ಮಾರ್ಚ್ 8ರಂದು ವಿಶ್ವದಲ್ಲೆಡೆ ಮಹಿಳಾ ದಿನವನ್ನು (International Women’s Day) ಆಚರಿಸಲಾಗುತ್ತದೆ. ಸ್ತ್ರೀ ತತ್ವ, ಸ್ತ್ರೀಯರ ಸಾಮಾಜಿಕ, ಸಾಂಸ್ಕೃತಿಕ, ಆರ್ಥಿಕ ಸಾಧನೆಗಳನ್ನು ಗುರುತಿಸಲು ಪ್ರತಿವರ್ಷ ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲಾಗುತ್ತದೆ. ಅಂತಾರಾಷ್ಟ್ರೀಯ ಮಹಿಳಾ ದಿನವು ಕಾರ್ಮಿಕ ಚಳುವಳಿಯಿಂದ ಬೆಳೆದು ವಿಶ್ವಸಂಸ್ಥೆಯಿಂದ (United Nations) ಗುರುತಿಸಲ್ಪಟ್ಟ ವಾರ್ಷಿಕ ಕಾರ್ಯಕ್ರಮವಾಗಿದೆ.
ಏನಿದರ ವಿಶೇಷ?: 1908ರ ಸಮಯದಲ್ಲಿ ಸುಮಾರು 15,000 ಮಹಿಳೆಯರು ಕಡಿಮೆ ಕೆಲಸದ ಸಮಯ, ಉತ್ತಮ ವೇತನ ಹಾಗೂ ಮತದಾನದ ಹಕ್ಕಿಗಾಗಿ ಒತ್ತಾಯಿಸಿ ನ್ಯೂಯಾರ್ಕ್ (New York) ನಗರದ ಮೂಲಕ ಮೆರವಣಿಗೆ ನಡೆಸಿದರು. ಇದಾದ ಒಂದು ವರ್ಷದ ನಂತರ ಅಮೆರಿಕದ ಸಮಾಜವಾದಿ ಪಕ್ಷವು ಆ ದಿನವನ್ನು ಮಹಿಳಾ ರಾಷ್ಟ್ರೀಯ ದಿನವೆಂದು ಮೊದಲ ಬಾರಿಗೆ ಘೋಷಿಸಿತು.
Advertisement
Advertisement
ಅದಾದ ಬಳಿಕ ಕಮ್ಯುನಿಸ್ಟ್ ಕಾರ್ಯಕರ್ತೆ ಹಾಗೂ ಮಹಿಳಾ ಹಕ್ಕುಗಳ ವಕೀಲೆ ಕ್ಲಾರಾ ಝೆಟ್ಕಿನ್ ಎಂಬ ಮಹಿಳೆಯು ಈ ದಿನವನ್ನು ಅಂತಾರಾಷ್ಟ್ರೀಯ ದಿನವನ್ನಾಗಿಸಬೇಕು ಎಂದು ಆಲೋಚಿಸಿದರು. ಈ ಹಿನ್ನೆಲೆಯಲ್ಲಿ ಅವರು 1910ರಲ್ಲಿ ಕೋಪನ್ ಹ್ಯಾಗನ್‍ನಲ್ಲಿ ದುಡಿಯುವ ಮಹಿಳೆಯರ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನದ ಕಲ್ಪನೆಯನ್ನು ತಿಳಿಸಿದರು. ಆ ಸಮ್ಮೇಳನದಲ್ಲಿ 17 ದೇಶಗಳ 100 ಮಹಿಳೆಯರು ಭಾಗಿಯಾಗಿದ್ದರು. ಕ್ಲಾರಾ ಝೆಟ್ಕಿನ್ ಅವರ ಅಭಿಪ್ರಾಯವನ್ನು ಆ ಸಭೆಯಲ್ಲಿ ಸರ್ವಾನುಮತದಿಂದ ಒಪ್ಪಿಕೊಳ್ಳಲಾಯಿತು.
Advertisement
Advertisement
ಇದನ್ನು ಮೊದಲು 1911ರಲ್ಲಿ ಆಸ್ಟ್ರಿಯಾ, ಡೆನ್ಮಾರ್ಕ್, ಜರ್ಮನಿ ಹಾಗೂ ಸ್ವಿಡ್ಜರ್ಲೆಂಡ್‍ನಲ್ಲಿ ಆಚರಿಸಲಾಯಿತು. ಶತಮಾನೋತ್ಸವವನ್ನು 2011ರಲ್ಲಿ ಆಚರಿಸಲಾಯಿತು. ವಿಶ್ವಸಂಸ್ಥೆಯು 1975 ರಲ್ಲಿ ಇದಕ್ಕೆ ಅಧಿಕೃತ ಒಪ್ಪಿಗೆ ನೀಡಿತು. 1996ರಲ್ಲಿ ವಿಶ್ವಸಂಸ್ಥೆ ಮೊದಲ ಬಾರಿ ಅಂತಾರಾಷ್ಟ್ರೀಯ ಮಹಿಳಾ ದಿನಕ್ಕೊಂದು ಥೀಮ್ ನೀಡಲು ಪ್ರಾರಂಭಿಸಿತು.
ಮಾ. 8ರಂದೇ ಏಕೆ?: ಮೊದಲು ಮಹಿಳಾ ದಿನಾಚರಣೆ ಬಗ್ಗೆ ಮಾಹಿತಿ ನೀಡಿದ್ದ ಕ್ಲಾರಾ ಝೆಟ್ಕಿನ್ ಯಾವುದೇ ದಿನವನ್ನು ನಿಗದಿಪಡಿಸಿರಲಿಲ್ಲ. 1917ರವರೆಗೂ ಮಹಿಳಾ ದಿನಾಚರಣೆಗೆ ಯಾವುದೇ ದಿನ ಸೀಮಿತವಾಗಿರಲಿಲ್ಲ. 1917ರಲ್ಲಿ ರಷ್ಯಾದ ಮಹಿಳೆಯರು ಆಹಾರ ಮತ್ತು ಶಾಂತಿಗಾಗಿ 4 ದಿನಗಳ ಕಾಲ ಪ್ರತಿಭಟನೆ ನಡೆಸಿದರು. ಆಗಿನ ಸರ್ಕಾರ ಪದತ್ಯಾಗ ಮಾಡಿತು. ಮಧ್ಯಂತರ ಸರ್ಕಾರವು ಮಹಿಳೆಯರಿಗೆ ಮತದಾನದ ಹಕ್ಕನ್ನು ನೀಡಿತು. ರಷ್ಯಾದಲ್ಲಿ ಬಳಸಲಾಗುವ ಜೂಲಿಯನ್ ಕ್ಯಾಲೆಂಡರ್ ಪ್ರಕಾರ ರಷ್ಯಾದ ಮಹಿಳೆಯರು ಪ್ರತಿಭಟನೆಯನ್ನು ಪ್ರಾರಂಭಿಸಿದ ದಿನ ಫೆ. 23. ಗ್ರೆಗೋರಿಯನ್ ಕ್ಯಾಲೆಂಡರ್ ಪ್ರಕಾರ, ಈ ದಿನವು ಮಾರ್ಚ್ 8 ಆಗಿತ್ತು. ಹಾಗಾಗಿ ಅಂದಿನಿಂದ ಈ ದಿನದಂದು ಅಂತಾರಾಷ್ಟ್ರೀಯ ಮಹಿಳಾ ದಿನವನ್ನಾಗಿ ಆಚರಿಸಲಾಯಿತು.
ಮಹಿಳಾ ದಿನದ ಮಹತ್ವ: ಮಹಿಳೆಯರ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಮತ್ತು ರಾಜಕೀಯ ಸಾಧನೆಗಳನ್ನು ಗುರುತಿಸಲು ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲಾಗುತ್ತದೆ. ವಿಶ್ವದಾದ್ಯಂತ ಶಿಕ್ಷಣ ಸಂಸ್ಥೆಗಳಲ್ಲಿ ಸಾರ್ವಜನಿಕ ಭಾಷಣ, ರ‍್ಯಾಲಿ, ಕಾರ್ಯಾಗಾರ ಮತ್ತು ವಿಚಾರಗೋಷ್ಠಿ, ಚರ್ಚೆಗಳು, ರಸಪ್ರಶ್ನೆ ಸ್ಪರ್ಧೆ ಮತ್ತು ಉಪನ್ಯಾಸಗಳನ್ನು ನಡೆಸುವ ಮೂಲಕ ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲಾಗುತ್ತಿದೆ.
2023ರ ವಿಶ್ವಸಂಸ್ಥೆಯ ಥೀಮ್ ಏನು?: ಈ ಬಾರಿ ‘DigitALL’ ಎಂಬ ಥೀಮ್ ಅನ್ನು ವಿಶ್ವಸಂಸ್ಥೆ ನೀಡಿದೆ. ತಂತ್ರಜ್ಞಾನ ಹಾಗೂ ಆನ್‍ಲೈನ್ ಶಿಕ್ಷಣಕ್ಕೆ ಮಹಿಳೆಯರು ನೀಡುತ್ತಿರುವ ಕೊಡುಗೆಯನ್ನು ಗುರುತಿಸಲು ಮತ್ತು ಆ ಸಂಭ್ರಮವನ್ನು ಆಚರಿಸಲು ಈ ಥೀಮ್ ಅನ್ನು ನೀಡಿದೆ. ಇದನ್ನೂ ಓದಿ: ಮತ್ತೆ ಸಾವಿರಾರು ಉದ್ಯೋಗಿಗಳನ್ನು ವಜಾಗೊಳಿಸಲು ಮುಂದಾದ ಮೆಟಾ