ನವದೆಹಲಿ: ಬೆಂಗಳೂರಿನಲ್ಲಿ (Bengaluru) ಸ್ಟ್ಯಾಂಡ್-ಅಪ್ ಕಾಮಿಡಿಯನ್ ಮುನಾವರ್ ಫಾರೂಕಿ (Munawar Faruqui) ಹತ್ಯೆಗೆ ಯತ್ನ ನಡೆಸಿದ ಸ್ಫೋಟಕ ವಿಚಾರ ಈಗ ಬೆಳಕಿಗೆ ಬಂದಿದೆ.
ಸದ್ಯ ವಿದೇಶದಲ್ಲಿರುವ ಗ್ಯಾಂಗ್‌ಸ್ಟಾರ್‌ಗಳಾದ ರೋಹಿತ್ ಗೋದಾರ ಮತ್ತು ಗೋಲ್ಡಿ ಬ್ರಾರ್ (Rohit Godara, Goldy Brar) ಸೂಚನೆಯ ಮೇರೆಗೆ ಮುನಾವರ್ ಫಾರೂಕಿಯನ್ನು ಹತ್ಯೆ ಮಾಡಲು ಹಂತಕರು ಸಂಚು ರೂಪಿಸಿದ್ದ ವಿಚಾರ ದೆಹಲಿ ಪೊಲೀಸರ ತನಿಖೆಯಿಂದ ಹೊರ ಬಿದ್ದಿದೆ.
ಡಿಸೆಂಬರ್ 2024 ರಲ್ಲಿ ಹರಿಯಾಣದಲ್ಲಿ ನಡೆದ ತ್ರಿವಳಿ ಕೊಲೆ ಪ್ರಕರಣದ ಆರೋಪಿಗಳಾದ ಶೂಟರ್ ರಾಹುಲ್ ಮತ್ತು ಸಾಹಿಲ್ ದೆಹಲಿಯಲ್ಲಿರುವ ಬಗ್ಗೆ ಖಚಿತ ಮಾಹಿತಿ ದೆಹಲಿ ಪೊಲೀಸರಿಗೆ ಸಿಕ್ಕಿತ್ತು. ಈ ಮಾಹಿತಿ ಆಧಾರದ ಮೇಲೆ ಇಬ್ಬರನ್ನು ಹಿಡಿಯಲು ಪೊಲೀಸರು ತೆರಳಿದ್ದರು.
ಗುರುವಾರ ಬೆಳಗ್ಗೆ 3 ಗಂಟೆಗೆ ದೆಹಲಿಯ ಐತ್ಪುರ್-ಕಾಳಿಂದಿ ಕುಂಜ್ ರಸ್ತೆಯಲ್ಲಿ ಬೈಕಿನಲ್ಲಿ ತೆರಳುತ್ತಿದ್ದಇಬ್ಬರನ್ನು ನಿಲ್ಲಿಸುವಂತೆ ಕೇಳಿದಾಗ ಇವರು ಪೊಲೀಸರ ಮೇಲೆ ಗುಂಡು ಹಾರಿಸಿದ್ದಾರೆ. ಪ್ರತಿಯಾಗಿ ಪೊಲೀಸರು ಇವರ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ.
ವಿಚಾರಣೆಯ ಸಂದರ್ಭದಲ್ಲಿ ಹಿಂದೂ (Hindu) ಧರ್ಮ ಮತ್ತು ದೇವರನ್ನು ಅವಹೇಳನ ಮಾಡುತ್ತಿರುವ ಮುನಾವರ್ ಫಾರೂಕಿ ಹತ್ಯೆ ನಡೆಸುವಂತೆ ರೋಹಿತ್ ಗೋದಾರ ಮತ್ತು ಗೋಲ್ಡಿ ಬ್ರಾರ್ ಕಡೆಯಿಂದ ನಮಗೆ ಸೂಚನೆ ಬಂದಿತ್ತು. ದೆಹಲಿಯಲ್ಲಿ ಮುನಾವರ್ ಫಾರೂಕಿ ಇರುವ ವಿಚಾರ ತಿಳಿದು ಹತ್ಯೆ ಮಾಡಲು ನಾವು ಬಂದಿದ್ದೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಗಾಯಕ ಜುಬೀನ್ ಗಾರ್ಗ್ ಸಾವು ಕೇಸ್ – ಮ್ಯಾನೇಜರ್, ಸಿಂಗಾಪುರದ ಕಾರ್ಯಕ್ರಮ ಆಯೋಜಕ ಅರೆಸ್ಟ್
ದೆಹಲಿಗೆ ಬರುವ ಮೊದಲು ಮುಂಬೈ ಮತ್ತು ಬೆಂಗಳೂರಿನಲ್ಲಿ ಫಾರೂಕಿ ಹತ್ಯೆಗೆ ಪ್ಲ್ಯಾನ್ ಮಾಡಿದ್ದರು. ಬೆಂಗಳೂರಿನಲ್ಲಿ ಕಾರ್ಯಕ್ರಮ ನಡೆದ ಜಾಗದ ಹೊರ ಭಾಗದಲ್ಲಿ ಫಾರೂಕಿ ಹತ್ಯೆಗೆ ಸಂಚು ರೂಪಿಸಿ ಕಾಯುತ್ತಿದ್ದರು. ಆದರೆ ಫಾರೂಕಿ ಬೇರೆ ಕಾರಿನಲ್ಲಿ ಹೊರಟುಹೋಗಿದ್ದರಿಂದ ಕೊನೆ ಕ್ಷಣದಲ್ಲಿ ಈ ಪ್ಲ್ಯಾನ್ ವಿಫಲವಾಗಿತ್ತು ಎಂದು ಮೂಲಗಳನ್ನು ಆಧಾರಿಸಿ ಮಾಧ್ಯಮವೊಂದು ವರದಿ ಮಾಡಿದೆ.
2021 ರಲ್ಲಿ ದ್ವೇಷ ಭಾಷಣ ಮಾಡಿದ್ದಕ್ಕೆ ಫಾರೂಕಿಯನ್ನು ಮಧ್ಯಪ್ರದೇಶದಲ್ಲಿ ಬಂಧಿಸಲಾಗಿತ್ತು. 1 ತಿಂಗಳು ಜೈಲಿನಲ್ಲಿ ಕಳೆದ ಬಳಿಕ ಜಾಮೀನು ಮಂಜೂರು ಮಾಡಿತ್ತು. ಕಳೆದ ವರ್ಷ ಮುಂಬೈ ಪೊಲೀಸರು ಅಕ್ರಮ ಹುಕ್ಕಾ ಬಾರ್ ಮೇಲೆ ದಾಳಿ ನಡೆಸಿದ ಬಳಿಕ ಮತ್ತೆ ಫಾರೂಕಿಯ ಬಂಧನವಾಗಿತ್ತು. ನಂತರ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು.
ಫಾರೂಕಿ 2024 ರ ಹಿಂದಿ ಬಿಗ್ ಬಾಸ್ ಗೆದ್ದಿದ್ದು, ಇನ್‌ಸ್ಟಾಗ್ರಾಮ್‌ನಲ್ಲಿ 1.4 ಕೋಟಿ ಫಾಲೋವರ್‌ಗಳನ್ನು ಹೊಂದಿದ್ದಾರೆ.