ಮಂಗಳೂರು: ಉಸ್ತುವಾರಿ ಸಚಿವ ರಮಾನಾಥ ರೈ ಬಟ್ಟೆ ಒಗೆದವ ನಾನು. ಅವರ ಅಂಗಿ ಪ್ಯಾಂಟ್ 20 ವರ್ಷ ಒಗೆದಿದ್ದೇನೆ. ದಿನಂಪ್ರತಿ ಇಸ್ತ್ರಿ ಮಾಡಿಕೊಟ್ಟಿದ್ದೇನೆ. ಆದ್ರೆ ಇದೀಗ ಘಟನೆಯಾಗಿ 8 ದಿನ ಆಗ್ತಾ ಬಂದಿದೆ. ಆದ್ರೂ ರೈ ನನ್ನ ನೋವನ್ನು ಕೇಳಲು ಬಂದಿಲ್ಲ ಅಂತ ಆರ್‍ಎಸ್‍ಎಸ್ ಕಾರ್ಯಕರ್ತ ಮೃತ ಶರತ್ ಮಡಿವಾಳ ತಂದೆ ಬೇಸರ ವ್ಯಕ್ತಪಡಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳದ ಸಜಿಪದಲ್ಲಿ ಪಬ್ಲಿಕ್ ಟಿವಿ ಜೊತೆ ಅಳಲು ತೋಡಿಕೊಂಡ ಶರತ್ ತಂದೆ ತನಿಯಪ್ಪ, ರೈ ಚಿಕ್ಕಂದಿನಿಂದ ನಮ್ಮ ಅಂಗಡಿ ಬಳಿ ಓಡಾಡುತ್ತಿದ್ದರು. ಅಂದು ಸೇವಾ ಮನೋಭಾವನೆ ನನ್ನಲ್ಲಿತ್ತು. ಹೀಗಾಗಿ ಅವರ ಬಟ್ಟೆ ಒಗೆದು, ಇಸ್ತ್ರೀ ಮಾಡಿ ಕೊಟ್ಟಿದ್ದೆ. ಆದ್ರೆ ಇವತ್ತಿಗೆ ಇದನ್ನೆಲ್ಲಾ ಮರೆತ್ರು. ನಾನು ಕಾಂಗ್ರೆಸ್-ಬಿಜೆಪಿ, ಹಿಂದೂ-ಮುಸ್ಲಿಮರೆಂದು ಭೇದ-ಭಾವ ಮಾಡಿಲ್ಲ. ನನ್ನ ಕುಟುಂಬದ ಮೇಲೆ ಅವರಿಗೆ ಯಾಕೆ ಕೋಪ ತಾತ್ಸಾರ ಅಂತ ಶರತ್ ತಂದೆ ಕಣ್ಣೀರು ಹಾಕಿದ್ರು.
ನನ್ನ ಚಿತೆಗೆ ಶರತ್ ಬೆಂಕಿಯಿಡಬೇಕಿತ್ತು. ಕೊಂದ ದುಷ್ಕರ್ಮಿಗಳು ಭೂಮಿ ಮೇಲೆ ಶಾಶ್ವತವಲ್ಲ. ದೇವರೇ ಅವರನ್ನ ನೋಡಿಕೊಳ್ಳಲಿ. ನನ್ನ ಮನಸ್ಸನ್ನು ಗಟ್ಟಿ ಮಾಡಿಕೊಂಡಿದ್ದೇನೆ. ನನ್ನ ಕುಟುಂಬಕ್ಕೆ ಗತಿಯಿಲ್ಲದಂತಾಗಿದೆ. ದೇವರೇ ನಮ್ಮ ಸಂಸಾರ ನೋಡಿಕೊಳ್ಳಲಿ ಅಂತ ಶರತ್ ತಂದೆ ತನಿಯಪ್ಪ ಹೇಳಿದರು.
ಆರ್‍ಎಸ್‍ಎಸ್ ಕಾರ್ಯಕರ್ತ ಶರತ್ ಮನೆಯಲ್ಲಿ ಸದ್ಗತಿಯ ಕಾರ್ಯ ನಡೆಯಲಿದ್ದು, ಜುಲೈ 20ಕ್ಕೆ ವೈಕುಂಠ ಸಮಾರಾಧನೆ ನಡೆಯಲಿದೆ. ಬಂಟ್ವಾಳ ನಂದಾವರ ದೇವಸ್ಥಾನದಲ್ಲಿ ಈ ಕಾರ್ಯಕ್ರಮ ನಡೆಯಲಿದೆ.