ಬೆಂಗಳೂರು: ಡಿಕೆ ಶಿವಕುಮಾರ್ ಮಟ್ಟ ಹಾಕಲು ಹಾಗೂ ತಮ್ಮ ಪಾಲಿನ ಸ್ಥಾನ ಮಾನಗಳಿಸಿಕೊಳ್ಳಲು ಮಾಜಿ ಸಿಎಂ ಸಿದ್ದರಾಮಯ್ಯ ಮಲ್ಲಿಕಾರ್ಜುನ ಖರ್ಗೆ ನೆರವು ಪಡೆಯಲು ಮುಂದಾಗಿದ್ದಾರೆ. ಅದಕ್ಕಾಗಿ “ನೀವು ರಾಜ್ಯಸಭೆಗೆ ಆಯ್ಕೆ ಆಗಲೇಬೇಕು ಸರ್” ಅಂತ ಖರ್ಗೆ ಮನವೊಲಿಕೆಗೆ ಸಿದ್ದರಾಮಯ್ಯ ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದಾರೆ ಎನ್ನುವ ವಿಚಾರ ಮೂಲಗಳಿಂದ ತಿಳಿದು ಬಂದಿದೆ.
ಗಣರಾಜ್ಯೋತ್ಸವ ಮುಗಿಸಿ ಒಟ್ಟೊಟ್ಟಿಗೆ ಜನಾರ್ದನ ಹೋಟೆಲಿನಲ್ಲಿ ತಿಂಡಿ ಸವಿಯಲು ಹೋದ ಮಲ್ಲಿಕಾರ್ಜುನ ಖರ್ಗೆ ಹಾಗೂ ಸಿದ್ದರಾಮಯ್ಯ ನಡುವೆ ಸ್ವಾರಸ್ಯಕರ ಮಾತುಕತೆ ನಡೆದಿದೆ. ಪಕ್ಕಾ ಪ್ಲಾನ್ ಮಾಡಿಕೊಂಡೆ ತಿಂಡಿಗೆ ಕರೆದೊಯ್ದ ಸಿದ್ದರಾಮಯ್ಯ,”ಸಿಎಎ, ಎನ್‌ಆರ್‌ಸಿಯಂತಹ ದೊಡ್ಡ ವಿಚಾರಗಳ ಕಾಯ್ದೆ ಜಾರಿ ಸಂದರ್ಭದಲ್ಲಿ ನೀವು ಸಂಸತ್ತಿನಲ್ಲಿ ಇರಬೇಕಿತ್ತು ಸಾರ್” ಎಂದು ಸೆಂಟಿಮೆಂಟ್ ದಾಳ ಉರುಳಿಸಿದ್ದಾರೆ.
Advertisement
Advertisement
ಹೇಗಿದ್ದರೂ ಜೂನ್ ತಿಂಗಳಿನಲ್ಲಿ ರಾಜ್ಯಸಭಾ ಚುನಾವಣೆ ಇದೆ. ರಾಜ್ಯಸಭೆಗೆ ಹೋಗಿ ಬಿಡಿ ಎಂದು ಖರ್ಗೆಯವರ ಮನವೊಲಿಕೆಗೆ ಯತ್ನಿಸಿದ್ದಾರೆ. ಆ ಮೂಲಕ ಮಲ್ಲಿಕಾರ್ಜುನ ಖರ್ಗೆಯವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ತಮ್ಮ ರಾಜಕೀಯ ದಾಳ ಉರುಳಿಸಲು ಮುಂದಾಗಿದ್ದಾರೆ.
Advertisement
ಸಿದ್ದರಾಮಯ್ಯನವರಿಗೆ ವಿಪಕ್ಷ ಹಾಗೂ ಕಾಂಗ್ರೆಸ್ ಶಾಸಕಾಂಗ ನಾಯಕ ಎರಡು ಸ್ಥಾನ ಎರಡು ನೀಡಲು ಖರ್ಗೆ ಒಪ್ಪುತ್ತಿಲ್ಲ. ಇತ್ತ ಸಿದ್ದರಾಮಯ್ಯ ಬಯಕೆಯಂತೆ ಕೆಪಿಸಿಸಿ ಗೆ ನಾಲ್ಕು ಕಾರ್ಯಾಧ್ಯಕ್ಷರ ನೇಮಕ ವಿಚಾರದಲ್ಲೂ ಖರ್ಗೆ ಅಡ್ಡಗಾಲು ಹಾಕಿದ್ದಾರೆ. ಕೆಪಿಸಿಸಿ ಅಧ್ಯಕ್ಷರ ಆಯ್ಕೆಯಲ್ಲೂ ಸಿದ್ದರಾಮಯ್ಯ ಬಣಕ್ಕಿಂತ ಡಿಕೆಶಿ ಕೈಗೆ ಸಾರಥ್ಯ ಸಿಕ್ಕರೆ ಒಳ್ಳೆಯದು ಎಂದು ಖರ್ಗೆ ಒಲವು ವ್ಯಕ್ತಪಡಿಸಿದ್ದಾರೆ ಎನ್ನಲಾಗುತ್ತಿದೆ.
Advertisement
ಇಷ್ಟು ದಿನ ಖರ್ಗೆಗಿಂತ ನಾನೇ ಪವರ್ ಫುಲ್ ಎಂದುಕೊಂಡಿದ್ದ ಸಿದ್ದರಾಮಯ್ಯ ಈಗ ಯು ಟರ್ನ್ ಹೊಡೆದಿದ್ದಾರೆ. ಮಲ್ಲಿಕಾರ್ಜುನ ಖರ್ಗೆಗೆ ರಾಜ್ಯಸಭಾ ಕನಸು ತುಂಬಿ ತಮ್ಮ ಹಾದಿಗೆ ಅಡ್ಡ ಬರದಂತೆ ನೋಡಿಕೊಳ್ಳಲು ಮುಂದಾಗಿದ್ದಾರೆ. ಆ ಮೂಲಕ ಸಿಎಲ್‍ಪಿ ಹಾಗೂ ವಿಪಕ್ಷ ನಾಯಕನ ಸ್ಥಾನ ಎರಡು ತಾವೇ ಪಡೆಯುವ ಪ್ಲಾನ್ ಒಂದಾದರೆ ಇನ್ನೊಂದು ಕಡೆ ಕೆಪಿಸಿಸಿ ಪಟ್ಟದಲ್ಲೂ ಖರ್ಗೆ ನೆರವು ಸಿಕ್ಕರೆ ಡಿಕೆಶಿಗೆ ತಪ್ಪಿಸಲು ಸಿದ್ದರಾಮಯ್ಯಗೆ ಸಹಾಯವಾಗಲಿದೆ.
ಈ ಎಲ್ಲ ಉಪಾಯ ಮಾಡಿಕೊಂಡೇ ಸಿದ್ದರಾಮಯ್ಯ ರಾಜ್ಯಸಭಾ ದಾಳವನ್ನು ಖರ್ಗೆಯವರ ಮುಂದೆ ಉರುಳಿಸಿದ್ದಾರೆ. ಸಿದ್ದು ದಾಳವನ್ನೇನೋ ಉರುಳಿಸಿದ್ದಾರೆ. ಆದರೆ ಯಾವುದೇ ಪ್ರತಿಕ್ರಿಯೆ ಕೊಡದ ಮಲ್ಲಿಕಾರ್ಜುನ ಖರ್ಗೆ ಮಾತ್ರ ಎಂದಿನಂತೆ ಮೌನಕ್ಕೆ ಜಾರಿ ಸಿದ್ದರಾಮಯ್ಯನವರಿಗೆ ನಿರಾಸೆ ಮಾಡಿದ್ದಾರೆ ಎನ್ನುವ ವಿಚಾರ ಮೂಲಗಳಿಂದ ತಿಳಿದು ಬಂದಿದೆ.