ಬೆಂಗಳೂರು: ರಿಷಬ್ ಶೆಟ್ಟಿ ನಟನೆ ಹಾಗೂ ನಿರ್ದೇಶನದಲ್ಲಿ ಮೂಡಿಬಂದ `ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಾಸರಗೋಡು, ಕೊಡುಗೆ ರಾಮಣ್ಣ ರೈ’ ಸಿನಿಮಾ ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆ ಎಬ್ಬಿಸಿತ್ತು. ಈ ಚಿತ್ರವನ್ನು ನೋಡಿ ಟಿವಿ ನಿರೂಪಕ ಅಕುಲ್ ಬಾಲಾಜಿ ಅವರು ಸರ್ಕಾರಿ ಶಾಲೆಯೊಂದನ್ನು ದತ್ತು ಪಡೆದು ಇತರರಿಗೆ ಮಾದರಿಯಾಗಿದ್ದಾರೆ.
ಕನ್ನಡ ಶಾಲೆಗಳ ಸ್ಥಿತಿ ಹೇಗಿದೆ ಎಂದು ರಿಷಬ್ ಶೆಟ್ಟಿ ತಮ್ಮ ಚಿತ್ರದಲ್ಲಿ ತಿಳಿಸಿದ್ದರು. ಈ ಚಿತ್ರವನ್ನು ವೀಕ್ಷಿಸಿದ್ದ ಅಕುಲ್ ಅವರು ಇದರಿಂದ ಸ್ಫೂರ್ತಿ ಪಡೆದು, ಬೆಂಗಳೂರಿನ ಹೊರವಲಯದ ಲಗುಮೇನಹಳ್ಳಿಯಲ್ಲಿರುವ ಸರ್ಕಾರಿ ಶಾಲೆಯೊಂದನ್ನು ದತ್ತು ಪಡೆದಿದ್ದಾರೆ. ಸಿನಿಮಾ ಕೇವಲ ಮನರಂಜನೆಗೆ ಮಾತ್ರ ಸೀಮಿತವಲ್ಲ, ಒಬ್ಬರ ಜೀವನಕ್ಕೆ ಸ್ಫೂರ್ತಿ ನೀಡುವ ಶಕ್ತಿ ಸಿನಿಮಾಕ್ಕಿದೆ ಎನ್ನುವುದು ಈ ಮೂಲಕ ಸಾಬೀತಾಗಿದೆ.
Advertisement
Advertisement
ಸರ್ಕಾರಿ ಶಾಲೆಗಳು ನಶಿಸಿ ಹೋಗುತ್ತಿರುವ ಬಗ್ಗೆ ತಮ್ಮ ಗೆಳೆಯರು ಮತ್ತು ಕುಟುಂಬದ ಜತೆಗೆ ಚರ್ಚಿಸಿ ಅಕುಲ್ ಅದರ ಉಳಿವಿಗೆ ನೆರವಾಗಿದ್ದಾರೆ. ಈ ನಿರ್ಧಾರಕ್ಕೆ ಬರಲು ಸರ್ಕಾರಿ ಹಿ.ಪ್ರಾ. ಶಾಲೆ ಸಿನಿಮಾ ಕಾರಣ. ಸಿನಿಮಾ ನೋಡಿದ ಬಳಿಕ ಸರ್ಕಾರಿ ಶಾಲೆಗಳ ಪರಿಸ್ಥಿತಿಗಳ ಬಗ್ಗೆ ತಿಳಿದು ಬೇಜಾರಾಯಿತು. ಆದರಿಂದ ಲಗುಮೇನಹಳ್ಳಿಯ ಸರ್ಕಾರಿ ಶಾಲೆಯನ್ನು ದತ್ತು ತೆಗೆದುಕೊಳ್ಳಲು ನಿರ್ಧರಿಸಿದೆ ಎಂದು ಅಕುಲ್ ಬಾಲಾಜಿ ಹೇಳಿದ್ದಾರೆ.
Advertisement
Advertisement
ನಾನು ಆಗಾಗ ಇದೇ ರಸ್ತೆಯಲ್ಲಿ ಓಡಾಡುತ್ತಿರುತ್ತೇನೆ. ಆದರಿಂದ ಶಾಲೆಯ ಬಗ್ಗೆ ಗಮನ ಹರಿಸಲು ಅನುಕೂಲವಾಗುತ್ತದೆ ಎಂಬ ಉದ್ದೇಶದಿಂದ, ದತ್ತು ಪಡೆಯಲು ಈ ಶಾಲೆಯನ್ನು ಆಯ್ಕೆ ಮಾಡಿಕೊಂಡಿರುವುದಾಗಿ ತಿಳಿಸಿದ್ದಾರೆ.
ಈ ಶಾಲೆಯಲ್ಲಿ 66 ಮಂದಿ ವಿದ್ಯಾರ್ಥಿಗಳಿಗೆ ಕೇವಲ ಇಬ್ಬರು ಶಿಕ್ಷಕರಿದ್ದಾರೆ. ಈ ಇಬ್ಬರು ಶಿಕ್ಷಕರಲ್ಲಿ ಒಬ್ಬರು ವೈಯಕ್ತಿಕ ಕಾರಣಗಳಿಂದ ಇತ್ತೀಚೆಗಷ್ಟೇ ಕೆಲಸ ಬಿಟ್ಟಿದ್ದಾರೆ. ಇಲ್ಲಿ ಶೌಚಾಲಯ ಹಾಗೂ ಇತರೇ ಸೌಲಭ್ಯಗಳಿಲ್ಲದ ಕಾರಣ ಬಹುತೇಕ ವಿದ್ಯಾರ್ಥಿಗಳ ಶಾಲೆಗೆ ಬರುತ್ತಿರಲಿಲ್ಲ ಎಂದರು.
ಈ ಶಾಲೆಗೆ ಭೇಟಿ ನೀಡಿದ ಬಳಿಕ ಸ್ವತಃ ಅಕುಲ್ ಅವರೇ ಶಿಕ್ಷಣಾಧಿಕಾರಿಗಳನ್ನು ಭೇಟಿ ಮಾಡಿ, ತಾವೇ ಇನ್ನೊಬ್ಬ ಶಿಕ್ಷಕರನ್ನು ಶಾಲೆಗೆ ನೇಮಿಸಿ, ಅವರಿಗೆ ಸಂಬಳ ಕೂಡ ನೀಡುತ್ತಿದ್ದಾರೆ. ಸದ್ಯ ಶಾಲೆಯ ಆವರಣದಲ್ಲಿ ಶೌಚಾಲಯ ನಿರ್ಮಿಸಲಾಗುತ್ತಿದ್ದು, ವಿದ್ಯಾರ್ಥಿಗಳ ಅನುಕೂಲಕ್ಕೆ ಮೂಲ ಸೌಕರ್ಯಗಳನ್ನು ಕಲ್ಪಿಸಲಾಗುತ್ತಿದೆ. ಇದೇ ಮಾರ್ಚ್ ಕೊನೆಗೆ ಶಾಲೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು, ಆ ದಿನವೇ ಅಧಿಕೃತವಾಗಿ ಅಕುಲ್ ಶಾಲೆಯನ್ನು ದತ್ತು ಪಡೆಯಲಿದ್ದಾರೆ.