– ತಪನ್ ಕುಮಾರ್ ದೇಕಾಗೆ 2ನೇ ಬಾರಿಗೆ ಅವಧಿ ವಿಸ್ತರಣೆ ಮಾಡಿ ಕೊಟ್ಟ ಕೇಂದ್ರ
ನವದೆಹಲಿ: ಕೇಂದ್ರ ಗುಪ್ತಚರ ಇಲಾಖೆ ಮುಖ್ಯಸ್ಥ ತಪನ್ ಕುಮಾರ್ ದೇಕಾ (Tapan Kumar Deka) ಅವರ ಅವಧಿಯನ್ನು ಮತ್ತೊಂದು ವರ್ಷ ವಿಸ್ತರಣೆ ಮಾಡಿ ಕೇಂದ್ರ ಸರ್ಕಾರ ಆದೇಶಿಸಿದೆ.
ಭಯೋತ್ಪಾದನಾ ನಿಗ್ರಹ ತಜ್ಞನಿಗೆ ಎರಡನೇ ಬಾರಿಗೆ ಒಂದು ವರ್ಷದ ವಿಸ್ತರಣೆಯನ್ನು ನೀಡಲಾಗಿದೆ. ದೇಕಾ ಅವರನ್ನು 2026ರ ಜೂನ್ ವರೆಗೆ ಗುಪ್ತಚರ ಇಲಾಖೆ (Intelligence Bureau) ಮುಖ್ಯಸ್ಥರಾಗಿ ಮುಂದುವರಿಯಲಿ. ಮುಂದಿನ ಆದೇಶದವರೆಗೆ ಅವರ ಅವಧಿ ವಿಸ್ತರಿಸಲಾಗಿದೆ ಎಂದು ಕ್ಯಾಬಿನೆಟ್ ನೇಮಕಾತಿ ಸಮಿತಿ ಮಂಗಳವಾರ ತನ್ನ ಆದೇಶದಲ್ಲಿ ತಿಳಿಸಿದೆ. ಇದನ್ನೂ ಓದಿ: ಮೇ 22ರಂದು ಪ್ರಧಾನಿ ಮೋದಿಯಿಂದ ರಾಜ್ಯದ 5 ಸೇರಿ 103 ಅಮೃತ ರೈಲ್ವೆ ನಿಲ್ದಾಣಗಳ ಉದ್ಘಾಟನೆ
ದೇಕಾ ಅವರು 1988-ಬ್ಯಾಚ್ ಇಂಡಿಯನ್ ಪೊಲೀಸ್ ಸೇವೆ (ಐಪಿಎಸ್) ಹಿಮಾಚಲ ಪ್ರದೇಶದ ಕೇಡರ್‌ನ ಅಧಿಕಾರಿಯಾಗಿದ್ದು, ಭಯೋತ್ಪಾದನೆ ಮತ್ತು ಆಮೂಲಾಗ್ರೀಕರಣಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ನಿಭಾಯಿಸುವಲ್ಲಿ ಪರಿಣತಿ ಹೊಂದಿದ್ದಾರೆ. ಪಹಲ್ಗಾಮ್ ಭಯೋತ್ಪಾದಕ ದಾಳಿ ಮತ್ತು ಆಪರೇಷನ್ ಸಿಂಧೂರ ಕಾರ್ಯಾಚರಣೆ ಹೊತ್ತಿನಲ್ಲಿ ಪಾಕಿಸ್ತಾನದಲ್ಲಿ ಮೂಲದೊಂದಿಗೆ ಭಯೋತ್ಪಾದನಾ ವಿರೋಧಿ ಪ್ರಕರಣಗಳನ್ನು ನಿರ್ವಹಿಸುವಲ್ಲಿ ಅವರು ಪರಿಣತರಾಗಿದ್ದಾರೆ.
2022 ರ ಜೂನ್ ತಿಂಗಳಲ್ಲಿ ಇವರನ್ನು ಎರಡು ವರ್ಷಗಳ ಅವಧಿಗೆ ಗುಪ್ತಚರ ಬ್ಯೂರೋದ ಮುಖ್ಯಸ್ಥರನ್ನಾಗಿ ನೇಮಿಸಲಾಯಿತು. 2024 ರ ಜೂನ್‌ನಲ್ಲಿ ಒಂದು ವರ್ಷದವರೆಗೆ ಅವಧಿ ವಿಸ್ತರಿಸಲಾಗಿತ್ತು. ಗುಪ್ತಚರ ಇಲಾಖೆಯ ಮುಖ್ಯಸ್ಥರಾಗಿ ನೇಮಕಗೊಳ್ಳುವ ಮೊದಲು ದೇಕಾ ಎರಡು ದಶಕಗಳ ಕಾಲ ಐಬಿಯ ಕಾರ್ಯಾಚರಣೆ ವಿಭಾಗದ ಮುಖ್ಯಸ್ಥರಾಗಿದ್ದರು. ಇದನ್ನೂ ಓದಿ: ಅಮೃತಸರದ ಸ್ವರ್ಣ ಮಂದಿರದ ಆವರಣದೊಳಗೆ ವಾಯು ರಕ್ಷಣಾ ವ್ಯವಸ್ಥೆ ನಿಯೋಜನೆ
2008 ರಲ್ಲಿ ಮುಂಬೈನಲ್ಲಿ ನಡೆದ 26/11 ಭಯೋತ್ಪಾದಕ ದಾಳಿಯ ಸಂದರ್ಭದಲ್ಲಿ ಅವರು ಪ್ರತಿ-ಕಾರ್ಯಾಚರಣೆಯ ಉಸ್ತುವಾರಿ ವಹಿಸಿದ್ದರು. 2000 ರ ದಶಕದಲ್ಲಿ ದೇಶದಲ್ಲಿ ಹಲವಾರು ಭಯೋತ್ಪಾದಕ ದಾಳಿಗೆ ಕಾರಣವಾದ ಭಾರತೀಯ ಮುಜಾಹಿದ್ದೀನ್ ವಿರುದ್ಧದ ಕಾರ್ಯಾಚರಣೆಗಳನ್ನು ಮುನ್ನಡೆಸಿದ್ದರು.