ಹುಬ್ಬಳ್ಳಿ: ಜಗತ್ತನ್ನೇ ಬೆಚ್ಚಿಬಿಳಿಸುವಂತೆ ಮಾಡಿರುವ ಅಪಾಯಕಾರಿ ಕೊರೊನಾ ವೈರಸ್‍ನಿಂದ ಸಾಕಷ್ಟು ಎಚ್ಚರಿಕೆ ವಹಿಸಬೇಕಿರುವ ಕಾರಣ ಚೀನಾದಿಂದ ಬಂದ ಪ್ರಯಾಣಿಕರು ಕಡ್ಡಾಯವಾಗಿ ಕಿಮ್ಸ್ ನಲ್ಲಿ ಪರೀಕ್ಷೆಗೆ ಒಳಗಾಗಿ, ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು ಎಂದು ನಗರದ ವಿಮಾನ ನಿಲ್ದಾಣದಲ್ಲಿ ಸೂಚನಾ ಫಲಕ ಅಳವಡಿಸಲಾಗಿದೆ.
ಚೀನಾ, ಅದರಲ್ಲಿಯೂ ವಿಶೇಷವಾಗಿ ವುಹಾನ್ ನಗರದಿಂದ ಬಂದವರು ಮಾಹಿತಿ ಕೊಡಬೇಕು. ಸೋಂಕಿನ ಲಕ್ಷಣಗಳು ಕಂಡು ಬಂದರೆ ವಿಮಾನ ನಿಲ್ದಾಣದ ಅಧಿಕಾರಿಗಳಿಗೂ ಮಾಹಿತಿ ನೀಡುವುದು ಕಡ್ಡಾಯ ಎಂದು ಫಲಕದಲ್ಲಿ ತಿಳಿಸಲಾಗಿದೆ. ನಿಲ್ದಾಣದಿಂದ ಹೊರಬರುವ ಪ್ರವೇಶ ದ್ವಾರದಲ್ಲಿಯೇ ಈ ಫಲಕ ಅಳವಡಿಸಲಾಗಿದ್ದು, ರೋಗದ ಲಕ್ಷಣಗಳು ಹೇಗಿರುತ್ತವೆ ಎನ್ನುವುದರ ಸಂಕೇತಗಳನ್ನು ತೋರಿಸಲಾಗಿದೆ.
Advertisement
Advertisement
ದಿನೇದಿನೇ ಮಹಾಮಾರಿ ಕೊರೊನಾ ವೈರಸ್‍ಗೆ ಬಲಿಯಾಗುತ್ತಿರುವವ ಸಂಖ್ಯೆ ಹೆಚ್ಚಾಗುತ್ತಿದ್ದು, ಭಾನುವಾರ 800 ಮಂದಿ ಚೀನಾದಲ್ಲಿ ಕೊರೊನಾಗೆ ಸಾವನ್ನಪ್ಪಿದ್ದರೆ ಈ ಸಂಖ್ಯೆ ಸೋಮವಾರ 908ಕ್ಕೆ ತಲುಪಿದೆ. ಭಾನುವಾರ 3 ಸಾವಿರ ಹೊಸ ಪ್ರಕರಣ ಚೀನಾದಲ್ಲಿ ದಾಖಲಾಗಿದ್ದು, ಈವರೆಗೆ ಚೀನಾದಲ್ಲಿ ಒಟ್ಟು 40 ಸಾವಿರ ಮಂದಿಗೆ ಕೊರೊನಾ ಸೋಂಕು ತಗುಲಿದೆ ಎಂದು ವರದಿಯಾಗಿದೆ. ದಿನೇ ದಿನೇ ಸಾವಿನ ಸಂಖ್ಯೆ ಏರಿಕೆ ಆಗುತ್ತಿರುವುದು ಚೀನಾದಲ್ಲಿ ಭೀತಿ ಹೆಚ್ಚಿಸಿದ್ದು, ಈ ಬಗ್ಗೆ ಚೀನಾ ಸರ್ಕಾರ ಅಗತ್ಯ ಕ್ರಮಕೈಗೊಳ್ಳುತ್ತಿದ್ದು, ಸೋಂಕು ಹರಡದಂತೆ ನಿಗವಹಿಸುತ್ತಿದೆ.