– ವಿವಿಧ ಕ್ಷೇತ್ರಗಳಲ್ಲಿ ಮಿಂಚಿದ ವನಿತೆಯರಿಗೆ ಸನ್ಮಾನ
ಬೆಂಗಳೂರು: ಅಕ್ಕರೆಯ ಅಮ್ಮನಾಗಿ, ಮುದ್ದಿನ ಮಗಳಾಗಿ, ಮನೆ ಬೆಳಗುವ ಮಮತಾಮಯಿ ಮಹಿಳೆ ಇಂದು ಎಲ್ಲಾ ಕ್ಷೇತ್ರಗಳಲ್ಲಿಯೂ ಹೆಜ್ಜೆ ಇಟ್ಟು ಸಾಧನೆ ಮಾಡಿದ್ದಾಳೆ. ಸಾಧನೆ ಮಾಡಿದ ಸಾಧಕಿಯರನ್ನು ಸನ್ಮಾನಿಸಿದರೆ ಮತ್ತಷ್ಟು ಮಂದಿಗೆ ಆ ಸಾಧನೆ ಪ್ರೇರಣೆಯಾಗುತ್ತದೆ. ಈ ಕಾರಣಕ್ಕೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಹತ್ತು ಮಂದಿ ಸಾಧಕಿಯರನ್ನು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ (International Women’s Day) ಈ ವಿಶೇಷ ದಿನದಂದು ಪಬ್ಲಿಕ್ ಟಿವಿ ʼನಾರಿ ನಾರಾಯಣಿʼ ಪ್ರಶಸ್ತಿ ನೀಡಿ ಗೌರವಿಸಿತು.
Advertisement
ಕೆನರಾ ಬ್ಯಾಂಕ್ ಹಾಗೂ ಕೆಎಂಎಫ್ ಸಹಯೋಗದೊಂದಿಗೆ ಪಬ್ಲಿಕ್ ಟಿವಿ (PUBLiC TV) ಬೆಂಗಳೂರಿನ ಯವನಿಕ ಆಡಿಟೋರಿಯಂನಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಿತ್ತು. ಈ ವೇಳೆ ಮಾತನಾಡಿದ ಹೆಚ್‌ಆರ್ ರಂಗನಾಥ್ (HR Ranganath), ಎಲೆ ಮರೆಕಾಯಿಯಂತೆ ಸಾಧನೆಗೈಯುತ್ತಿರುವ ಹತ್ತು ಜನ ಮಹಿಳೆಯರ ಸಾಧನೆಗೆ ನಾವು ಹೆಮ್ಮೆ ಪಡಬೇಕು. ಇವರೆಲ್ಲರೂ ನಾರಿ ನಾರಾಯಣಿಯ (Nari Narayani) ಪ್ರತಿನಿಧಿಯಾಗಿದ್ದಾರೆ ಎಂದು ಬಣ್ಣಿಸಿದರು.
Advertisement
ನಾರಿ ನಾರಾಯಣಿ ಪ್ರಶಸ್ತಿ ಪಡೆದ ಸಾಧಕಿಯರ ವಿವರ
Advertisement
ರಾಧಿಕಾ, ಮಂಗಳೂರು
ಕೆಲವೊಮ್ಮೆ ಬದುಕಿನ ಬಡತನ, ಜೀವನ ಕಟ್ಟಿಕೊಳ್ಳುವ ಅನಿವಾರ್ಯತೆ ಜೀವನವನ್ನು ಅಸಾಧಾರಣ ಸಾಧನೆಯತ್ತ ಕೊಂಡೊಯ್ಯುತ್ತದೆ. ಇಂತಹ ಅಪರೂಪದ ಸಾಧನೆಗೆ ಸಾಕ್ಷಿಯಾದವರು ಮಂಗಳೂರು ಮೂಲದ ರಾಧಿಕಾ. ಸಾಮಾನ್ಯವಾಗಿ ಮಹಿಳೆಯರು ಅತ್ಯಂತ ಕಡಿಮೆ ಆಯ್ಕೆ ಮಾಡಿಕೊಳ್ಳುವ ಉದ್ಯೋಗ ಅಂದರೆ ಅದು ಅಂಬುಲೆನ್ಸ್ (Ambulance) ಚಾಲನೆಯ ವೃತ್ತಿ. ಆದರೆ ಈ ಗಟ್ಟಿಗಿತ್ತಿ ರಾಧಿಕಾ (Radhika) ಅಂಬುಲೆನ್ಸ್ ಚಾಲನೆಯನ್ನೇ ವೃತ್ತಿಯನ್ನಾಗಿ ಮಾಡಿಕೊಂಡ್ರು. ಬಡಕುಟುಂಬದಿಂದ ಬಂದ ಇವರು ಅಂಬುಲೆನ್ಸ್ ಚಾಲಕ ಸುರೇಶ್ ಅವರನ್ನು ಮದುವೆಯಾದರು. ಆದರೆ ಪತಿ ಅಕಾಲಿಕವಾಗಿ ಮರಣವನ್ನಪ್ಪುತ್ತಾರೆ. ಜೀವನ ಸಾಗಿಸಲು ಉದ್ಯೋಗ ಅನಿವಾರ್ಯ. ಹೀಗಾಗಿ ಪತಿಯ ವೃತ್ತಿಯನ್ನು ಮುಂದುವರಿಸುತ್ತಾರೆ. ಆರಂಭದಲ್ಲಿ ಎಲ್ಲರೂ ಹೀಯಾಳಿಸಿದವರೇ. ಅವಮಾನವನ್ನೇ ಸನ್ಮಾನವನ್ನಾಗಿ ಸ್ವೀಕರಿಸಿದ ರಾಧಿಕ ಛಲ ಬಿಡದೇ ಸ್ವಂತ ಅಂಬುಲೆನ್ಸ್ ಖರೀದಿ ಮಾಡಿದರು. ಅಷ್ಟೇ ಯಾಕೆ ಬೇರೆ ರಾಜ್ಯಗಳಿಗೂ ತಾನೇ ಅಂಬುಲೆನ್ಸ್ ಡ್ರೈವ್ ಮಾಡಿಕೊಂಡು ಹೋಗುತ್ತಾರೆ. ಅಲ್ಲದೇ ಬಡ ರೋಗಿಗಳಿಗೆ ಕಡಿಮೆ ದರದಲ್ಲಿ ಅಂಬುಲೆನ್ಸ್ ಸೇವೆಯನ್ನು ನೀಡುತ್ತಿದ್ದಾರೆ.
Advertisement
ರೂಪ ಎಂವಿ, ಬೆಂಗಳೂರು
ಚಂದ್ರಯಾನ-3 (Chandrayaan-3)ಯೋಜನೆಯಲ್ಲಿ ಡೆಪ್ಯೂಟಿ ಡೈರೆಕ್ಟರ್ ಆಗಿದ್ದವರು ನಮ್ಮ ಹೆಮ್ಮೆಯ ಕನ್ನಡತಿ ರೂಪ ಎಂವಿ. 15ಕ್ಕೂ ಹೆಚ್ಚು ವರ್ಷಗಳ ಕಾಲ ಇಸ್ರೋದಲ್ಲಿ (ISRO) ಕಾರ್ಯನಿರ್ವಹಿಸುತ್ತಿರುವ ಮೈಸೂರು ಮೂಲದ ಬೆಂಗಳೂರು ನಿವಾಸಿ ರೂಪ (Roopa MV) ಭಾರತದ ಹೆಮ್ಮೆಯ ಚಂದ್ರಯಾನ -3 ಯೋಜನೆಯಲ್ಲಿ ಡೆಪ್ಯೂಟಿ ಡೈರೆಕ್ಟರ್ ಆಗಿ ಕಾರ್ಯನಿರ್ವಹಿಸಿದ್ದರು. ಖುದ್ದು ಪ್ರಧಾನಿ ಮೋದಿಯೇ ಅಂದು ಚಂದ್ರಯಾನ-3ರಲ್ಲಿ ಭಾಗಿಯಾಗಿದ್ದ ನಾರಿಶಕ್ತಿಯನ್ನು ಅಭಿನಂದಿಸಿದ್ದರು. ಚಂದ್ರಯಾನ -3 ಮಾತ್ರವಲ್ಲ ಮಂಗಳಯಾನದ ಮಹತ್ತರ ಜವಾಬ್ಧಾರಿಯನ್ನು ಕೂಡ ಹೆಗಲಿಗೇರಿಸಿಕೊಂಡು ಕಾಲಿಗೆ ಚಕ್ರ ಕಟ್ಟಿಕೊಂಡು ಕೆಲಸ ಮಾಡಿದ್ದಾರೆ.
ಶ್ರಾವಣಿ ಪವಾರ್, ಹುಬ್ಬಳ್ಳಿ
ಬದುಕಿನಲ್ಲಿ ತಾನು ಬೆಳೆಯಬೇಕು ಸಾಧಿಸಬೇಕು ಅನ್ನೋದು ಇರುತ್ತೆ. ಆದರೆ ತನ್ನ ಜೊತೆ ಕಷ್ಟದಲ್ಲಿದ್ದವರನ್ನು ಬೆಳೆಸಿ ಅವರ ಬದುಕು ಬೆಳಗಬೇಕು ಅಂತಾ ಅಂದುಕೊಳ್ಳುವವರ ಸಂಖ್ಯೆ ಕಡಿಮೆ. ಆದರೆ ಶ್ರಾವಣಿ ಪವಾರ್ (Shravani Pawar), ಬೇರೆಯವರ ಏಳಿಗೆ ಕಂಡು ಖುಷಿ ಪಟ್ಟ ಜೀವ. ಶ್ರಾವಣಿ ಪವಾರ್ ಸೇಫ್ ಹ್ಯಾಂಡ್ 24*7 ಎನ್ನುವ ಅಪರೂಪದ ಹೆಸರಿನ ಸಂಸ್ಥೆಯನ್ನು ಹುಟ್ಟುಹಾಕಿದ್ದಾರೆ. ಹುಬ್ಬಳ್ಳಿಯಲ್ಲಿ ಆರಂಭಿಸಿದ ಸಂಸ್ಥೆ ಬೆಳೆದು ನಿಂತಿದ್ದು, ಈಗ ಬೆಂಗಳೂರಿನಲ್ಲಿಯೂ ಬ್ರಾಂಚ್ ಇದೆ. ಬಡ ಮಧ್ಯಮ ಹಾಗೂ ಅನಕ್ಷರಸ್ಥ ಮಹಿಳೆಯರ ಬದುಕಿಗೆ ಇವರು ದೇವರಂತೆ. ಸೆಕ್ಯೂರಿಟಿ ಗಾರ್ಡ್, ಹೌಸ್ ಕೀಪಿಂಗ್ ಕೆಲಸ ಹೀಗೆ ನಾನಾ ಕೆಲಸದ ತರಬೇತಿಯನ್ನು ಉಚಿತವಾಗಿ ನೀಡಿ ಕೆಲಸದ ಅನಿವಾರ್ಯತೆ ಇರುವ ಮಹಿಳೆಯರಿಗೆ ಕೆಲಸವನ್ನು ನೀಡುತ್ತಾರೆ. 2009 ರಲ್ಲಿ ಆರಂಭವಾದ ಈ ಸಂಸ್ಥೆಯಿಂದ ಸಾವಿರಾರು ಜನ ಬಡವರು ನೆಮ್ಮದಿಯಾಗಿ ಜೀವನ ಮಾಡುತ್ತಿದ್ದಾರೆ. 1000ಕ್ಕೂ ಹೆಚ್ಚು ಜನ ಮಹಿಳೆಯರು ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸವನ್ನು ಮಾಡುತ್ತಿದ್ದಾರೆ.
ವರ್ಷಾ, ಚಾಮರಾಜನಗರ
ಕಸದಿಂದ ರಸ ಅಂತಾರಲ್ಲ ಹಾಗೆ. ನಾವೆಲ್ಲ ಅನುಪಯುಕ್ತ ಅಂತಾ ಎಸೆಯುವ ವಸ್ತುವನ್ನೇ ಬಳಸಿಕೊಂಡು ಹೊಸ ಉದ್ಯೋಗವನ್ನೇ ಸೃಷ್ಟಿಸಿಕೊಂಡವರು ಚಾಮರಾಜನಗರದ ವರ್ಷಾ (Varsha). ಇವರ ಯಶೋಗಾಥೆ ನಿಜಕ್ಕೂ ಎಲ್ಲರಿಗೂ ಸ್ಫೂರ್ತಿ. ಪ್ರಧಾನಿ ಮೋದಿಯವರ (PM Modi) ಮನ್ ಕಿ ಬಾತ್‌ನಿಂದ ಪ್ರೇರಣೆಗೊಂಡು ತನ್ನ ಬದುಕಿನ ಚಿತ್ರಣವನ್ನೇ ಬದಲಾಯಿಸಿಕೊಂಡು ಅಚ್ಚರಿ ಮೂಡಿಸಿದ ಯುವತಿಯ ಕಥೆ ಇದು. ರೈತರು ಬಾಳೆಗೊನೆ ಕೊಯ್ದು, ಬಾಳೆದಿಂಡನ್ನು ಅನುಪಯುಕ್ತ ಎಂದು ಎಸೆಯುತ್ತಾರೆ. ಆದರೆ ಇದೇ ಅನುಪಯುಕ್ತ ಬಾಳೆ ದಿಂಡಿನಿಂದ ಮ್ಯಾಟ್, ಫ್ಲೋರ್ ಮ್ಯಾಟ್, ಚಾಪೆ, ಬ್ಯಾಗ್, ಪರ್ಸ್ ಗಳನ್ನು ತಯಾರಿಸಿ ಕಾಯಕವನ್ನು ಶುರುಮಾಡಿದ್ದಾರೆ ವರ್ಷಾ. ತನ್ನ ಘಟಕದಲ್ಲಿ ಐವರು ಮಹಿಳೆಯರಿಗೆ ಉದ್ಯೋಗ ನೀಡಿರುವ ವರ್ಷಾ, ಆನ್‌ಲೈನ್ ವೆಬ್‌ಸೈಟ್ ಮೂಲಕ ತಮ್ಮ ವಸ್ತುಗಳನ್ನು ಮಾರಾಟ ಮಾಡಿ ಮಾರುಕಟ್ಟೆಯನ್ನು ಸೃಷ್ಟಿಸಿಕೊಂಡಿದ್ದಾರೆ.
ಮಲ್ಲಮ್ಮ ಯಳವಾರ, ಬಿಜಾಪುರ
ಗ್ರಾಮೀಣ ಭಾಗದಲ್ಲಿ ಮಹಿಳೆಯರ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಅದ್ವೀತಿಯ ಸಾಹಸ ಮಾಡಿದ ಮಲ್ಲಮ್ಮನ (Mallamma Yalawara) ಕಹಾನಿ ಕೇಳಿದರೆ ಭೇಷ್ ಎನ್ನಲೇಬೇಕು. ಮಲ್ಲಮ್ಮ ಯಾಳವಾರ ವಿಜಯಪುರದ ನಿವಾಸಿ. ಇವರಿಗೆ ಅದೆಂಥ ದೂರದೃಷ್ಟಿ ಅಂದರೆ ಮಹಿಳೆಯರಿಗಾಗಿಯೇ ವಿಜಯಪುರದಲ್ಲಿ ಬ್ಯಾಂಕ್ ಉದ್ಯಮವನ್ನು ಧೈರ್ಯದಿಂದ ಸ್ಥಾಪಿಸಿದ್ದಾರೆ. ʼಮಹಿಳಾ ಚೈತನ್ಯ ಬ್ಯಾಂಕ್ʼ ಎಂದು ಇದಕ್ಕೆ ಹೆಸರಿಟ್ಟು ಮಹಿಳೆಯರ ಬದುಕಿಗೆ ಹೊಸ ಚೈತನ್ಯವನ್ನೇ ತುಂಬಿದ್ದಾರೆ. ಈ ಬ್ಯಾಂಕ್ ಸಂಪೂರ್ಣ ಮಹಿಳಾಮಯವಾಗಿರುವುದು ವಿಶೇಷ. ಮಹಿಳೆಯರ ಪಾಲಿಗೆ ಉದ್ಯೋಗದಾತ ಬ್ಯಾಂಕ್ ಇದು. ಬ್ಯಾಂಕ್‌ನಲ್ಲಿ ಗುಮಾಸ್ತ ಹುದ್ದೆಯಿಂದ ಹಿಡಿದು ಮ್ಯಾನೇಜರ್‌ವರೆಗೆ ಮಹಿಳಾ ಸಿಬ್ಬಂದಿಯೇ ಕಾರ್ಯನಿರ್ವಹಿಸುತ್ತಿದ್ದಾರೆ. ಅದ್ಭುತ ಸಾಧನೆ ಮಾಡಿರುವ ಮಲ್ಲಮ್ಮ ಬರೋಬ್ಬರಿ 4 ಶಾಖೆಗಳನ್ನು ವಿಜಯಪುರ ಜಿಲ್ಲೆಯಲ್ಲಿ ತೆರೆದಿದ್ದಾರೆ. ಸಾವಿರಾರು ಕೋಟಿ ವಹಿವಾಟು ನಡೆಸಿ ಈ ಬ್ಯಾಂಕ್ ಸದೃಢವಾಗಿದೆ.
ಬಿಂದು, ಬೆಂಗಳೂರು
ನಾರಿಶಕ್ತಿಯ ಅದ್ಭುತ ಸಾಧನೆ, ಎಲ್ಲರ ಪಾಲಿಗೂ ಸ್ಫೂರ್ತಿ, ಈ ಸ್ಫೂರ್ತಿಯ ಹಾದಿಯಲ್ಲಿ ಗಟ್ಟಿಯಾಗಿ ನಿಲ್ಲುವವರು ಅಂದರೆ ಬೆನಕ ಗೋಲ್ಡ್ (Benaka Gold) ಕಂಪನಿಯ ನಿರ್ದೇಶಕಿ ಬಿಂದು ಎಲ್.ಎ.ಯವರು. ದೂರದೃಷ್ಟಿ, ಸಾಧಿಸುವ ಛಲ, ಹೊಸತನ, ನಾಯಕತ್ವದ ಅದ್ಭುತ ಗುಣದ ಮೂಲಕ ಚಿನ್ನಾಭರಣ ಉದ್ಯಮದಲ್ಲಿ ಕ್ರಾಂತಿಯನ್ನೇ ಸೃಷ್ಟಿಸಿದವರು ಬೆನಕ ಗೋಲ್ಡ್ ಕಂಪನಿಯ ನಿರ್ದೇಶಕಿ ಬಿಂದು. ಬೆನಕ ಗೋಲ್ಡ್ ಕಂಪನಿ ಗ್ರಾಹಕರ ಮನಸ್ಸಿನಲ್ಲಿ ಇಂದು ನಂಬಿಕೆಯ ಸಂಸ್ಥೆಯಾಗಿ ನೆಲೆವೂರಲು ಕಾರಣವಾಗಿದ್ದು, ಬಿಂದುರವರ (Bindu) ಸಾಧನೆಗೆ ಹಿಡಿದ ಕೈಗನ್ನಡಿ. ಎಪಿಎಸ್ ಕಾಲೇಜ್ ಆಫ್ ಕಾಮರ್ಸ್ ಮತ್ತು ಎಸ್ ಆರ್ ಎನ್ ಆದರ್ಶ ಕಾಲೇಜಿನ ಹೆಮ್ಮೆಯ ಹಳೆಯ ವಿದ್ಯಾರ್ಥಿಯಾಗಿರುವ ಬಿಂದು, ಯಶಸ್ವಿ ಉದ್ಯಮಿಯಾಗಿ ಬೆನಕ ಗೋಲ್ಡ್ ಕಂಪನಿಯನ್ನು ಮುನ್ನಡೆಸುತ್ತಿದ್ದಾರೆ. ಇವರಿಗೆ ರಾಷ್ಟ್ರೀಯ ಮಹಿಳಾ ಸಾಧಕಿ -2023ರ ಪ್ರಶಸ್ತಿಯೂ ಸಿಕ್ಕಿದೆ.
ಶೀತಲ್, ಬೆಂಗಳೂರು
ಕೆಲವರ ಬದುಕಿನ ಸಾಧನೆ ಬೇರೆಯವರ ಬದುಕಿಗೂ ಬೆಳಕಾಗಬಲ್ಲದು. ಶಿಕ್ಷಣ ಕ್ಷೇತ್ರದಲ್ಲಿ ಹೊಸ ಬದಲಾವಣೆಯ ಮೂಲಕ ಕ್ರಾಂತಿಯ ಹೆಜ್ಜೆ ಇಟ್ಟ ಕೇಂಬ್ರಿಡ್ಜ್ ಸ್ಕೂಲ್‌ನ (Chembridge School) ನಿರ್ದೇಶಕಿ ಶೀತಲ್ (Sheetal) ಸಾಧನೆ ನಿಜಕ್ಕೂ ಅಪರೂಪ ಅನನ್ಯ. ಶಿಕ್ಷಣ ಎಂದರೆ ಬರೀ ಪುಸ್ತಕದ ಪಾಠವನ್ನು ಕಲಿಸೋದು ಮಾತ್ರವಲ್ಲ, ಮಕ್ಕಳ ವ್ಯಕ್ತಿತ್ವ ವಿಕಸನ, ಶಿಸ್ತು ಬದ್ಧತೆಯನ್ನು ಕಲಿಸಿ ಜವಾಬ್ಧಾರಿಯುತ ನಾಗರಿಕರನ್ನಾಗಿ ಸಮಾಜದಲ್ಲಿ ರೂಪಿಸುವುದು ಅಂತಾ ನಂಬಿಕೆಯಿಟ್ಟವರು. 2012ರಲ್ಲಿ ಈ ಶಿಕ್ಷಣ ಸಂಸ್ಥೆಗೆ ಸಾರಥಿಯಾದ ಶೀತಲ್ ಬೋಧನೆ ಮತ್ತು ಕಲಿಕೆಯಲ್ಲಿ ಅಮೂಲಾಗ್ರ ಬದಲಾವಣೆ ತರಲು ನಿರಂತರ ಶ್ರಮ ಪಡುತ್ತಿದ್ದಾರೆ. ಶಿಕ್ಷಣದಲ್ಲಿ ಹೊಸ ಹೊಸ ತಂತ್ರಜ್ಞಾನ, ಪ್ರಾಯೋಗಿಕ ತರಗತಿಯನ್ನು ನಡೆಸಿ ವಿದ್ಯಾರ್ಥಿಗಳನ್ನು ಸದಾ ಚಟುವಟಿಕೆಯಿಂದ ಇರುವಂತೆ ಮಾಡುವಲ್ಲಿ ಶೀತಲ್ ಪ್ರಮುಖ ಪಾತ್ರವಹಿಸಿದ್ದು, ವಿದ್ಯಾರ್ಥಿಗಳಿಗೆ ಇವರನ್ನು ಕಂಡರೆ ಅಚ್ಚುಮೆಚ್ಚು.
ಆಶಾ ಸತೀಶ್, ಬೆಂಗಳೂರು
ನಾಯಕತ್ವ, ಹೊಸತನಕ್ಕೆ ತುಡಿಯುವ ಮನಸಿನ ಆಶಾ ಸತೀಶ್ ಆರ್ಕಿಟೆಕ್ಟ್ ಕ್ಷೇತ್ರದಲ್ಲಿ ಸಾಧನೆಗೈದು ಅದೆಷ್ಟೋ ಮಹಿಳೆಯರಿಗೆ ಸ್ಫೂರ್ತಿಯ ಸೆಲೆಯಾಗಿದ್ದಾರೆ. ಆರ್ಕಿಟೆಕ್ಟ್ ಕ್ಷೇತ್ರದಲ್ಲಿ ತನ್ನದೇ ಆದ ಕಮಾಲ್ ಮೂಡಿಸಿ, ನವೀನ ವಿನ್ಯಾಸ, ವಿಶೇಷ ಅಭಿರುಚಿಯೊಂದಿಗೆ ಮನೆ, ಅಪಾರ್ಟ್ ಮೆಂಟ್‌ನ ಒಳಾಂಗಣ ವಿನ್ಯಾಸದ ಕಾರ್ಯದಲ್ಲಿ ನುರಿತವರು ಆಶಾ ಸತೀಶ್ ಅವರು. ಡಿಎಸ್ ಮ್ಯಾಕ್ಸ್ ಅಪಾರ್ಟ್ ಮೆಂಟ್ ಗಳು ಜನಮನ್ನಣೆಗಳಿಸಿ, ಎಲ್ಲರ ಮನಸೂರೆಗೊಳ್ಳಲು ಕಾರಣ ಆಶಾ ಅಸೆಟ್ಸ್ ಎಂಡಿ ಆಶಾ ಸತೀಶ್ (Asha Satish) ಅವರ ಅರ್ಕಿಟೆಕ್ಟ್ ಕ್ಷೇತ್ರದಲ್ಲಿನ ಅನುಭವ. ಕೇವಲ ಔದ್ಯೋಗಿಕ ಕ್ಷೇತ್ರದಲ್ಲಿ ಮಾತ್ರವಲ್ಲ ಕೆವಿಎಸ್ ಚಾರಿಟೇಬಲ್ ಟ್ರಸ್ಟ್ ಹುಟ್ಟುಹಾಕಿ ಬಡ ಮಕ್ಕಳ ಭವಿಷ್ಯಕ್ಕೆ ಅವರ ವಿದ್ಯಾಭ್ಯಾಸಕ್ಕೆ ಬದುಕಿಗೆ ನೆರವಾಗಿದ್ದಾರೆ.
ವಿಜಯಕಲಾ ಕೆ, ಬೆಂಗಳೂರು
ಶ್ರೀರಾಮ ಎಂಟರ್‌ಪ್ರೈಸಸ್ ಮೂಲಕ ಆಡ್ – 6 ಹೆಸರಿನ ಸಂಸ್ಥೆಯನ್ನು ಹುಟ್ಟುಹಾಕಿ, ಮಾಧ್ಯಮ ಯೋಜನೆ, ಮಾರ್ಕೆಟಿಂಗ್ ಮತ್ತು ಅಕೌಂಟ್ ಮ್ಯಾನೇಜ್‌ಮೆಂಟ್ ಟೀಮ್ ಅನ್ನು ಮುನ್ನಡೆಸುತ್ತಿದ್ದಾರೆ ವಿಜಯಕಲಾ ಕೆ (Vijayakala K). ಈ ಕ್ಷೇತ್ರದಲ್ಲಿ ತಮ್ಮದೇ ಆದ ಸಾಧನೆ ಮಾಡಿ ಸೃಜನಶೀಲ ಟೀಮ್ ಕಟ್ಟಿ ಬೆಳೆಸಿದವರು ವಿಜಯಕಲಾ. ಪರಿಣಿತ ಅನುಭವ ಹೊಂದಿರುವ ಆಡ್ -6 (Ad6) ಸಂಸ್ಥೆ ಈಗ ಅಪರೂಪದ ಸೇವೆಯನ್ನು ನೀಡುತ್ತಿದೆ. ಕೇವಲ ಈ ಕ್ಷೇತ್ರ ಮಾತ್ರವಲ್ಲ ಶಿಕ್ಷಣ ರಿಯಲ್ ಎಸ್ಟೇಟ್, ಟೆಲಿಕಾಂ, ಆಟೋಮೊಬೈಲ್ಸ್ ಕ್ಷೇತ್ರದಲ್ಲಿಯೂ ವಿಜಯಕಲಾ ಪರಿಣಿತರು. ಶ್ರಮ ಪಟ್ಟು ಸಂಸ್ಥೆಯನ್ನು ಬೆಳೆಸಿ ಪೋಷಿಸಿ ಈಗ ಯಶಸ್ವಿ ಉದ್ಯಮಿಯಾಗಿ ವಿಜಯಕಲಾ ಸದ್ದು ಮಾಡಿದ್ದಾರೆ.
ಕೀರ್ತಿ ಮಹಾದೇವ, ಬೆಂಗಳೂರು
ಸ್ವಂತ ಉದ್ದಿಮೆಗಳನ್ನು ಸ್ಥಾಪಿಸುವುದು ಸವಾಲಿನ ಕೆಲಸ. ಅಂತದ್ರಲ್ಲಿ ಕರ್ನಾಟಕದ ಮೊದಲ ಬಿಸಿನೀರು ಉತ್ಪಾದಿಸುವ ʼಹೀಟ್‌ಪಂಪ್ʼ ಕಂಪನಿಯನ್ನು ಸ್ಥಾಪಿಸಿ, ಭಾರತದಲ್ಲಿಯೇ ಬೆಸ್ಟ್ ಸಂಸ್ಥೆ ಅಂತಾ ಹೆಗ್ಗಳಿಕೆಗೆ ಪಾತ್ರವಾದವರು ಕೀರ್ತಿ ಮಹಾದೇವ (Keerthi Mahadeva). ಆರಂಭದಲ್ಲಿ ಸ್ವಂತ ಉದ್ದಿಮೆ ಶುರುಮಾಡಬೇಕು ಅದು ಕನಸು ಕಂಡು ಸಾಯಿ ಹೀಟಿಂಗ್ ಮತ್ತು ಕೂಲಿಂಗ್ ಸೊಲ್ಯುಷನ್ ನಿಯೋ ಹೀಟ್ ಪಂಪ್ ಉದ್ಯಮ ಶುರುಮಾಡಿದರು. ಮೇಕ್ ಇನ್ ಇಂಡಿಯಾ ಪರಿಕಲ್ಪನೆಯನ್ನು ಕರ್ನಾಟಕದ ಮೊದಲ ಕಂಪನಿಯಾದ ನಿಯೋ ಹೀಟ್ ಪಂಪ್ ಅತ್ಯಂತ ಕಡಿಮೆ ಅವಧಿಯಲ್ಲಿ ಭಾರತದಲ್ಲಿ ಸದ್ದು ಮಾಡಿತ್ತು. ಇಬ್ಬರಿಂದ ಶುರುವಾದ ಕಂಪನಿ ಈಗ ಇನ್ನೂರಕ್ಕೂ ಹೆಚ್ಚು ಡೀಲರ್‌ಶಿಪ್‌ಗಳನ್ನು ಹೊಂದಿದೆ. ಇದಕ್ಕೆ ಕಾರಣವಾಗಿದ್ದು ಕೀರ್ತಿ ಅವರ ಅಪಾರ ಶ್ರಮ. ಕೆಲವೇ ಸೆಕೆಂಡ್‌ಗಳಲ್ಲಿ ಬಿಸಿ ನೀರು ಕೊಡಬಲ್ಲ ಹೀಟ್ ಪಂಪ್‌ಗಳನ್ನು ಅತ್ಯಂತ ಕಡಿಮೆ ದರದಲ್ಲಿ ನೀಡುವ ಮೂಲಕ ಜನಮೆಚ್ಚುಗೆಗೆ ಕೀರ್ತಿ ಪಾತ್ರರಾಗಿದ್ದಾರೆ.