ಮತ್ತು ದಕ್ಷಿಣ ಅಮೆರಿಕ ಸೇರಿದಂತೆ ವಿವಿಧ ರಾಷ್ಟ್ರಗಳಲ್ಲಿ ಜಗತ್ತಿನಲ್ಲಿ ಅತ್ಯಂತ ಶಕ್ತಿಯುತವಾದ ಯೋಗ ವಿಜ್ಞಾನ ಅಂಶವನ್ನು ಹರಡುತ್ತಾರೆ. ಆಯುಷ್ ಸಚಿವಾಲಯದ ಪ್ರಕಾರ, ಸಮಕಾಲೀನ ಸಂಶೋಧಕರು ಪ್ರಪಂಚದಾದ್ಯಂತದ ಪ್ರಾಚೀನ ಸಂಸ್ಕೃತಿಗಳ ನಡುವಿನ ಗಮನಾರ್ಹ ಸಾಮ್ಯತೆಗಳನ್ನು ಗಮನಿಸಿದ್ದಾರೆ.
ಭಾರತದಲ್ಲಿ ಯೋಗ ಪ್ರಸಿದ್ಧಿ ಪಡೆದಿದ್ದು ಹೇಗೆ?
ವಿವಿಧ ದೇಶಗಳಲ್ಲಿ ಬಹಳ ಹಿಂದಿನಿಂದಲೂ ಯೋಗದ ಬಗ್ಗೆ ಅರಿವಿದ್ದರೂ ಅದರಲ್ಲಿನ ʻಆಸನʼಗಳ ಪರಿಕಲ್ಪನೆ ಇರಲಿಲ್ಲ. ನಮ್ಮ ದೇಶದ ಆಯುರ್ವೇದ ಪದ್ಧತಿಯಲ್ಲಿ ಹಲವು ಬಗೆಯ ಅನಾರೋಗ್ಯಕ್ಕೆ ಇಂತಿಂಥ ಆಸನ ಮಾಡಬೇಕು ಎಂದು ಉಲ್ಲೇಖಿಸಲಾಗಿದೆ. ಯೋಗಾಭ್ಯಾಸದಲ್ಲಿ ಇರುವ ಕೆಲವು ಆಸನಗಳನ್ನು ಮಾಡಿಯೇ ಅದೆಷ್ಟೊ ತೊಂದರೆಗಳನ್ನು ಕಡಿಮೆ ಮಾಡಿಕೊಂಡವರ ಉದಾಹರಣೆಗಳೂ ಇವೆ. 2015ರಲ್ಲಿ ಭಾರತ ಯೋಗವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಚುರ ಪಡಿಸುವ ಜೊತೆಗೆ ಯೋಗದ ವಿವಿಧ ಆಸನಗಳ ಮಹತ್ವವನ್ನೂ ಸಾರಿದೆ. ಆಸನಗಳಿಂದ ಅನಾರೋಗ್ಯ ಪರಿಹಾರ ಮಾಡಿಕೊಳ್ಳಬಹುದು ಎಂಬುದನ್ನೂ ಲೋಕಕ್ಕೆ ತಿಳಿಸಿತು. ಅಷ್ಟೇ ಅಲ್ಲ, ಧ್ಯಾನ, ಪ್ರಾಣಾಯಾಮಗಳು ದೇಹಕ್ಕೆ ಕೊಡುವ ಚೈತನ್ಯವನ್ನು ತೋರಿಸಿಕೊಟ್ಟಿತು. ಪಾಶ್ಚಾತ್ಯ ರಾಷ್ಟ್ರಗಳು ಯೋಗದ ಬಗ್ಗೆ ಆಕರ್ಷಿತರಾಗಲು ಇದೇ ಕಾರಣವೂ ಆಯಿತು. ಚರ್ಮಕ್ಕೆ ಸಂಬಂಧಪಟ್ಟ, ಆಹಾರ ಸಂಬಂಧಿ, ಮತ್ತಿತರ ಕಾಯಿಲೆಗಳಿಂದ ಪಾರಾಗಲು, ಒತ್ತಡದ ಬದುಕಿಂದ ಮುಕ್ತಿ ಪಡೆಯಲು ವಿದೇಶಿಯರು ಯೋಗದ ಬಗ್ಗೆ ಹೆಚ್ಚೆಚ್ಚು ಆಸಕ್ತಿ ತೋರಿಸಲು ಪ್ರಾರಂಭಿಸಿದರು. ಪ್ರಧಾನಿ ಮೋದಿಯವರು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ‘ಅಂತಾರಾಷ್ಟ್ರೀಯ ಯೋಗ ದಿನಾಚರಣೆ’ ಪ್ರಸ್ತಾಪವನ್ನು ಮುಂದಿಟ್ಟಿದ್ದರು. ಯಾಕಾಗಿ ಇದನ್ನ ಅಂತಾರಾಷ್ಟ್ರೀಯ ದಿನವನ್ನಾಗಿ ಆಚರಿಸಬೇಕು ಎಂಬುದಕ್ಕೆ ಸಮರ್ಥ ವಿವರಣೆಯನ್ನೂ ಭಾರತ ಕೊಟ್ಟಿದೆ. ಅದನ್ನು ವಿಶ್ವ ಸಂಸ್ಥೆ ಒಪ್ಪಿಕೊಂಡು, ಸದಸ್ಯ ರಾಷ್ಟ್ರಗಳು ಅನುಮೋದಿಸಿವೆ. ಆಗಿನಿಂದಲ ಇಲ್ಲಿಯವರೆಗೆ ಭಾರತ, ಯೋಗಕ್ಕೆ ಸಂಬಂಧಪಟ್ಟ ಹಲವು ಕಾರ್ಯಕ್ರಗಳನ್ನು ಆಯೋಜಿಸುತ್ತಿದೆ. ವಿದೇಶಗಳಲ್ಲೂ ಯೋಗದ ಕಾರ್ಯಕ್ರಮಗಳನ್ನು ಹಮ್ಮಿಕೊಂಡು, ಅದರ ಮಹತ್ವವನ್ನು ಸಾರುತ್ತಿದೆ.