ಬೆಂಗಳೂರು: ಸಿಲಿಕಾನ್ ಸಿಟಿಯ (Silicon City) ಪೊಲೀಸರು ವಿವಿಧ ರೀತಿಯ ಕಳ್ಳತನದಲ್ಲಿ ತೊಡಗಿರುವ ಖದೀಮರನ್ನು ಅರೆಸ್ಟ್ ಮಾಡಿದ್ದಾರೆ. ಕೆಲವು ಆಶ್ಚರ್ಯಕರ ಎನಿಸುವ ಪ್ರಕರಣಗಳ ಸಂಬಂಧ ತನಿಖೆ ನಡೆಸಿ ಆರೋಪಿಗಳನ್ನು ಜೈಲಿಗೆ ಕಳುಹಿಸಿದ್ದಾರೆ.
ಪ್ರಕರಣ-1
ಪಿಜಿಯಲ್ಲಿ ಯಾರು ಇಲ್ಲದೇ ಇರುವಾಗ ಲ್ಯಾಪ್‌ಟಾಪ್ ಕಳ್ಳತನ ಮಾಡುತ್ತಿದ್ದ ಖದೀಮರನ್ನು ಕುಮಾರಸ್ವಾಮಿ ಪೊಲೀಸ್ ಠಾಣಾ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಮೂವರು ಆರೋಪಿಗಳನ್ನು ಬಂಧಿಸಿದ್ದು, ಚನ್ನರಾಯಪಟ್ಟಣ ಮೂಲದ ಚೇತನ್, ಆದರ್ಶ್, ಪವನ್ ಎಂದು ಗುರುತಿಸಲಾಗಿದೆ. ಪಿಜಿಯಲ್ಲಿ ಯಾರು ಇಲ್ಲದೇ ಇರುವಾಗ ಲ್ಯಾಪ್‌ಟಾಪ್ ಕಳ್ಳತನ ಮಡುತ್ತಿದ್ದರು. ಪಿಜಿಗಳಲ್ಲಿ ಕದಿಯಲು ಸಾಧ್ಯವಾಗದೆ ಇದ್ದರೆ ಬ್ಯಾಚುಲರ್ ರೂಂಗಳನ್ನ ಹುಡುಕಿ ಪಾಟ್ ಕೆಳಗೆ, ಮ್ಯಾಟ್ ಕೆಳಗೆ ಇಡುತ್ತಿದ್ದ ಕೀಗಳನ್ನು ಗಮನಿಸಿ ಆ ರೂಂಗಳಲ್ಲಿ ಕಳ್ಳತನ ಮಾಡುತ್ತಿದ್ದರು. ಲ್ಯಾಪ್‌ಟಾಪ್, ಮೊಬೈಲ್‌ಗಳನ್ನೇ ಟಾರ್ಗೆಟ್ ಮಾಡುತ್ತಿದ್ದರು.
ಸದ್ಯ ಬಂಧಿತ ಮೂವರಿಂದ ಒಟ್ಟು 23 ಲಕ್ಷ ರೂ. ಮೌಲ್ಯದ 28 ಮೊಬೈಲ್, 34 ಲ್ಯಾಪ್‌ಟಾಪ್‌ಗಳನ್ನು ವಶಕ್ಕೆ ಪಡೆಯಲಾಗಿದೆ.ಇದನ್ನೂ ಓದಿ: ಒಮರ್ ಅಬ್ದುಲ್ಲಾ ಜಮ್ಮು ಕಾಶ್ಮೀರದ ಮುಂದಿನ ಸಿಎಂ
ಪ್ರಕರಣ-2
ತಮಿಳುನಾಡಿನಿಂದ ಬೆಂಗಳೂರಿಗೆ ಬಂದು ಲ್ಯಾಪ್‌ಟಾಪ್ ಕಳ್ಳತನ ಮಾಡಿ, ಮತ್ತೆ ತಮಿಳುನಾಡಿಗೆ ತೆರಳಿ ಮಾರಾಟ ಮಾಡುತ್ತಿದ್ದರು. ಓರ್ವನನ್ನು ಬಂಧಿಸಿದ್ದು, ಇನ್ನೊಬ್ಬನಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.
ಇಬ್ಬರು ಆರೋಪಿಗಳ ಪೈಕಿ ಸದಾನಾಯ್ಡು ಎಂಬವನನ್ನು ಬಂಧಿಸಲಾಗಿದ್ದು, ಗಂಗಯ್ಯ ಎಂಬವವನಿಗಾಗಿ ಹುಡುಕಾಟ ನಡೆಸಿದ್ದು, ಇಬ್ಬರು ಸಹೋದರರು ಎಂದು ಗುರುತಿಸಲಾಗಿದೆ.
ಸ್ಕೂಟಿಯಲ್ಲಿ ತಮಿಳುನಾಡಿನ ಸೇಲಂನಿಂದ ಬಂದು ಲ್ಯಾಪ್‌ಟಾಪ್ ಕಳ್ಳತನ ಮಾಡುತ್ತಿದ್ದರು. ನಂತರ ಸ್ಕೂಟಿಯಲ್ಲಿ ಎಸ್ಕೇಪ್ ಆಗಿ ತಮಿಳುನಾಡಿನಲ್ಲಿ ಅರ್ಧ ಬೆಲೆಗೆ ಲ್ಯಾಪ್‌ಟಾಪ್ ಮಾರಾಟ ಮಾಡುತ್ತಿದ್ದರು. ಈ ಹಿಂದೆ ಈ ಸಹೋದರರು ಗ್ಯಾಂಗ್ ಕಟ್ಟಿಕೊಂಡು ಲ್ಯಾಪ್‌ಟಾಪ್ ಕದಿಯುತ್ತಿದ್ದರು. ಆದರೆ ಒಂದು ಬಾರಿ ಬಂಧನವಾದ ಬಳಿಕ ಗ್ಯಾಂಗ್ ಸಹವಾಸ ಬಿಟ್ಟು ಇಬ್ಬರೇ ಕಳ್ಳತನಕ್ಕೆ ಇಳಿದಿದ್ದರು. ಸದ್ಯ ಸದಾನಾಯ್ಡುನನ್ನು ತಮಿಳುನಾಡಿನಲ್ಲಿ ಬಂಧನ ಮಾಡಿದ್ದು, ಗಂಗಯ್ಯನಿಗಾಗಿ ಜಯನಗರ ಪೊಲೀಸರು ಹುಡುಕಾಟ ನಡೆಸಿದ್ದಾರೆ.
ಪ್ರಕರಣ-3
ಚಿನ್ನದ ಅಂಗಡಿಗೆ ಹೋಗಿ ಚಿನ್ನವನ್ನು ಪಾಲಿಶ್ ಮಾಡಿಕೊಡುವುದಾಗಿ ಹೇಳಿ ಚಿನ್ನದ ಗಟ್ಟಿ ಪಡೆದು ಎಸ್ಕೇಪ್ ಆಗುತ್ತಿದ್ದ ಆರೋಪಿಯನ್ನು ಹಲಸೂರು ಗೇಟ್ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ವ್ಯಕ್ತಿಯನ್ನು ರಾಜಸ್ಥಾನ ಮೂಲದ ಅಂಕುರ್ ಕುಮಾರ್ ಡುಂಗರ್ ವಾಲ ಎಂದು ಗುರುತಿಸಲಾಗಿದೆ. ಹಲಸೂರು ಗೇಟ್ ಬಳಿ ವಾಸಿಸುತ್ತಿದ್ದ. ಚಿನ್ನದ ಪಾಲಿಶ್ ಕೆಲಸ ಮಾಡುತ್ತಿದ್ದ. ಹಣದಾಸೆಗೆ ಬಿದ್ದು, ಚಿನ್ನದ ಗಟ್ಟಿಯನ್ನು ಕಳ್ಳತನ ಮಾಡಲು ಮುಂದಾಗಿದ್ದ. ಈ ಹಿನ್ನೆಲೆ ಚಿನ್ನದ ಅಂಗಡಿಗಳಿಗೆ ತೆರಳಿ ಚಿನ್ನವನ್ನು ಪಾಲಿಶ್ ಮಾಡಿಕೊಡುವುದಾಗಿ ಹೇಳಿ ಚಿನ್ನದ ಗಟ್ಟಿಯನ್ನು ಪಡೆದು ಎಸ್ಕೇಪ್ ಆಗುತ್ತಿದ್ದ.
ನಗರ್ತ ಪೇಟೆಯ ಚಿನ್ನದ ವ್ಯಾಪಾರಿಯೊಬ್ಬರು ಈತನ ಮೇಲೆ ದೂರು ದಾಖಲಿಸಿದ್ದರು. ವಿಷಯ ತಿಳಿದ ಆರೋಪಿ ರಾಜಸ್ಥಾನಕ್ಕೆ ಪರಾರಿಯಾಗಿದ್ದ. ದೂರಿನ ಅನ್ವಯ ರಾಜಸ್ಥಾನಕ್ಕೆ ತೆರಳಿ ಆರೋಪಿಯನ್ನ ಬಂಧಿಸಿದ್ದಾರೆ. 10 ಲಕ್ಷ ರೂ. ಮೌಲ್ಯದ 387 ಗ್ರಾಂ ಚಿನ್ನವನ್ನು ವಶಕ್ಕೆ ಪಡೆದಿದ್ದಾರೆ.
ಪ್ರಕರಣ-4
ಕಾಲೇಜು ಬಳಿ ವಿದ್ಯಾರ್ಥಿಗಳಿಗೆ ಗಾಂಜಾ ಮಾರಾಟ ಮಾಡುತ್ತಿದ್ದ ಸ್ನೇಹಿತರಿಬ್ಬರನ್ನು ಹೆಚ್‌ಎಸ್‌ಆರ್ ಲೇಔಟ್‌ನ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ತಮಿಳುನಾಡು ಮೂಲದ ದಿನೇಶ್ ಹಾಗೂ ಕುಪ್ಪನ್ ಎಂದು ಗುರುತಿಸಲಾಗಿದೆ.
ದಿನೇಶ್ ಬಿಸಿಎ ಮುಗಿಸಿ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಹಾಗೂ ಕುಪ್ಪನ್ ಗಾರೆ ಕೆಲಸ ಮಾಡುತ್ತಿದ್ದ. ಇಬ್ಬರು ಒಂದೇ ಊರಿನವರಾಗಿದ್ದು, ಚಿಕ್ಕಂದಿನಿಂದಲೂ ಫ್ರೆಂಡ್ಸ್ ಆಗಿದ್ದರು. ಸಿಲಿಕಾನ್ ಸಿಟಿಯಲ್ಲಿ ಜೀವನ ಸಾಗಿಸಲು ದುಡ್ಡು ಸಾಕಾಗದೇ ಗಾಂಜಾ ಮಾರಾಟಕ್ಕೆ ಇಳಿದಿದ್ದರು. ಕಾಲೇಜು ಒಂದರ ಬಳಿ ವಿದ್ಯಾರ್ಥಿಗಳಿಗೆ ಗಾಂಜಾ ಮಾರಾಟ ಮಾಡುವಾಗ ಹೆಚ್‌ಎಸ್‌ಆರ್ ಲೇಔಟ್‌ನ ಪೊಲೀಸರು ಬಂಧಿಸಿದ್ದು, ಇಬ್ಬರಿಂದ 13 ಲಕ್ಷ ರೂ. ಮೌಲ್ಯದ 23 ಕೆಜಿ ಗಾಂಜಾ ವಶಕ್ಕೆ ಪಡೆದಿದ್ದಾರೆ.
ಸದ್ಯ ಎಲ್ಲಾ ಪ್ರಕರಣದ ಆರೋಪಿಗಳನ್ನು ಬಂಧಿಸಿ, ವಿಚಾರಣೆ ನಡೆಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.ಇದನ್ನೂ ಓದಿ: ಮೈಸೂರು ದಸರಾದಂತೆ ಮಡಿಕೇರಿ ದಸರಾ ರೂಢಿಗೆ ಬಂದದ್ದು ಹೇಗೆ?