ಬೆಂಗಳೂರು: ಲೋಕಸಭಾ ಚುನಾವಣೆಯ ಬಳಿಕ ವಿಶ್ರಾಂತಿಗೆ ಜಾರಿದ್ದ ಸಿಎಂ ಕುಮಾರಸ್ವಾಮಿ ಅವರು ಅಸಮಾಧಾನಗೊಂಡಿದ್ದು, ಗುಪ್ತಚರ ಇಲಾಖೆಗಳಿಂದ ಸಲ್ಲಿಕೆಯಾದ ವರದಿಗಳೇ ಅವರ ನೆಮ್ಮದಿಗೆ ಭಂಗ ತಂದಿದೆ ಎಂಬ ಮಾಹಿತಿ ಲಭಿಸಿದೆ.
ರಾಜ್ಯ ಗುಪ್ತಚರ ಇಲಾಖೆ ಅಧಿಕಾರಿಗಳು ಮಂಡ್ಯ ಕ್ಷೇತ್ರದ ಚುನಾವಣೆಯ ಬಗ್ಗೆ ಮೂರು ಭಿನ್ನ ರಿಪೋರ್ಟ್ ನೀಡಿದ್ದಾರೆ. ಚುನಾವಣೆಯವರೆಗೂ ಆತ್ಮವಿಶ್ವಾಸದಿಂದಲೇ ಇದ್ದ ಸಿಎಂ ಆ ಬಳಿಕ ಅಸಮಾಧಾನಗೊಳ್ಳಲು ಈ ವರದಿಗಳೇ ಕಾರಣ ಎನ್ನಲಾಗಿದೆ. ಈ ಕಾರಣದಿಂದಲೇ ವಿಶ್ರಾಂತಿಗೆ ತೆರಳಿದ್ದಾರೆ ಎಂದು ಹೇಳಲಾಗುತ್ತಿದೆ.
Advertisement
Advertisement
ಗುಪ್ತಚರ ಇಲಾಖೆ ಮೊದಲ ವರದಿಯಲ್ಲಿ ನಿಖಿಲ್ ಭಾರೀ ಅಂತರದಿಂದ ಗೆಲುವು ಪಡೆಯಲಿದ್ದಾರೆ ಎಂದು ಹೇಳಿತ್ತು. ಆ ಬಳಿಕ ನೀಡಿದ 2ನೇ ವರದಿಯಲ್ಲಿ ಸುಮಲತಾ ಅವರು ಡೇಂಜರ್ ಝೋನ್‍ಗೆ ಹೋಗಲಿದ್ದು, ನಿಖಿಲ್ ಕಡಿಮೆ ಅಂತರದಲ್ಲಿ ಗೆಲುವು ಪಡೆಯಲಿದ್ದಾರೆ ಎಂದು ತಿಳಿಸಿತ್ತು. ಆದರೆ 3ನೇ ವರದಿಯಲ್ಲಿ ನಿಖಿಲ್ ಗೆಲುವು ಕಷ್ಟ ಆಗಲಿದ್ದು, ಗೆಲ್ಲುವ ಅವಕಾಶ ಶೇ.50 ರಷ್ಟು ಇದೆ. ಯಾರೇ ಗೆದ್ದರೂ ಟಫ್ ಫೈಟ್ ಇರಲಿದೆ ಎಂದು ಹೇಳಿತ್ತು.
Advertisement
ಗುಪ್ತಚರ ಇಲಾಖೆಯೇ 3 ಭಿನ್ನ ವರದಿಗಳನ್ನು ನೀಡಿರುವುದು ಸಿಎಂ ಎಚ್‍ಡಿಕೆ ಅವರು ಅಸಮಾಧಾನಗೊಳ್ಳುವಂತೆ ಮಾಡಿದ್ದು, ಕಾಂಗ್ರೆಸ್ ನಾಯಕರ ವಿರುದ್ಧವೂ ದೂರು ನೀಡಲು ಕಾರಣ ಎನ್ನಲಾಗಿದೆ.
Advertisement
ಪ್ರಮುಖವಾಗಿ ನಿಖಿಲ್ ರಾಜಕೀಯ ಭವಿಷ್ಯದ ಮೇಲೆ ಇದು ಹೆಚ್ಚು ಪ್ರಭಾವ ಉಂಟು ಮಾಡುವ ಕಾರಣದಿಂದ ಹೆಚ್ಚು ಪ್ರಾಮುಖ್ಯತೆ ಪಡೆದಿದೆ. ಆದರೆ ಗುಪ್ತಚರ ಇಲಾಖೆ ಕೆಲ ಸ್ಯಾಂಪಲ್‍ಗಳ ಮೇಲೆಯೇ ವರದಿ ಸಿದ್ಧಪಡಿಸಿದೆ ಎನ್ನಲಾಗಿದ್ದು, ಫಲಿತಾಂಶ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸಿದೆ.
ಇತ್ತ ಈ ವರದಿಗಳ ಬೆನ್ನಲ್ಲೇ ಸಚಿವ ಜಿಡಿ ದೇವೇಗೌಡ ಅವರ ಹೇಳಿಕೆ ಹಾಗೂ ಮಂಡ್ಯ ರೆಬೆಲ್ ಶಾಸಕರು ಸುಮಲತಾ ಆಯೋಜಿಸಿದ್ದ ಭೋಜನ ಕೂಟದಲ್ಲಿ ಪಾಲ್ಗೊಂಡಿದ್ದು ಸಿಎಂ ಅಸಮಾಧಾನಕ್ಕೆ ಕಾರಣವಾಗಿದೆ ಎಂಬ ಚರ್ಚೆ ಕೇಳಿ ಬಂದಿದೆ. ರೆಬೆಲ್ ಮಂಡ್ಯ ಮುಖಂಡರ ವಿರುದ್ಧ ಕಾಂಗ್ರೆಸ್ ಕ್ರಮಕೈಗೊಳ್ಳಲು ಸಿಎಂ ದೂರು ನೀಡಿದ್ದಾರೆ. ಆದರೆ ಕಾಂಗ್ರೆಸ್ ನಾಯಕರು ಮಂಡ್ಯ ರೆಬೆಲ್ ನಾಯಕರ ಪರವಾಗಿ ಬ್ಯಾಟಿಂಗ್ ಮಾಡಿದ್ದರಿಂದ ಸಿಎಂ ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ.