– ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಅಂತಾರಾಷ್ಟ್ರೀಯ ಸಮ್ಮೇಳನ
ಬೆಂಗಳೂರು: ಪೂಜನೀಯ ಸ್ಥಾನ ನೀಡಿರುವ ಭಾರತದಲ್ಲಿ ಮಹಿಳೆಯರಿಗೆ ಸುರಕ್ಷತೆ ಇಲ್ಲದಂತಾಗಿದೆ ಎಂದು ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯುನಿವರ್ಸಿಟಿ ಕುಲಪತಿ ಡಾ. ಆರ್. ವೆಂಕಟರಾವ್ ಕಳವಳ ವ್ಯಕ್ತಪಡಿಸಿದರು.
ಯಲಹಂಕದ ರಾಜಾನುಕುಂಟೆ ಪ್ರೆಸಿಡೆನ್ಸಿ ಕಾಲೇಜಿನಲ್ಲಿ `ಜಂಡರ್ ಇಕ್ವಾಲಿಟಿ ಥ್ರೂ ದ ಸ್ಟ್ಯಾಟಜಿ ಆಫ್ ಜಂಡರ್ ಮೇನ್ ಸ್ಟೀಮಿಂಗ್’ ಕುರಿತು ಗುರುವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಮಾತನಾಡಿದ ಅವರು, ಮಹಿಳೆಯರಿಗಾಗಿ ಸಂವಿಧಾನದಲ್ಲಿ ಅನೇಕ ಕಾನೂನುಗಳನ್ನು ಜಾರಿಗೆ ತರಲಾಗಿದೆ. ಸಮರ್ಪಕವಾಗಿ ಕಾರ್ಯರೂಪಕ್ಕೆ ಬರುತ್ತಿಲ್ಲ. ಮಹಿಳೆಯರಿಗೆ ವಾಕ್ ಸ್ವಾತಂತ್ರೃ ನೀಡದಿದ್ದರೆ ಸಮಾಜ ಜಡತ್ವ ಹೊಂದಲಿದೆ. ಸ್ವಾತಂತ್ರ್ಯ ನೀಡಿದಾಗ ಶಿಕ್ಷಣ, ಸಂಸ್ಕೃತಿ, ಆರ್ಥಿಕತೆಯಲ್ಲಿ ಮಹಿಳೆಯರು ಸಬಲೀಕರಣ ಸಾಧಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.
Advertisement
ಮಹಿಳೆಯರ ಸಾಮಾಜಿಕ ಸಬಲತೆ ಮತ್ತು ಸಮಾನತೆ ತಮ್ಮ ಕುಟುಂಬದಿಂದಲೇ ಆರಂಭವಾಗಿದೆ. ತಾಯಿಯೇ ಮೊದಲು ಗುರು, ಮನೆಯೇ ಮೊದಲ ಪಾಠಶಾಲೆ ಎಂಬುದು ನಮ್ಮ ಹಿರಿಯರು ನಾಣ್ಣುಡಿಯಾಗಿದೆ. ಸಮಾಜದ ಸ್ವಾಸ್ಥ್ಯ ಕಾಪಾಡುವ ಜವಾಬ್ದಾರಿ ಹಾಗೂ ನಮ್ಮ ಸಂಸ್ಕೃತಿ ಉಳಿಸುವುದು ತಾಯಂದಿರ ಕೈಯಲ್ಲಿದೆ ಎಂದು ತಿಳಿಸಿದರು.
Advertisement
ಯುನೈಟೆಡ್ ನೇಷನ್ಸ್ ಇನ್ಫಾಮೇಷನ್ ಸೆಂಟರ್ ಫಾರ್ ಇಂಡಿಯಾ ಆ್ಯಂಡ್ ಭೂತಾನ್ ನಿರ್ದೇಶಕ ಡರ್ಕ್ ಸೆಗಾರ್ ಮಾತನಾಡಿ, ಭಾರತದಲ್ಲಿ ಮಹಿಳೆಯರಿಗೆ ವಿಶೇಷ ಸ್ಥಾನಮಾನ ನೀಡಲಾಗಿದೆ. ಆದರೆ, ಲೋಕಸಭೆಯಲ್ಲಿ ಮಹಿಳೆಯರು ಕೇವಲ ಶೇ.11 ರಷ್ಟು ಮಾತ್ರ ಇದ್ದಾರೆ. ಮಹಿಳೆಯರಿಗೆ ಯಾವ ರೀತಿಯ ಸ್ಥಾನಮಾನ ನೀಡಲಾಗಿದೆ ಎಂಬುದು ಇದರಲ್ಲಿಯೇ ತಿಳಿಯಲಿದೆ. ಉದ್ಯೋಗ, ರಾಜಕೀಯ ಸೇರಿದಂತೆ ಇನ್ನಿತರ ವರ್ಗಗಳಲ್ಲಿ ಮಹಿಳೆಯರಿಗೆ ಹೆಚ್ಚು ಅವಕಾಶ ಕಲ್ಪಸಬೇಕಿದೆ ಎಂದು ತಿಳಿಸಿದರು.
Advertisement
ಅಂತಾರಾಷ್ಟ್ರೀಯ ಸಮ್ಮೇಳನಕ್ಕೆ ಅಫ್ಘಾನಿಸ್ತಾನ, ಭೂತಾನ್, ಬಾಂಗ್ಲಾದೇಶ, ಇರಾಕ್, ಕೀನ್ಯಾ, ಸ್ವೀಡನ್, ತಾಂಜನೀಯ, ಸೂಡಾನ್ ಸೇರಿದಂತೆ ಇನ್ನಿತರ ದೇಶಗಳ ವಿದ್ಯಾರ್ಥಿಗಳು ಸಮ್ಮೇಳನದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಕುಲಾಧಿಪತಿ ಪ್ರೊ. ವಿಜಯನ್ ಇಮಾನುಲ್, ಕುಲಪತಿ ಪ್ರೊ. ರಾಧಾ ಪದ್ಮನಾಭನ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv