ಶಿವಮೊಗ್ಗ: ಮಹಿಳೆಯೊಬ್ಬರ ಫೋಟೋದ ಮೇಲೆ ಅಶ್ಲೀಲ ಪದ ಬಳಸಿ ಎಡಿಟ್ ಮಾಡಿ, ಫೋಟೋವನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಅಪ್ಲೋಡ್ ಮಾಡಿ ಮಹಿಳೆ ಖಾತೆಗೆ ಟ್ಯಾಗ್ ಮಾಡುತ್ತಿದ್ದ ಆರೋಪಿಯನ್ನು ನಗರದ ಸಿಇಎನ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಸೊರಬ ತಾಲೂಕಿನ ಕೆಇಬಿ ಕಾಲೊನಿಯ ಮೇಘರಾಜ್(19) ಎಂದು ಗುರುತಿಸಲಾಗಿದೆ. ಬಂಧಿತ ಆರೋಪಿ ಮೇಘರಾಜ್ ಮಹಿಳೆಯೊಬ್ಬರ ಫೋಟೋ ಮೇಲೆ ಅಶ್ಲೀಲ ಪದಗಳನ್ನು ಬರೆದು, ನಕಲಿ ಇನ್‍ಸ್ಟಾಗ್ರಾಮ್ ಖಾತೆ ತೆರೆದು ಅಪ್ಲೋಡ್ ಮಾಡುತ್ತಿದ್ದನು. ಅಲ್ಲದೇ ಅಶ್ಲೀಲ ಪದ ಬಳಸಿದ್ದ ಫೋಟೋವನ್ನು ಆ ಮಹಿಳೆಯ ಇನ್‍ಸ್ಟಾಗ್ರಾಮ್ ಖಾತೆಗೆ ಟ್ಯಾಗ್ ಮಾಡಿ ಕಿರುಕುಳ ನೀಡುತ್ತಿದ್ದನು.
ಯುವಕನ ದುಷ್ಕೃತ್ಯದಿಂದ ಮುಜುಗರಕ್ಕೀಡಾದ ಮಹಿಳೆ ಶಿವಮೊಗ್ಗದ ಸಿಇಎನ್ ಪೊಲೀಸರಿಗೆ ದೂರು ನೀಡಿದ್ದರು. ಸಿಇಎನ್ ಠಾಣೆ ಇನ್ಸ್‌ಪೆಕ್ಟರ್ ಕೆ.ಟಿ ಗುರುರಾಜ್ ನೇತೃತ್ವದಲ್ಲಿ ತನಿಖೆ ನಡೆಸಿದ ಪೊಲೀಸರು ಆರೋಪಿ ಮೇಘರಾಜ್‍ನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.