ಬೆಂಗಳೂರು: ಇಂದು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ 12ನೇ ಆವೃತ್ತಿಯನ್ನು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಉದ್ಘಾಟಿಸಿದರು. ಇದೇ ವೇಳೆ ಚಲನಚಿತ್ರಗಳ ಸಂಖ್ಯೆಗಿಂತ ಗುಣಮಟ್ಟದತ್ತ ಗಮನ ಹರಿಸಿ ಎಂದು ಚಿತ್ರರಂಗಕ್ಕೆ ಸಲಹೆ ನೀಡಿದರು.
ಉದ್ಘಾಟನೆ ಬಳಿಕ ಮಾತನಾಡಿದ ಅವರು, ಚಲನಚಿತ್ರ ನಿರ್ಮಾಣ ಸಂಖ್ಯೆ ಜಾಸ್ತಿಯಾಗಿದೆ ಆದರೆ ಗುಣಮಟ್ಟ ಸುಧಾರಿಸಬೇಕು ಎಂಬ ಆಪೇಕ್ಷ ಇದೆ. ಈ ಬಗ್ಗೆ ಗಮನ ಹರಿಸಿ ಎಂದು ಚಿತ್ರರಂಗಕ್ಕೆ ಸಲಹೆ ನೀಡಿದರು. ಜೊತೆಗೆ ಸಿನಿಮಾ ಸಮಾಜದ ಪರಿಣಾಮಕಾರಿ ಮಾಧ್ಯಮವಾಗಿದ್ದು, ಉತ್ತಮ ಚಿತ್ರಗಳನ್ನು ನಿರ್ಮಿಸುವುದರತ್ತ ಚಿತ್ರರಂಗ ಗಮನಹರಿಸಬೇಕು ಎಂದು ಸಿಎಂ ಅಭಿಪ್ರಾಯ ವ್ಯಕ್ತಪಡಿಸಿದರು.
Advertisement
Advertisement
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಬಾಲಿವುಡ್ ನಿರ್ಮಾಪಕ ಬೋನಿ ಕಪೂರ್, ವಿಶೇಷ ಅತಿಥಿಯಾಗಿ ಬಹುಭಾಷ ನಟಿ ಜಯಪ್ರದ, ಗಾಯಕ ಸೋನು ನಿಗಮ್ ಹಾಗೂ ಇನ್ನಿತರು ಭಾಗಿಯಾಗಿದ್ದರು. ಹಾಗೆಯೇ ಕನ್ನಡ ಚಿತ್ರರಂಗ ಹಾಗೂ ಕರ್ನಾಟಕದ ಜೊತೆ ತಮಗಿರುವ ನಂಟಿನ ಬಗ್ಗೆ ವೇಧಿಕೆಯಲ್ಲಿ ಹಂಚಿಕೊಂಡು, ಕನ್ನಡ ಚಿತ್ರರಂಗ ಹಾಲಿವುಡ್‍ಗೆ ಟಕ್ಕರ್ ಕೊಡುವ ರೀತಿ ಬೆಳೆಯುತ್ತಿದೆ ಎಂದು ಹಾಡಿ ಹೊಗಳಿದರು.
Advertisement
Advertisement
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ರಾಕಿಂಗ್ ಸ್ಟಾರ್ ಯಶ್ ಮಾತನಾಡಿ, ಸಿನಿಮಾ ಚಿಕ್ಕ ವಯಸ್ಸಿನಲ್ಲಿ ನನ್ನನ್ನು ಆವರಿಸಿಕೊಂಡಿತು. ಸಿನಿಮಾ ಜೀವನ ಕೊಟ್ಟಿದೆ ನನಗೆ. ಅಂತಹ ಸಿನಿಮೋತ್ಸವಕ್ಕೆ ನಾವೆಲ್ಲ ಸೇರಿದ್ದೇವೆ ಎಂದು ಸಂತಸ ವ್ಯಕ್ತಪಡಿಸಿದರು. ಬಳಿಕ ಸಿನಿಮಾ ರಂಗಕ್ಕಾಗಿ ಸ್ಟುಡಿಯೋ ಕಟ್ಟಿಸಿಕೊಡಿ, ಅನೇಕ ಸಿನಿಮಾಸಕ್ತ ಯುವಕರಿಗಾಗಿ ಸ್ಟುಡಿಯೋ ಅಗತ್ಯವಿದೆ ಎಂದು ಸಿಎಂ ಬಳಿ ಮನವಿ ಮಾಡಿದರು.
ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷರಾದ ಸುನಿಲ್ ಪುರಾಣಿಕ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಖಾಸಗಿಯಾಗಿ ನಡೆಯುತ್ತಿದ್ದ ಈ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವನ್ನು ಸರ್ಕಾರದಿಂದ ಆಚರಿಸಲು ಆರಂಭಿಸಿದ್ದು, ಅಕಾಡೆಮಿಗೆ ಸ್ವಂತ ಕಟ್ಟಡ ನಿರ್ಮಾಣಕ್ಕೆ ನೆರವು ನೀಡಿದವರು ಸಿಎಂ ಯಡಿಯೂರಪ್ಪನವರು ಎಂದು ಸ್ಮರಿಸಿಕೊಂಡರು. ಅಕಾಡೆಮಿಯಿಂದ ಚಲನಚಿತ್ರಕ್ಕೆ ಸಂಬಂಧಿಸಿದ ಮ್ಯೂಸಿಯಂ ಸ್ಥಾಪನೆ ಸೇರಿದಂತೆ ಕಥೆಗಳ ಲೈಬ್ರರಿ, ಅಕಾಡೆಮಿ ಕಟ್ಟಡದಲ್ಲಿ ಸಿನಿಮಾ ಸಂಕೀರ್ಣ, ಇನ್ನೂ ಹೊಸ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಈಗಾಗಲೇ ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದೇವೆ. ಅವರು ಸಕಾರಾತ್ಮಕವಾಗಿ ಸ್ಪಂದಿಸಿ 5 ಕೋಟಿ ರೂ. ನೀಡಿದ್ದಾರೆ ಎಂದು ತಿಳಿಸಿದರು. ಹಾಗೆಯೇ ಚಲನಚಿತ್ರ ರಂಗದ ಕಲಾವಿದರಿಗೆ ಪಿಂಚಣಿ ಸೇರಿದಂತೆ ಬಡ ಕಲಾವಿದರ ಸಮಸ್ಯೆಗಳಿಗೆ ಸ್ಪಂದಿಸುವ ಯೋಜನೆಗಳನ್ನು ಜಾರಿಗೆ ತರಲು ಸಿಎಂ ಬಳಿ ಮನವಿ ಮಾಡಿಕೊಂಡರು.
ಕರ್ನಾಟಕ ಚಲನಚಿತ್ರ ಮಂಡಳಿಯ ಅಧ್ಯಕ್ಷರಾದ ಜಯರಾಜ್ ಅವರು ಚಲನಚಿತ್ರರಂಗಕ್ಕೆ ಮುಖ್ಯಮಂತ್ರಿಗಳ ಕೊಡುಗೆಯನ್ನು ಅಭಿನಂದಿಸಿದರು. ಮಂಡಳಿಯ 75ನೇ ವರ್ಷಕ್ಕೆ ಆರ್ಥಿಕ ನೆರವು, ಜಿ.ಎಸ್.ಟಿ ಮತ್ತು ಸಿನಿಮಾ ಸಿಟಿಯ ಬಗ್ಗೆ ಮುಖ್ಯಮಂತ್ರಿಗಳಲ್ಲಿ ಬೇಡಿಕೆ ಇಟ್ಟರು. ಆದಾದ ಬಳಿಕ ಕಾರ್ಯಕ್ರಮಕ್ಕೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತರಾದ ಎಸ್.ಎನ್ ಸಿದ್ದರಾಮಪ್ಪ ಅವರು ಸ್ವಾಗತ ಕೋರಿ ಮಾತನಾಡಿ, ಈ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಮುಖ್ಯಮಂತ್ರಿಗಳ ಕೊಡುಗೆಯನ್ನು ಸ್ಮರಿಸಿದರು. ಈ ಚಲನಚಿತ್ರೋತ್ಸವಕ್ಕೆ ಅಂತಾರಾಷ್ಟ್ರೀಯ ಮನ್ನಣೆ ದೊರಕಿಸಿ ಕೊಡುವಲ್ಲಿ ಶ್ರಮಿಸುವುದಾಗಿ ತಿಳಿಸಿದರು.
ಇದೇ ಸಂದರ್ಭದಲ್ಲಿ ಈ ಸಾಲಿನ 12ನೇ ಸಿನಿಮೋತ್ಸವದ ಕಿರು ಹೊತ್ತಿಗೆಯನ್ನು ಯಶ್ ಹಾಗೂ ಮುಖ್ಯಮಂತ್ರಿಗಳು ಬಿಡುಗಡೆ ಮಾಡಿದರು. ಕಾರ್ಯಕ್ರಮದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಕಾರ್ಯದರ್ಶಿಗಳಾದ ಕ್ಯಾಪ್ಟನ್ ಮಣಿವಣ್ಣನ್ ಸೇರಿದಂತೆ ಕನ್ನಡ ಚಲನ ಚಿತ್ರರಂಗದ ವಿವಿಧ ಸಂಘ ಸಂಸ್ಥೆಗಳ ಮುಖಂಡರು ಮತ್ತು ನೂರಾರು ಕಲಾವಿದರು ಉಪಸ್ಥಿತರಿದ್ದರು. ಕೊನೆಯಲ್ಲಿ ಚಲನಚಿತ್ರರಂಗದ ಗಣ್ಯರನ್ನು ಸನ್ಮಾನಿಸಿ ನೆನಪಿನ ಕಾಣಿಕೆಯನ್ನು ನೀಡಲಾಯಿತು.