Bengaluru City

ಸಿಎಂ ಸಿದ್ದರಾಮಯ್ಯ ಆದಿಚುಂಚನಗಿರಿ ಶ್ರೀಗಳನ್ನು ಭೇಟಿ ಮಾಡಿದ್ದು ಯಾಕೆ: ಇನ್‍ಸೈಡ್ ಸ್ಟೋರಿ

Published

on

Share this

ಬೆಂಗಳೂರು: ಕಾಂಗ್ರೆಸ್‍ಗೆ ಗುಡ್‍ಬೈ ಹೇಳಿ ಬಿಜೆಪಿಗೆ ಸೇರ್ಪಡೆಯಾದ ಮಾಜಿ ಮುಖ್ಯಮಂತ್ರಿ ಎಸ್‍ಎಂ ಕೃಷ್ಣಗೆ ಟಾಂಗ್ ನೀಡಲು ಸಿಎಂ ಸಿದ್ದರಾಮಯ್ಯ ಮುಂದಾಗಿದ್ದು, ಈ ಕಾರಣಕ್ಕಾಗಿಯೇ ಗುರುವಾರ ರಾತ್ರಿ ವಿಜಯನಗರದಲ್ಲಿರುವ ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಶ್ರೀಗಳ ಜೊತೆ ಮಾತುಕತೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.

ಎಸ್‍ಎಂಕೆ ಒಕ್ಕಲಿಗರ ಪ್ರಭಾವಿ ನಾಯಕರಾಗಿರುವ ಹಿನ್ನೆಲೆಯಲ್ಲಿ ಆ ಸಮುದಾಯ ಮತಗಳು ಬಿಜೆಪಿಗೆ ಹೋಗದಿರಲು ಕಾಂಗ್ರೆಸ್ ನಾಯಕರು ಆ ಮತಗಳ ಮೇಲೆ ಕಣ್ಣಿಟ್ಟಿದ್ದಾರೆ. ಈ ಕಾರಣಕ್ಕಾಗಿ ರಾತ್ರಿ ಒಂದೂವರೆ ಗಂಟೆಗಳ ಪ್ರಸಕ್ತ ಒಕ್ಕಲಿಗ ಸಮುದಾಯ ಬೆಳವಣಿಗೆಯ ಬಗ್ಗೆ ಸಿಎಂ ಶ್ರೀಗಳ ಜೊತೆ ಮಾತನಾಡಿ, ಸಮುದಾಯ ಅಭಿವೃದ್ಧಿಗೆ ಸಂಬಂಧಿಸಿದ ವಿಚಾರಗಳನ್ನು ಚರ್ಚೆ ನಡೆಸಿದ್ದಾರೆ.

ಅಷ್ಟೇ ಅಲ್ಲದೇ ಉಪಚುನಾವಣೆಗಳ ಮತ್ತು ಕೆಂಪೇಗೌಡ ಪ್ರಾಧಿಕಾರದ ಬಗ್ಗೆಯೂ ಮಾತುಕತೆಯನ್ನು ಸಿಎಂ ನಡೆಸಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿವೆ. ನಂಜನಗೂಡು ಕ್ಷೇತ್ರದಲ್ಲಿ 8 ಸಾವಿರ ಒಕ್ಕಲಿಗ ಸಮುದಾಯದ ಮತಗಳು ನಿರ್ಣಾಯಕವಾಗಿರುವ ಹಿನ್ನೆಲೆಯಲ್ಲಿ ಸಮುದಾಯಕ್ಕೆ ಸಂದೇಶ ತಿಳಿಸಲು ಸಿಎಂ ಸಿದ್ದರಾಮಯ್ಯನವರು ಭೇಟಿ ಮಾಡಿದ್ದಾರೆ ಎಂದು ಹೇಳಲಾಗುತ್ತದೆ.

ನಂಜನಗೂಡು ಉಪಚುನಾವಣೆಯಲ್ಲಿ ಜೆಡಿಎಸ್ ಸ್ಪರ್ಧಿಸಿಲ್ಲ. ಹೀಗಾಗಿ ಅಲ್ಲಿ ಒಕ್ಕಲಿಗ ಮತಗಳೇ ನಿರ್ಣಾಯವಾಗಿರುವುದರಿಂದ ಆ ಸಮುದಾಯದ ಮತಗಳನ್ನು ಸೆಳೆಯಲು ಸಿಎಂ ಗುರುವಾರ ರಾತ್ರಿ ಭೇಟಿ ಮಾಡಿದ್ದಾರೆ ಎನ್ನಲಾಗಿದೆ.

ರಾತ್ರಿ 9.30ಕ್ಕೆ ಮಠದ ಒಳಹೋದ ಸಿಎಂ 11 ಗಂಟೆಯವರೆಗೂ ಮಠದಲ್ಲಿದ್ದು ಮಾತುಕತೆ ನಡೆಸಿದ್ದು ವಿಶೇಷವಾಗಿತ್ತು. ಭೇಟಿ ಬಳಿಕ ಪ್ರತಿಕ್ರಿಯಿಸಿದ ಸಿಎಂ, ಸ್ವಾಮೀಜಿಗಳನ್ನು ಭೇಟಿ ಮಾಡಿ ಬಹಳ ದಿನವಾಗಿತ್ತು. ಈ ಕಾರಣಕ್ಕೆ ನಾನು ಬಂದಿದ್ದೆ ಎಂದು ತಿಳಿಸಿದ್ದರು. ಎಸ್‍ಎಂಕೆ ಬಿಜೆಪಿ ಸೇರ್ಪಡೆಯಾದ ಹಿನ್ನೆಲೆಯಲ್ಲಿ ಭೇಟಿ ಮಾಡಿದ್ದೀರಾ ಎನ್ನುವ ಪ್ರಶ್ನೆಗೆ ‘ನೋ ಕಾಮೆಂಟ್ಸ್’ ಎಂದು ಪ್ರತಿಕ್ರಿಯಿಸಿದ್ದರು.

ಇಂದು ಬೆಂಗಳೂರಿಗೆ: ಬಿಜೆಪಿ ಸೇರ್ಪಡೆಯಾದ ನಂತರ ಮಾಜಿ ಸಿಎಂ ಎಸ್‍ಎಂ ಕೃಷ್ಣ ಮೊದಲ ಬಾರಿಗೆ ಇಂದು ಬೆಂಗಳೂರಿಗೆ ಬರಲಿದ್ದಾರೆ. ಸಂಜೆ ನಾಲ್ಕು ಗಂಟೆಗೆ ವಿಶೇಷ ವಿಮಾನದ ಮೂಲಕ ದೆಹಲಿಯಿಂದ ಹೊರಡುವ ಎಸ್‍ಎಂ ಕೃಷ್ಣ ಏಳು ಗಂಟೆಗೆ ಬೆಂಗಳೂರು ತಲುಪಲಿದ್ದಾರೆ.

ಬೆಂಗಳೂರಿನಲ್ಲಿ ಎಸ್‍ಎಂಕೆ ಅವರನ್ನು ಅದ್ದೂರಿಯಾಗಿ ಸ್ವಾಗತ ಕೋರಲು ಈಗಾಗಲೇ ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರು ಯೋಚಿಸಿದ್ದು ವಿಮಾನ ನಿಲ್ದಾಣದಿಂದ ಬೈಕ್ ಮೆರವಣಿಗೆ ಮೂಲಕ ಅಭೂತಪೂರ್ವ ಸ್ವಾಗತ ಕೋರಲು ಸಿದ್ದರಾಗಿದ್ದರು. ಆದರೆ ರಾಜ್ಯದಲ್ಲಿ ಬರ ಪರಿಸ್ಥಿತಿ ಮತ್ತು ಟ್ರಾಫಿಕ್ ಸಮಸ್ಯೆಯಿಂದಾಗಿ ನಗರದ ಜನರಿಗೆ ತೊಂದರೆ ನೀಡುವುದು ಬೇಡ ಎಂದು ನಯವಾಗಿ ತಿರಸ್ಕರಿಸಿದ್ದಾರೆ.

ಈ ಹಿಂದೆ ಕೂಡಾ ಮಹಾರಾಷ್ಟ್ರ ರಾಜ್ಯಪಾಲರಾದಾಗ ಕೃಷ್ಣ ಅವರ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಲು ಅಂದು ಕಾರ್ಯಕರ್ತರು ಸಿದ್ದರಾಗಿದ್ದಾಗ ಬರದ ಹೆಸರನ್ನು ಹೇಳಿ ಸರಳವಾಗಿ ಆಚರಿಸಿಕೊಂಡಿದ್ದರು. ಕೃಷ್ಣಾ ಸೂಚನೆ ಹಿನ್ನಲೆಯಲ್ಲಿ ಸಂಜೆ ಏಳಕ್ಕೆ ಅವರನ್ನು ವಿಮಾನ ನಿಲ್ದಾಣದಿಂದ ಸರಳವಾಗಿ ಬರಮಾಡಿಕೊಂಡು ಬಿಜೆಪಿ ಕಾರ್ಯಕರ್ತರ ಉತ್ಸಾಹಕ್ಕೆ ಬೇಸರ ವ್ಯಕ್ತಪಡಿಸಬಾರದು ಎಂಬ ಉದ್ದೇಶದಿಂದ ಮಲ್ಲೇಶ್ವರಂ ಬಿಜೆಪಿ ಕಚೇರಿ ಬಳಿ ರಾತ್ರಿ ಎಂಟು ಗಂಟೆಗೆ ರಾಜ್ಯಾಧ್ಯಕ್ಷ ಯಡಿಯೂರಪ್ಪ ನೇತೃತ್ವದಲ್ಲಿ ಅದ್ದೂರಿ ಸ್ವಾಗತ ನೀಡಲು ಬಿಜೆಪಿ ಸಿದ್ಧತೆ ನಡೆಸಿದೆ.

Click to comment

Leave a Reply

Your email address will not be published. Required fields are marked *

Advertisement
Advertisement