ಪುನೀತ್‍ರಿಂದ ಪ್ರೇರಣೆ ಪಡೆದು ದೇಹದಾನಕ್ಕೆ ಮುಂದಾದ ಕಾಫಿನಾಡ ದಂಪತಿ

Public TV
2 Min Read
CKM COUPLE

ಚಿಕ್ಕಮಗಳೂರು: ಸತ್ತ ಮೇಲೆ ಈ ದೇಹವನ್ನು ಮಣ್ಣು ತಿನ್ನುತ್ತೆ ಅದರ ಬದಲು ಪುನೀತ್ ಸರ್ ಅವರಂತೆ ದಾನ ಮಾಡಿದರೆ ಈ ನಮ್ಮ ದೇಹದ ಅಂಗಾಂಗಳಿಂದ ಮತ್ತೊಬ್ಬರ ಬದುಕು ಬೆಳಕಾಗುತ್ತೆ ಎಂದು ತಾಲೂಕಿನ ಅರೆನೂರು ಗ್ರಾಮದ ಪುನೀತ್ ರಾಜ್‍ಕುಮಾರ್ ಅವರ ಅಭಿಮಾನಿ ದಂಪತಿ ತಮ್ಮ ದೇಹವನ್ನೇ ದಾನ ಮಾಡಲು ಮುಂದಾಗಿದ್ದಾರೆ.

CKM

ತಾಲೂಕಿನ ಅರೆನೂರು ಗ್ರಾಮದ ಸುಪ್ರಿತ್ ಹಾಗೂ ಲಕ್ಷ್ಮಿ ದಂಪತಿ ತಮ್ಮ ದೇಹವನ್ನು ಉಡುಪಿಯ KMC ಆಸ್ಪತ್ರೆಗೆ ನೀಡಲು ಮುಂದಾಗಿದ್ದಾರೆ. ನಮ್ಮ ಈ ನಡೆಗೆ ಪುನೀತ್ ರಾಜ್ ಕುಮಾರ್ ಅವರ ಪ್ರೇರೇಪಣೆಯೇ ಕಾರಣ ಎಂದು ಪಬ್ಲಿಕ್ ಟಿವಿ ಜೊತೆ ತಮ್ಮ ನಿರ್ಧಾರದ ಕುರಿತು ಮಾಹಿತಿ ನೀಡಿದ ದಂಪತಿ, ಮನುಷ್ಯನಾಗಿ ಹುಟ್ಟಿ, ಸತ್ತ ಬಳಿಕ ಈ ದೇಹವನ್ನು ಮಣ್ಣಲ್ಲಿ ಕೊಳೆಸುವುದಕ್ಕಿಂತ ನಮ್ಮ ದೇಹದ ಅಂಗಾಂಗಳು ಮತ್ತೊಬ್ಬರಿಗೆ ಉಪಯೋಗಕ್ಕೆ ಬರಬೇಕು ಎಂದು ಈ ನಿರ್ಧಾರಕ್ಕೆ ಬಂದಿದ್ದೇವೆ. ನಾವು ಚಿಕ್ಕಂದಿನಿಂದಲೂ ಪುನೀತ್ ಸರ್ ಸಿನಿಮಾ ನೋಡಿಕೊಂಡು ಬಂದಿದ್ದೇವೆ. ಒಂದೊಂದು ಸಿನಿಮಾಗಳು ಒಂದಕ್ಕಿಂತ ಒಂದು ಚೆನ್ನಾಗಿವೆ. ನಮ್ಮ ಈ ನಡೆಗೆ ಅವರೇ ಪ್ರೇರೇಪಣೆ ಎಂದು ತಮ್ಮ ಮನದ ಮಾತು ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಅಪ್ಪು ಪ್ರೇರಣೆ – ಅಭಿಮಾನಿಗಳಿಂದ ನೇತ್ರದಾನದ ಜೊತೆಗೆ ದೇಹದಾನಕ್ಕೆ ನೋಂದಣಿ

CKM COUPLE 1

ಪುನೀತ್ ಅವರು ಅಷ್ಟು ದೊಡ್ಡ ವ್ಯಕ್ತಿಯಾದರೂ ಅವರ ಸಮಾಜಮುಖಿ ಕಾರ್ಯಗಳು ಬಹುತೇಕರಿಗೆ ಗೊತ್ತಿರಲಿಲ್ಲ. ನಮಗೂ ಗೊತ್ತಿರಲಿಲ್ಲ. ಅವರು ಸತ್ತ ಬಳಿಕವಷ್ಟೆ ಗೊತ್ತಾಗಿದ್ದು. ಅವರೇ ತಮ್ಮ ಕಣ್ಣುಗಳನ್ನು ದಾನ ಮಾಡಿದ್ದಾರೆ. ನಮ್ಮ ದೇಹವನ್ನು ಮಣ್ಣು ತಿನ್ನೋದಕ್ಕಿಂತ ನಾಲ್ಕು ಜನಕ್ಕೆ ಬೆಳಕಾಗಿಸಬಹುದು ಎಂದು ಈ ನಿರ್ಧಾರಕ್ಕೆ ಬಂದಿದ್ದೇವೆ ಎಂದರು. ಇದನ್ನೂ ಓದಿ: ಅಪ್ಪು ಪ್ರೇರಣೆ – ಒಂದೇ ಗ್ರಾಮದಲ್ಲಿ 60ಕ್ಕೂ ಹೆಚ್ಚು ಮಂದಿ ನೇತ್ರದಾನ

CKM COUPLE 2

ದೇಹದಾನಕ್ಕೆ ಮುಂದಾಗಿರುವ ಲಕ್ಷ್ಮಿ ಪ್ರಸ್ತುತ ಗ್ರಾಮ ಪಂಚಾಯತ್ ಅಧ್ಯಕ್ಷೆ ಕೂಡ. ಗಂಡ ಹೆಂಡತಿ ಮಾತನಾಡಿಕೊಂಡು, ಮನೆಯವರ ಒಪ್ಪಿಗೆ ಪಡೆದು ಈ ನಿರ್ಧಾರಕ್ಕೆ ಬಂದಿದ್ದಾರೆ. ಇಂದು ಪುನೀತ್ ರಾಜ್‍ಕುಮಾರ್ ಪತ್ನಿ ಅಶ್ವಿನಿಯವರ ಊರಾದ ತಾಲೂಕಿನ ಮಲ್ಲಂದೂರು ಸಮೀಪದ ಭಾಗ್‍ಮನೆ ಬಳಿ ಇರುವ ಆವುತಿ ಗ್ರಾಮದಲ್ಲಿ ಪುನೀತ್ ರಾಜ್‍ಕುಮಾರ್‍ ಗೆ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಈ ವೇಳೆ, ಸುಮಾರು 40ಕ್ಕೂ ಹೆಚ್ಚು ಜನ ನೇತ್ರದಾನಕ್ಕೆ ಮುಂದಾಗಿದ್ದಾರೆ. ಹೆಸರು ನೋಂದಾಯಿಸಿಕೊಂಡವರು ನಮ್ಮ ಬಳಿಕ ನಮ್ಮ ಕಣ್ಣುಗಳು ಮತ್ತೊಂದು ಜೀವ ಜಗತ್ತನ್ನು ನೋಡಲು ಸಹಕಾರಿಯಾಗಲಿದೆ. ಇದಕ್ಕೆ ನಮಗೆ ಪುನೀತ್ ರಾಜ್ ಕುಮಾರ್ ಅವರೇ ಪ್ರೇರಣೆ ಎಂದು ನೇತ್ರದಾನಕ್ಕೆ ಮುಂದಾಗಿದ್ದಾರೆ. ಬದುಕಿದ್ದಷ್ಟು ದಿನ ಭಾವನಾತ್ಮಕ ಜೀವಿಯಾಗಿದ್ದ ಪವರ್ ಸ್ಟಾರ್ ಪುನೀತ್ ಸಾವಿನ ಬಳಿಕ ಸಮಾಜಮುಖಿ ಸೇವೆಯಿಂದ ಜನಮಾನಸದಲ್ಲಿ ಅಜರಾಮರವಾಗಿ ಉಳಿದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *