ಮಂಗಳೂರು: ನಗರದ ಜನರು ನೀರು ಕುಡಿಯೋ ಮೊದ್ಲು ಇನ್ಮುಂದೆ ಸ್ವಲ್ಪ ಯೋಚಿಸಬೇಕು. ಯಾಕಂದ್ರೆ ಮಂಗಳೂರು ನಗರವಾಸಿಗಳಿಗೆ ಶುದ್ದ ಕುಡಿಯುವ ನೀರಿಗೆ ಬದಲಾಗಿ ಡ್ರೈನೇಜ್ ನೀರನ್ನು ಕುಡಿಯುತ್ತಿದ್ದಾರೆ. ಪಾಲಿಕೆ ಡ್ರೈನೇಜ್ ನೀರು ಕುಡಿಸೋದರ ಜಾಡು ಹಿಡಿದು ಹೋದ ಪಬ್ಲಿಕ್ ಟಿವಿಗೆ ನಿಜ ಸಂಗತಿ ಗೊತ್ತಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನಲ್ಲಿ ನೇತ್ರಾವತಿ ನದಿಗೆ ಅಡ್ಡಲಾಗಿ ಕಟ್ಟಿರುವ ತುಂಬೆ ಡ್ಯಾಂನಿಂದ ಮಂಗಳೂರು ನಗರಕ್ಕೆ ಶುದ್ಧ ಕುಡಿಯೋ ನೀರು ಪೂರೈಕೆಯಾಗುತ್ತೆ. ಆದ್ರೆ ಇತ್ತೀಚೆಗೆ ನಗರದ ಜನರಿಗೆ ಹಲವು ರೋಗಗಳು ಕಾಣಿಸಿಕೊಂಡ ಪರಿಣಾಮ ನೀರನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಆಗ ಕೊಲಿಫಾರಂ ಬ್ಯಾಕ್ಟೀರಿಯಾ ಇರೋದು ಪತ್ತೆಯಾಗಿದೆ. ಇದಕ್ಕೆಲ್ಲಾ ಕೊಳಚೆ ನೀರು ಡ್ಯಾಂಗೆ ಸೇರುತ್ತಿರೋದೇ ಕಾರಣ ಎಂಬ ವಿಷಯ ಗೊತ್ತಾಗಿದೆ.
ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಕ್ಷೇತ್ರವಾಗಿರುವ ಬಂಟ್ವಾಳದಲ್ಲಿ ಕೊಳಚೆ ನೀರಿನ ಶುದ್ಧೀಕರಣ ಘಟಕ ಇಲ್ಲ. ಅಲ್ಲದೇ 38 ಕೋಟಿ ರೂಪಾಯಿ ವೆಚ್ಚದಲ್ಲಿ 2003ರಲ್ಲಿ ಆರಂಭವಾದ ಒಳಚರಂಡಿ ಕಾಮಗಾರಿ ಇನ್ನೂ ಪೂರ್ತಿಯಾಗದೇ ಇರೋದು ಸಮಸ್ಯೆಗೆ ಕಾರಣ. ಈ ಬಗ್ಗೆ ಪಾಲಿಕೆಗೆ ಗೊತ್ತಿದ್ರೂ ಬಾಯಿ ಮುಚ್ಚಿ ಕುಳಿತಿದೆ. ಸಮಸ್ಯೆ ಬಗ್ಗೆ ಕೇಳಿದ್ರೆ ಇದೇನು ಹೊಸತಲ್ಲ ಅಂತ ಮೇಯರ್ ಹರಿನಾಥ್ ಬೇಜವಾಬ್ದಾರಿಯ ಉತ್ತರ ಕೊಡ್ತಿದ್ದಾರೆ.
ಒಟ್ಟಿನಲ್ಲಿ ಜನಪ್ರತಿನಿಧಿಗಳು ಹಾಗೂ ಅಧಿಕಾರಗಳ ಜಾಣ ಕುರುಡುತನದಿಂದಾಗಿ ಮಂಗಳೂರಿನ ಜನ ಡ್ರೈನೇಜ್ ನೀರನ್ನ ಕುಡಿಯುವಂತಾಗಿದೆ. ಇನ್ನಾದ್ರು ಸಮಸ್ಯೆ ಬಗೆಹರಿಸದಿದ್ರೆ ಜನರೇ ತಕ್ಕ ಪಾಠ ಕಲಿಸಲಿದ್ದಾರೆ.