ಮುಂಬೈ: ಪುಣೆಯಲ್ಲಿ ಪೋರ್ಶೆ ಕಾರು ಡಿಕ್ಕಿ (Pune Porsche Crash) ಹೊಡೆದು ಮೃತಪಟ್ಟ ಮಗಳನ್ನು ನೆನೆದು ತಾಯಿ ಕಣ್ಣೀರಿಟ್ಟಿದ್ದಾರೆ. ಅವಳನ್ನು ವರನ ಮನೆಗೆ ಡೋಲಿಯಲ್ಲಿ (ಪಲ್ಲಕ್ಕಿ) ಕರೆದೊಯ್ಯಬೇಕಿತ್ತು. ಆದರೆ ಶವಪೆಟ್ಟಿಗೆಯಲ್ಲಿ ಹೆಣ ಸಾಗಿಸುವಂತಾಯಿತು ಎಂದು ನೊಂದು ನುಡಿದಿದ್ದಾರೆ.
ಅನೀಶ್ ಅವಧಿಯಾ ಮತ್ತು ಅಶ್ವಿನಿ ಕೋಸ್ತಾ (Ashwini Kostha) ಇಬ್ಬರೂ 24 ವಯಸ್ಸಿನ ಇಂಜಿನಿಯರ್‌ಗಳು. ಅಪಘಾತದ ದಿನ ರಾತ್ರಿ ಇಬ್ಬರೂ ಸ್ನೇಹಿತರನ್ನು ಭೇಟಿಯಾಗಿ ಹಿಂದಿರುಗುತ್ತಿದ್ದರು. ಈ ವೇಳೆ, ಕುಡಿದ ಅಮಲಿನಲ್ಲಿದ್ದ ಅಪ್ರಾಪ್ತ ತನ್ನ ಐಷಾರಾಮಿ ಪೋರ್ಶೆ ಕಾರಿನಲ್ಲಿ ವೇಗವಾಗಿ ಬಂದು ಬೈಕ್‌ಗೆ ಡಿಕ್ಕಿ ಹೊಡೆದ. ಡಿಕ್ಕಿ ರಭಸಕ್ಕೆ ಬೈಕ್‌ನ ಹಿಂಬದಿ ಕುಳಿತಿದ್ದ ಅಶ್ವಿನಿ 20 ಅಡಿ ಎತ್ತರಕ್ಕೆ ಹಾರಿ ನೆಲಕ್ಕೆ ಅಪ್ಪಳಿಸಿ ಬಿದ್ದಳು. ಬೈಕ್ ಓಡಿಸುತ್ತಿದ್ದ ಅನೀಶ್ ಹಾರಿ ಅಲ್ಲೇ ನಿಂತಿದ್ದ ಕಾರಿನ ಮೇಲೆ ಬಿದ್ದ. ಇಬ್ಬರೂ ಸ್ಥಳದಲ್ಲೇ ಕೊನೆಯುಸಿರೆಳೆದರು ಎಂದು ಪ್ರತ್ಯಕ್ಷದರ್ಶಿಗಳು ಹೇಳುತ್ತಾರೆ. ಇದನ್ನೂ ಓದಿ: ಪುಣೆ ಪೋರ್ಶೆ ಕಾರು ಅಪಘಾತಕ್ಕೆ ಟೆಕ್ಕಿಗಳು ಬಲಿ ಪ್ರಕರಣ – ಅಪ್ರಾಪ್ತನ ಜಾಮೀನು ರದ್ದು
ಜಬಲ್‌ಪುರದ ನಿವಾಸದಲ್ಲಿರುವ ಅಶ್ವಿನಿ ತಾಯಿ, ಮಗಳ ಸಾವಿನ ಶಾಕ್‌ನಿಂದ ಇನ್ನೂ ಹೊರಬಂದಿಲ್ಲ. ‘ನನ್ನ ಮಗಳನ್ನು ವರನ ಮನೆಗೆ ಡೋಲಿಯಲ್ಲಿ (ಪಲ್ಲಕ್ಕಿ) ಕರೆದೊಯ್ಯಬೇಕಿತ್ತು. ಆದರೆ ಶವಪೆಟ್ಟಿಗೆಯಲ್ಲಿ ಹೆಣ ಸಾಗಿಸುವಂತಾಗಿದೆ’ ಎಂದು ಕಣ್ಣೀರು ಹಾಕಿದ್ದಾರೆ.
ನನ್ನ ಮಗಳು ಅಶ್ವಿನಿಗೆ ನ್ಯಾಯ ಸಿಗಬೇಕು. ಅಪ್ರಾಪ್ತ ಬಾಲಕ ಮತ್ತು ಅವನ ಹೆತ್ತವರಿಗೆ ಕಠಿಣ ಶಿಕ್ಷೆಯಾಗಬೇಕು. ಅವರು ಅವನನ್ನು ಸರಿಯಾಗಿ ಬೆಳೆಸಲಿಲ್ಲ. ಅವರು ಅವನಿಗೆ ಕಾರನ್ನು ನೀಡಬಾರದಿತ್ತು ಎಂದು ಅಶ್ವನಿ ತಾಯಿ ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಪೋರ್ಶೆ ಕಾರಿಗೆ ಟೆಕ್ಕಿಗಳು ಬಲಿ ಪ್ರಕರಣ – ಅಪ್ರಾಪ್ತನ ತಂದೆಗೆ 2 ದಿನ ಪೊಲೀಸ್ ಕಸ್ಟಡಿ
ಪೋರ್ಶೆ ಕಾರನ್ನು ಗಂಟೆಗೆ 200 ಕಿ.ಮೀ ವೇಗದಲ್ಲಿ ಚಲಾಯಿಸಿರುವ ಅಪ್ರಾಪ್ತ ಹೆಚ್ಚು ಕುಡಿದಿದ್ದ ಎಂದು ಪೊಲೀಸರು ಹೇಳಿದ್ದಾರೆ. ಬಾಲಾಪರಾಧ ನ್ಯಾಯ ಮಂಡಳಿ ಮೊದಲು ಆರೋಪಿ ಅಪ್ರಾಪ್ತನಿಗೆ ಜಾಮೀನು ನೀಡಿತ್ತು. ಈಗ ಜಾಮೀನು ರದ್ದುಗೊಳಿಸಿದೆ.
ಆದೇಶ ಕುರಿತು ಅಸಮಾಧಾನ ಹೊರಹಾಕಿರುವ ಅಶ್ವಿನಿ ತಾಯಿ, ಇದು ತಮಾಷೆಯೇ? ಆತ ಯಾವ ಪ್ರಬಂಧವನ್ನು ಬರೆಯುತ್ತಾರೆ? ಅವರು ಜೋಕ್ ಮಾಡುತ್ತಿದ್ದಾರೆಯೇ? ನನ್ನ ಮಗಳು ಅತ್ಯಂತ ಪ್ರತಿಭಾವಂತ ಹುಡುಗಿ. ಬದುಕಿನಲ್ಲಿ ತುಂಬಾ ಕನಸುಗಳನ್ನು ಕಟ್ಟಿಕೊಂಡಿದ್ದಳು ಎಂದು ಮಗಳನ್ನು ನೆನೆದು ಭಾವುಕರಾದರು. ಇದನ್ನೂ ಓದಿ: ರಾಗಾ ಒಬ್ಬ ಮಹಾನ್ ವ್ಯಕ್ತಿ, ಗಾಂಧೀಜಿ ಕನಸು ನನಸು ಮಾಡ್ತಿದ್ದಾರೆ: ಆಚಾರ್ಯ ಪ್ರಮೋದ್ ಕೃಷ್ಣಂ ಕಿಡಿ
ಪುತ್ರ ಅನೀಶ್ ಅವಧಿಯಾ ತಾಯಿ ಪ್ರತಿಕ್ರಿಯಿಸಿ, ಅವನು ನನ್ನ ಮಗನನ್ನು ಕೊಂದ. ಈಗ ನಾನು ನನ್ನ ಮಗನನ್ನು ನೋಡಲು ಸಾಧ್ಯವಿಲ್ಲ. ಇದು ಆ ಹುಡುಗನ ತಪ್ಪು. ನೀವು ಅದನ್ನು ಕೊಲೆ ಎಂದು ಪರಿಗಣಿಸಬೇಕು. ಇಷ್ಟು ದೊಡ್ಡ ತಪ್ಪು ಮಾಡದೇ ಇದ್ದಿದ್ದರೆ ಯಾರೂ ಸಾಯುತ್ತಿರಲಿಲ್ಲ. ಅವರ ಕುಟುಂಬದವರು ಗಮನ ಹರಿಸಿದ್ದರೆ ಇಂದು ನನ್ನ ಮಗ ಬದುಕಿರುತ್ತಿದ್ದ ಎಂದು ನೊಂದು ನುಡಿದಿದ್ದಾರೆ.