ಉಡುಪಿ: ಸಿಎಂ ಸಿದ್ದರಾಮಯ್ಯ ಅವರ ಮೇಲೆ ಬುದ್ದಿಜೀವಿಗಳ ಒತ್ತಡವಿದೆ. ಕೃಷ್ಣಮಠಕ್ಕೆ ಹೋಗಬೇಡಿ ಎಂದು ಅವರೇ ಒತ್ತಡ ಹೇರುತ್ತಿದ್ದಾರೆ ಎಂದು ಉಡುಪಿ ಪೇಜಾವರ ಮಠಾಧೀಶ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಸ್ವಾಮೀಜಿ, ನಮಗೂ ಸಿದ್ದರಾಮಯ್ಯರಿಗೂ ಹಲವು ಬಾರಿ ಭೇಟಿಯಾಗಿದೆ. ಚೆನ್ನಾಗಿಯೇ ಮಾತನಾಡಿಕೊಂಡಿದ್ದೇವೆ. ಬುದ್ಧಿ ಜೀವಿಗಳು ಸಿಎಂ ಮೇಲೆ ಒತ್ತಡ ಹೇರುತ್ತಿದ್ದಾರೆ. ಮಠಕ್ಕೆ ಹೋಗಬೇಡಿ ಅಂತ ಹೇಳುತ್ತಾರೆ. ಕೆಲವು ಬುದ್ದಿಜೀವಿಗಳಿಗೆ ಕೃಷ್ಣಮಠ ಆಗುವುದಿಲ್ಲ. ಶ್ರೀಕೃಷ್ಣ – ಪೇಜಾವರಶ್ರೀ ಅಂದ್ರೆ ಕೆಲ ಬುದ್ಧಿಜೀವಿಗಳಿಗೆ ಆಗಲ್ಲ ಅಂತ ತಿರುಗೇಟು ನೀಡಿದರು.
Advertisement
ಸಿಎಂ ಸಿದ್ದರಾಮಯ್ಯ ಅವರಿಗೆ ಮಠಕ್ಕೆ ಈ ಹಿಂದೆ ಹಲವು ಬಾರಿ ಆಹ್ವಾನ ಕೊಟ್ಟಿದ್ದೆವು. ಅವರು ಬರುವುದಿಲ್ಲ ಅಂತ ಗೊತ್ತಾದ ಮೇಲೆ ಈ ಬಾರಿ ಆಹ್ವಾನಿಸಿಲ್ಲ, ಆಸಕ್ತಿಯಿಲ್ಲ ಎಂದ ಮೇಲೆ ಈ ಬಾರಿ ಆಹ್ವಾನ ನೀಡಲಿಲ್ಲ. ಸಿಎಂ ಕೃಷ್ಣಮಠಕ್ಕೆ ಬರುವ ಆಸಕ್ತಿಯೂ ತೋರಿಸಿಲ್ಲ. ಮುಂದೊಮ್ಮೆ ಬರುವ ಆಶ್ವಾಸನೆಯೂ ನೀಡಿಲ್ಲ ಆ ಮನಸ್ಸು ಸಿದ್ದರಾಮಯ್ಯ ಅವರಿಗೆ ಇದ್ದಹಾಗಿಲ್ಲ ಅಂತ ಹೇಳಿದರು.
Advertisement
ಭಾನುವಾರ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಸಿಎಂ ಉಡುಪಿಗೆ ಭೇಟಿ ನೀಡಿದ್ದರು. ಈ ವೇಳೆ ಕೃಷ್ಣ ಮಠಕ್ಕೆ ಯಾಕೆ ಭೇಟಿ ನೀಡುವುದಿಲ್ಲ ಎಂದು ಮಾಧ್ಯಮಗಳು ಕೇಳಿದ ಪ್ರಶ್ನೆಗೆ, ನಾನು ಈ ಹಿಂದೆ ಮಠಕ್ಕೆ ಹೋಗಿದ್ದೆ. ಆದರೆ ಈಗ ಹೋಗಲ್ಲ. ಮಠದಿಂದ ಈ ಬಾರಿ ನನಗೆ ಆಹ್ವಾನವೂ ಇಲ್ಲ ಎಂದರು. ಪೇಜಾವರ ಶ್ರೀಗಳ ಜೊತೆ ನನಗೆ ವೈಯಕ್ತಿಕವಾಗಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ, ನಾನು ಆರೂವರೆ ಕೋಟಿ ಜನರ ಜೊತೆ ಚೆನ್ನಾಗಿಯೇ ಇದ್ದೇನೆ. ಬಸವಣ್ಣನವರ ವಚನವನ್ನು ಹೇಳಿ ತೆರಳಿದ್ದರು.
Advertisement