ಬೆಂಗಳೂರು: ಸಂಪುಟ ವಿಸ್ತರಣೆ ಆದ ಕೂಡಲೇ ಮತ್ತೊಂದು ಕದನ ಶುರುವಾಗಲಿದ್ದು, ಸರ್ಕಾರಕ್ಕೆ ಗುಪ್ತಚರ ಇಲಾಖೆ ಶಾಸಕರು ಬಂಡಾಯ ಏಳುವ ಎಚ್ಚರಿಕೆಯನ್ನು ನೀಡಿದೆ.
8 ಕಾಂಗ್ರೆಸ್ ಶಾಸಕರು ಬಂಡಾಯ ಏಳುವ ಸಾಧ್ಯತೆಗಳಿವೆ ಎಂದು ಗುಪ್ತಚರ ಇಲಾಖೆ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಮಾಹಿತಿ ನೀಡಿದೆ ಎಂದು ಮೂಲಗಳು ಪಬ್ಲಿಕ್ ಟಿವಿಗೆ ತಿಳಿಸಿದೆ.
Advertisement
ಈಗಾಗಲೇ ಶಾಸಕರು ನಾವು ಸಚಿವ ಸ್ಥಾನದ ಆಕಾಂಕ್ಷಿ ಅಂತಾ ಸಾರ್ವಜನಿಕವಾಗಿ ಹೇಳಿಕೊಂಡಿದ್ದಾರೆ. ಇತ್ತ ಗುಪ್ತಚರ ವರದಿಯಲ್ಲಿ ಹೇಳಿರುವ ಶಾಸಕರು ಬಂಡಾಯ ಏಳದಂತೆ ನೋಡಿಕೊಳ್ಳಲು ಕಾಂಗ್ರೆಸ್ ನಾಯಕರಿಗೆ ಸಿಎಂ ಸೂಚಿಸಿದ್ದಾರೆ ಎನ್ನಲಾಗಿದೆ.
Advertisement
ಇತ್ತ ಬಂಡಾಯ ಏಳುವ ಶಾಸಕರನ್ನು ಬಿಜೆಪಿ ಟಾರ್ಗೆಟ್ ಮಾಡಿಕೊಂಡಿದ್ದು, ತನ್ನತ್ತ ಸೆಳೆಯುವ ಪ್ರಯತ್ನವನ್ನು ತೆರೆಮರೆಯಲ್ಲಿ ಮಾಡ್ತಿದೆ ಎಂದು ಹೇಳಲಾಗುತ್ತಿದೆ. ಒಂದು ವೇಳೆ ಗುಪ್ತಚರ ವರದಿಯಲ್ಲಿ ಉಲ್ಲೇಖಿಸಿರುವ 8 ಕಾಂಗ್ರೆಸ್ ಶಾಸಕರಿಗೆ ಒಂದು ವೇಳೆ ಸಚಿವ ಸ್ಥಾನ ಸಿಗದೇ ಇದ್ದಲ್ಲಿ ಬಂಡಾಯ ಏಳುವ ಸಾಧ್ಯತೆಗಳಿವೆ ಅಂತಾ ರಾಜ್ಯ ಸರ್ಕಾರಕ್ಕೆ ತಿಳಿಸಿದೆ. ಅಷ್ಟೇ ಅಲ್ಲದೇ ಈ ಎಲ್ಲ 8 ಶಾಸಕರು ಜೊತೆಗೊಡಿ ರಹಸ್ಯ ಸಭೆ ನಡೆಸಿದ್ದಾರೆ ಎನ್ನುವ ಮಾಹಿತಿಯೂ ಈಗ ಸಿಕ್ಕಿದೆ.
Advertisement
Advertisement
ಬಂಡಾಯ ಏಳಬಹುದಾದ ಶಾಸಕರು ಯಾರು?
1. ಶಿವರಾಮ ಹೆಬ್ಬಾರ್: ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿರುವ ಶಿವರಾಮ ಹೆಬ್ಬಾರ್ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದಾರೆ. ಹೆಬ್ಬಾರ್ ಪತ್ನಿಗೆ ವಿಶ್ವಾಸಮತ ಸಾಬೀತು ಮುನ್ನವೇ ಆಪರೇಷನ್ ಕಮಲದಡಿಯಲ್ಲಿ ಬಿಜೆಪಿಗೆ ಆಹ್ವಾನ ನೀಡಲಾಗಿತ್ತು ಅಂತಾ ಕಾಂಗ್ರೆಸ್ ಆಡಿಯೋ ಕ್ಲಿಪ್ ಬಿಡುಗಡೆ ಮಾಡಿತ್ತು. ಆದ್ರೆ ಕಾಂಗ್ರೆಸ್ ರಿಲೀಸ್ ಮಾಡಿದ್ದ ಆಡಿಯೋ ಕ್ಲಿಪ್ ನಲ್ಲಿದ್ದ ಮಹಿಳೆ ಧ್ವನಿ ನನ್ನ ಪತ್ನಿಯದ್ದು ಅಲ್ಲ ಅಂತಾ ಶಿವರಾಮ ಹೆಬ್ಬಾರ್ ಫೇಸ್‍ಬುಕ್ ಪೇಜಿನಲ್ಲಿ ಬರೆದುಕೊಂಡಿದ್ರು.
2. ಬಿ.ಕೆ ಸಂಗಮೇಶ್ವರ್: ಶಿವಮೊಗ್ಗ ಜಿಲ್ಲೆಯ ಭದ್ರಾವತಿ ವಿಧಾನಸಭಾ ಕ್ಷೇತ್ರದಿಂದ ಬಿ.ಕೆ.ಸಂಗಮೇಶ್ವರ ಆಯ್ಕೆಯಾಗಿದ್ದಾರೆ. ಈ ಬಾರಿ ಚುನಾವಣೆಯಲ್ಲಿ ಜೆಡಿಎಸ್ ನ ಎಂ.ಜೆ.ಅಪ್ಪಾಜಿ ವಿರುದ್ಧ 11,567 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಈ 2013ರ ಚುನಾವಣೆಯಲ್ಲಿ ಇದೇ ಅಪ್ಪಾಜಿ ವಿರುದ್ಧ ಸಂಗಮೇಶ್ವರ ಸೋಲು ಕಂಡಿದ್ರು. ಇನ್ನು 2008 ಮತ್ತು 2004ರ ರ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರು.
3. ಶಿವಾನಂದ ಪಾಟೀಲ್: ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ವಿಧಾನ ಸಭಾ ಕ್ಷೇತ್ರದಿಂದ ಸತತವಾಗಿ ಎರಡನೇ ಬಾರಿ ಶಿವಾನಂದ ಪಾಟೀಲ್ ಗೆಲುವು ಕಂಡಿದ್ದಾರೆ. ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿರುವ ಶಿವಾನಂದ ಪಾಟೀಲ್ ಫಲಿತಾಂಶ ಬಳಿಕ ಬಿಜೆಪಿಯ ಸಂಪರ್ಕದಲ್ಲಿದ್ರು ಎಂಬ ಸುದ್ದಿಯೊಂದು ಕೇಳಿ ಬಂದಿತ್ತು.
4. ರಾಜಶೇಖರ್ ಪಾಟೀಲ್: ಬೀದರ್ ಜಿಲ್ಲೆಯ ಹುಮನಾಬಾದ್ ವಿಧಾನಸಭಾ ಕ್ಷೇತ್ರದಿಂದ ರಾಜಶೇಖರ್ ಪಾಟೀಲ್ ಶಾಸಕರಾಗಿ ಆಯ್ಕೆಗೊಂಡಿದ್ದಾರೆ. ಹುಮನಾಬಾದ್ 2008ರಲ್ಲಿ ರಚಿತವಾದ ವಿಧಾನಸಭಾ ಕ್ಷೇತ್ರವಾಗಿದ್ದು 2008ರಿಂದ ಸತತವಾಗಿ ಮೂರು ಬಾರಿ ಶಾಸಕರಾಗಿ ರಾಜಶೇಖರ್ ಪಾಟೀಲ್ ಆಯ್ಕೆಯಾಗಿದ್ದಾರೆ.
5. ಬಿ.ಸಿ.ಪಾಟೀಲ್: ಲಿಂಗಾಯತ ಕಾಂಗ್ರೆಸ್ ಶಾಸಕರಾಗಿರುವ ಬಿ.ಸಿ.ಪಾಟೀಲ್ ಫಲಿತಾಂಶದ ದಿನದಿಂದಲೂ ತಮಗೆ ಸಚಿವ ಸ್ಥಾನ ನೀಡಬೇಕೆಂದು ಹೈಕಮಾಂಡ್ ನಲ್ಲಿ ಬೇಡಿಕೆ ಇಟ್ಟಿದ್ದಾರೆ. ಹಾವೇರಿ ಜಿಲ್ಲೆಯಿಂದ ಕಾಂಗ್ರೆಸ್‍ನಿಂದ ಆಯ್ಕೆಯಾಗಿರುವ ಏಕ ಶಾಸಕರಾಗಿದ್ದಾರೆ. ಸತತವಾಗಿ ಮೂರು ಬಾರಿ ಶಾಸಕರಾಗಿರುವ ಬಿ.ಸಿ.ಪಾಟೀಲ್ ಅವರಿಗೆ ಬಿಜೆಪಿ ಆಫರ್ ನೀಡಿತ್ತು ಎನ್ನಲಾದ ಆಡಿಯೋ ಕ್ಲಿಪ್ ಅನ್ನು ಉಗ್ರಪ್ಪ ಬಿಡುಗಡೆ ಮಾಡಿದ್ದರು. ಈ ಮೂಲಕ ತಾನು ಪಕ್ಷಕ್ಕೆ ನಿಷ್ಠನಾಗಿದ್ದೇನೆ ಎಂಬುದನ್ನು ತೋರಿಸಿಕೊಟ್ಟಿದ್ದರು.
6. ಜೆ.ಎನ್.ಗಣೇಶ್: ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಗೊಂಡಿರುವ ಜೆ.ಎನ್.ಗಣೇಶ್ ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದಾರೆ. ಬಳ್ಳಾರಿ ಜಿಲ್ಲೆಯ ಕಂಪ್ಲಿ ವಿಧಾನಸಭಾ ಕ್ಷೇತ್ರದಿಂದ ಎರಡು ಬಾರಿ ಗೆಲುವು ಕಂಡಿದ್ದ ಬಿಜೆಪಿಯ ಟಿ.ಹೆಚ್.ಸುರೇಶ್ ಬಾಬು ವಿರುದ್ಧ ಗೆಲುವು ಕಂಡಿದ್ದಾರೆ.
7. ಆನಂದ್ ಸಿಂಗ್: ಫಲಿತಾಂಶದ ಬಳಿಕ ಕಾಣೆಯಾಗಿದ್ದ ವಿಜಯನಗರ ಶಾಸಕ ಆನಂದ್ ಸಿಂಗ್ ವಿಶ್ವಾಸಮತ ಸಾಬೀತಿನ ದಿನವೇ ಪ್ರತ್ಯಕ್ಷವಾಗಿದ್ರು. ಮೂಲ ಬಿಜೆಪಿ ನಾಯಕರಾದ ಆನಂದ್ ಸಿಂಗ್ ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್‍ನಿಂದ ಸ್ಪರ್ಧಿಸಿ ಗೆಲುವು ಕಂಡಿದ್ರು. ಈ ಹಿನ್ನೆಲೆಯಲ್ಲಿ ಆನಂದ್ ಸಿಂಗ್ ಮತ್ತೆ ಬಿಜೆಪಿ ಸೇರ್ತಾರ ಎಂಬ ಸುದ್ದಿಗಳು ಹರಿದಾಡುತ್ತಿವೆ.
8. ಪ್ರತಾಪ್ ಗೌಡ ಪಾಟೀಲ್: ಚುನಾವಣೆಯ ಫಲಿತಾಂಶದ ನಂತರ ರಾಜಕೀಯ ವಲಯದಲ್ಲಿ ಪ್ರಬಲವಾಗಿ ಕೇಳಿ ಬಂದ ಹೆಸರು ಮಸ್ಕಿ ಶಾಸಕ ಪ್ರತಾಪ್ ಗೌಡ ಪಾಟೀಲ್. ಇವರು ಸಹ ಫಲಿತಾಂಶದ ಬಳಿಕ ಕಾಣೆಯಾದವ್ರು ವಿಶ್ವಾಸಮತ ಸಾಬೀತು ದಿನ ಪ್ರತ್ಯಕ್ಷವಾಗಿದ್ರು. ಪಾಟೀಲರನ್ನು ಸಹ ಬಿಜೆಪಿ ಹೈಜಾಕ್ ಮಾಡಿದೆ ಎಂಬ ಸುದ್ದಿಗಳು ಕೇಳಿ ಬಂದಿದ್ದವು.
ಸಚಿವ ಸ್ಥಾನಕ್ಕಾಗಿ ಪೈಪೋಟಿ ನಡೆಸುತ್ತಿರುವ ಎಲ್ಲ ಶಾಸಕರನ್ನು ಕಾಂಗ್ರೆಸ್ ಸಮಾಧಾನಗೊಳಿಸುತ್ತದೆ. ಒಂದು ವೇಳೆ ಸಚಿವ ಸ್ಥಾನ ಸಿಗದ ಶಾಸಕರಿಗೆ ನಿಗಮ ಮಂಡಳಿಗಳ ಅಧ್ಯಕ್ಷರನ್ನಾಗಿ ಮಾಡಲು ಕಾಂಗ್ರೆಸ್ ಹೈಕಮಾಂಡ್ ಚಿಂತಿಸಿದೆ ಎನ್ನಲಾಗ್ತಿದೆ. ಆದರೆ ಬಂಡಾಯ ಏಳುವ ಶಾಸಕರು ಹೈಕಮಾಂಡ್ ಸೂಚನೆಗೆ ಬದ್ಧರಾಗಿರುತ್ತಾರಾ ಎನ್ನುವುದು ಸಂಪುಟ ರಚನೆಯ ಬಳಿಕ ಗೊತ್ತಾಗಲಿದೆ.
https://youtu.be/TNYU2OYWoS0