Exclusive: ಪ್ರಮಾಣ ವಚನ ಸಮಾರಂಭಕ್ಕೆ ಪರಮೇಶ್ವರ್ ಗೈರಾಗಿದ್ದು ಯಾಕೆ ಎನ್ನುವ ಪ್ರಶ್ನೆಗೆ ಇಲ್ಲಿದೆ ಉತ್ತರ!

Public TV
3 Min Read
siddaramiah rahul gandhi venugopal parameshwar

ಬೆಂಗಳೂರು: ಸಿಎಂ ಸಿದ್ದರಾಮಯ್ಯ ಸರ್ಕಾರದ ಸಂಪುಟ ವಿಸ್ತರಣೆ ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಗೈರಾಗಿದ್ದು ಯಾಕೆ ಎನ್ನುವ ಪ್ರಶ್ನೆಗೆ ಈಗ ಕಾಂಗ್ರೆಸ್ ಉನ್ನತ ಮೂಲಗಳು ಉತ್ತರ ನೀಡಿವೆ.

ಹೌದು. ಸಿಎಂ ಮತ್ತು ಪರಮೇಶ್ವರ್ ಬಹಿರಂಗವಾಗಿ ತಮ್ಮ ಅಸಮಾಧಾನವನ್ನು ತೋರಿಸದೇ ಇದ್ದರೂ ಇಬ್ಬರ ನಡುವೆ ಮನಸ್ತಾಪ ಇರುವುದು ರಾಹುಲ್ ಗಾಂಧಿ ಸಮ್ಮುಖದಲ್ಲೇ ಬಹಿರಂಗವಾಗಿತ್ತು ಎನ್ನುವ ವಿಚಾರವನ್ನು ಪಕ್ಷದ ಮೂಲಗಳು ಪಬ್ಲಿಕ್ ಟಿವಿಗೆ ತಿಳಿಸಿವೆ.

ಇಂದಿರಾ ಕ್ಯಾಂಟೀನ್ ಉದ್ಘಾಟನೆಗೆ ಆಗಸ್ಟ್ 16 ರಂದು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಬೆಂಗಳೂರಿಗೆ ಬಂದಿದ್ದರು. ಕ್ಯಾಂಟೀನ್ ಉದ್ಘಾಟನೆಯ ಬಳಿಕ ವಿಶೇಷ ವಿಮಾನದಲ್ಲಿ ರಾಹುಲ್ ಗಾಂಧಿ ಜೊತೆ ಸಿಎಂ ಸಿದ್ದರಾಮಯ್ಯ, ಪರಮೇಶ್ವರ್, ರಾಜ್ಯ ಉಸ್ತುವಾರಿ ವೇಣುಗೋಪಾಲ್ ದೆಹಲಿಗೆ ಪ್ರಯಾಣಿಸಿದ್ದರು. ಈ ವೇಳೆ ಪರಮೇಶ್ವರ್,ಸಿಎಂ ರಾಹುಲ್ ಗಾಂಧಿ ಮತ್ತು ವೇಣುಗೋಪಾಲ್ ಮುಂದೆ ಏರು ಧ್ವನಿಯಲ್ಲೇ ಜಗಳವಾಡಿದ್ದರು ಎಂದು ಮೂಲಗಳು ಮಾಹಿತಿ ನೀಡಿವೆ.Public Tv

ಫ್ಲೈಟ್‍ನಲ್ಲಿ ಎಂಎಲ್‍ಸಿ ಚುನಾವಣೆ ಮತ್ತು ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ ನಡೆದಿದ್ದು ಸಿಎಂ ಮಾತಿಗೆ ‘ಎಸ್‍ಎಸ್’ ಎಂದು ರಾಹುಲ್ ಗಾಂಧಿ ತಲೆ ಅಡಿಸುತ್ತಿದ್ದರು. ಸಿದ್ದರಾಮಯ್ಯ ಮಾತಿಗೆ ಪರಮೇಶ್ವರ್ ಆಕ್ಷೇಪ ವ್ಯಕ್ತಪಡಿಸಿ ತಮ್ಮ ನಿಲುವು ವ್ಯಕ್ತಪಡಿಸಿದ್ದರು. ಆದರೆ ತನ್ನ ಮಾತಿಗೆ ಬೆಲೆ ಸಿಗದ ಹಿನ್ನೆಲೆಯಲ್ಲಿ ಸಿಎಂ ವರಸೆಗೆ ಬೇಸತ್ತು ದೆಹಲಿಯಿಂದ ಪರಮೇಶ್ವರ್ ದಿಢೀರ್ ಎಂಬಂತೆ ಬೆಂಗಳೂರಿಗೆ ವಾಪಸ್ ಆಗಿದ್ದರು. ಅಷ್ಟೇ ಅಲ್ಲದೇ ಈ ವಿಮಾನದಲ್ಲೇ ನಾನು ಯಾವುದೇ ಕಾರಣಕ್ಕೆ ಸಂಪುಟ ವಿಸ್ತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಲ್ಲ ಎಂದು ಶಪಥ ಮಾಡಿದ್ದರು. ಇದಾದ ನಂತರ 2 ದಿನಗಳ ಕಾಲ ರಾಹುಲ್ ಗಾಂಧಿ ಹಾಗೂ ವೇಣುಗೋಪಾಲ್ ಕರೆಗೂ ಪರಮೇಶ್ವರ್ ಕ್ಯಾರೇ ಎನ್ನಲಿಲ್ಲ. ಕೊನೆಗೆ ಪರಿಸ್ಥಿತಿ ತಿಳಿಗೊಳಿಸಲು ಇಂಧನ ಸಚಿವ ಡಿಕೆ ಶಿವಕುಮಾರ್ ರಾಜಿ ಸಂಧಾನ ನಡೆಸಿದ್ದಾರೆ.

ವಿಮಾನದಲ್ಲಿ  ಚರ್ಚೆ ಆಗಿದ್ದೇನು?
ಪಕ್ಷಕ್ಕೆ ನಿಷ್ಠಾವಂತರಾಗಿರುವ ಜಿ.ಸಿ.ಚಂದ್ರಶೇಖರ್ ಅವರಿಗೆ ಟಿಕೆಟ್ ನೀಡಬೇಕು ಎಂದ ಪರಮೇಶ್ವರ್ ವಾದವನ್ನು ಮಂಡಿಸಿದ್ದರು. ಆದರೆ ಯಾವ ಕಾರಣಕ್ಕೆ ಸಿ.ಎಂ ಇಬ್ರಾಹಿಂ ರನ್ನ ಪರಿಷತ್ತಿಗೆ ಆಯ್ಕೆ ಮಾಡಬೇಕು ಎಂದು ಸಿಎಂ ಮನಮುಟ್ಟುವಂತೆ ವಿವರಿಸಿದ್ದರು. ಸಿಎಂ ವಿವರಣೆ ಕೇಳಿ ರಾಹುಲ್ ಗಾಂಧಿ ಎಸ್ ಎಸ್ ಎಂದು ಸಮ್ಮತಿ ಸೂಚಿಸಿದರು. ಹೀಗಾಗಿ ಪೂರ್ವ ಸಿದ್ಧತೆ ಇಲ್ಲದೆ ವಿಷಯ ಪ್ರಸ್ತಾಪಿಸಿದ ಪರಮೇಶ್ವರ್ ಅವರಿಗೆ ಹಿನ್ನಡೆ ಆಗಿತ್ತು.

ಸಂಪುಟ ವಿಸ್ತರಣೆಯಲ್ಲಿ ದಲಿತ ಕೊಟಾದಲ್ಲಿ ಮೋಟಮ್ಮರನ್ನು ಸಚಿವರನ್ನಾಗಿ ಮಾಡಬೇಕು ಎಂದ ಪರಮೇಶ್ವರ್ ಹೇಳಿದ್ದರು. ಇದಕ್ಕೆ ಇದಕ್ಕೆ ಸಿಎಂ ಆಕ್ಷೇಪ ವ್ಯಕ್ತಪಡಿಸಿ ಎಡಗೈ ಸಮುದಾಯದ ತಿಮ್ಮಾಪುರ್ ಅವರನ್ನು ಯಾಕೆ ಸಚಿವರನ್ನಾಗಿ ಮಾಡಬೇಕು? ಸದಾಶಿವ ಆಯೋಗದ ವರದಿ ಜಾರಿ ವಿಚಾರದಲ್ಲಿ ಏನು ಮಾಡಬೇಕು? ರಾಜ್ಯದಲ್ಲಿ ಎಡಗೈ ಹಾಗೂ ಬಲಗೈ ಸಮುದಾಯದ ದಲಿತರ ನಡುವಿನ ಭಿನ್ನಾಭಿಪ್ರಾಯ ಹೇಗೆ ಸರಿಪಡಿಸಬೇಕು ಎಂದು ವಿವರವಾಗಿ ತಿಳಿಸಿದರು. ಸಿದ್ದರಾಮಯ್ಯ ಮಾತಿಗೆ ವೇಣುಗೋಪಾಲ್ ಹಾಗೂ ರಾಹುಲ್ ಗಾಂಧಿ ತಲೆದೂಗುತ್ತಿದ್ದರು.

ತಮ್ಮ ವಾದಕ್ಕೆ ಹಿನ್ನಡೆ ಆಗುತ್ತಿದ್ದಂತೆ ನೀವು ಮೂಲ ಕಾಂಗ್ರೆಸ್ಸಿಗರೊಂದಿಗೆ ಯಾವಾಗಲು ಹೀಗೆ ನಡೆದುಕೊಳ್ಳುತ್ತೀರಾ ಎಂದ ಪರಮೇಶ್ವರ್ ಪ್ರಶ್ನಿಸಿದರು. ಈ ಮಾತು ಕೇಳಿ, ಮೂಲ ಹಾಗೂ ವಲಸಿಗ ಎಂಬ ಭೇದ ಭಾವವನ್ನು ಹುಟ್ಟುಹಾಕಿದ್ದೆ ನೀವು ಎಂದು ಸಿಎಂ ರೇಗಿದ್ದಾರೆ. ಫ್ಲೈಟ್‍ನಲ್ಲೇ ಸಿಎಂ ಹಾಗೂ ಪರಮೇಶ್ವರ್ ಪರಸ್ಪರ ಆರೋಪ ಪ್ರತ್ಯಾರೋಪ ಮಾಡಿಕೊಂಡಿದ್ದಾರೆ. ಇಬ್ಬರ ಮಾತಿನ ಚಕಮಕಿಯನ್ನು ಹೇಗೆ ನಿಲ್ಲಿಸಬೇಕೆಂದು ತಿಳಿಯದೇ ವೇಣುಗೋಪಾಲ್ ಹಾಗೂ ರಾಹುಲ್ ಗಾಂಧಿ ಮೌನಕ್ಕೆ ಶರಣಾಗಿದ್ದರು.

ಇಬ್ಬರು ನಾಯಕರು ಮೌನಕ್ಕೆ ಶರಣಾಗಿ, ಸಿಎಂ ಮಾತಿಗೆ ಬೆಲೆ ನೀಡಿದ್ದಕ್ಕೆ ಗರಂ ಆದ ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷರ ಮಾತಿಗೆ ಬೆಲೆ ಇಲ್ಲಾ ಎಂದರೆ ನಾನ್ಯಾಕೆ ಆ ಸ್ಥಾನದಲ್ಲಿ ಮುಂದುವರಿಯಬೇಕು. ರಾಜೀನಾಮೆ ಕೊಡುತ್ತೇನೆ ಎಂದ ಹೇಳಿ ಅಸಮಾಧಾನವನ್ನು ಬಹಿರಂಗವಾಗಿ ಹೇಳಿಕೊಂಡಿದ್ದಾರೆ. ಹೀಗಾಗಿ ಜೆಡಿಎಸ್ ಬಂಡಾಯ ಶಾಸಕರ ಹೈಕಮಾಂಡ್ ಭೇಟಿ ಸಂದರ್ಭದಲ್ಲಿ ದೆಹಲಿಯಲ್ಲಿ ಇರದೇ ಮುನಿಸಿಕೊಂಡು ಬೆಂಗಳೂರಿಗೆ ವಾಪಾಸ್ ಬಂದಿದ್ದಾರೆ.

ಈ ಘಟನೆ ನಡೆದ ಎರಡು ದಿನಗಳ ಕಾಲ ರಾಹುಲ್ ಗಾಂಧಿ ಹಾಗೂ ವೇಣುಗೋಪಾಲ್ ಕರೆಯನ್ನು ಪರಮೇಶ್ವರ್ ಸ್ವೀಕರಿಸಲೇ ಇಲ್ಲ. ಕೊನೆಗೆ ಸಚಿವ ಡಿ.ಕೆ.ಶಿವಕುಮಾರ್ ಸಂಧಾನದ ನಂತರ ವೇಣುಗೋಪಾಲ್ ಜೊತೆ ದೂರವಾಣಿಯಲ್ಲಿ ಪರಮೇಶ್ವರ್ ಮಾತನಾಡಿದ್ದಾರೆ. ಸಂಧಾನ ಆಗಿದ್ದರೂ ತಮ್ಮ ನಿಲುವಿಗೆ ಅಂಟಿಕೊಂಡಿದ್ದ ಪರಮೇಶ್ವರ್ ಸಚಿವರ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಗೈರಾಗಿ ತಮ್ಮ ಅಸಮಾಧಾನವನ್ನು ತೋರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: ಸಂಪುಟ ವಿಸ್ತರಣೆಗೆ ಗೈರಾಗಿದ್ದು ಯಾಕೆ: ಪ್ರಶ್ನೆಗೆ ಡಿಕೆ ಶಿವಕುಮಾರ್ ಉತ್ತರಿಸಿದ್ರು

https://www.youtube.com/watch?v=TnWLi3EWhu8

MINISTER FINAL5

MINISTER FINAL4

MINISTER FINAL3

MINISTER FINAL 2

Share This Article
Leave a Comment

Leave a Reply

Your email address will not be published. Required fields are marked *