ಬೆಂಗಳೂರು: ಟ್ರಬಲ್ ಶೂಟರ್, ಜಲ ಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಅವರು ಅತೃಪ್ತ ಕಾಂಗ್ರೆಸ್ ಶಾಸಕರ ಜೊತೆ ನಡೆಸಿದ ಸಂಧಾನ ವಿಫಲವಾಗಿದೆ.
ಸ್ಪೀಕರ್ ಕಚೇರಿಗೆ ರಾಜೀನಾಮೆ ನೀಡಲು ಬಂಡಾಯ ಶಾಸಕರು ಆಗಮಿಸಿದ್ದರು. ಈ ವಿಚಾರ ತಿಳಿದು ಸ್ಪೀಕರ್ ಕಚೇರಿಗೆ ಆಗಮಿಸಿದ ಡಿಕೆಶಿ ಅಲ್ಲೇ ಶಾಸಕರ ಮನವೊಲಿಸಲು ಮುಂದಾದರು. ನಂತರ ಡಿಕೆಶಿ ತಮ್ಮ ಕಾರಿನಲ್ಲಿ ಶಾಸಕರಾದ ಮುನಿರತ್ನ, ಭೈರತಿ ಬಸವರಾಜು, ಎಸ್.ಟಿ.ಸೋಮಶೇಖರ್ ಹಾಗೂ ರಾಮಲಿಂಗಾ ರೆಡ್ಡಿ ಅವರನ್ನು ನಿವಾಸಕ್ಕೆ ಕರೆದುಕೊಂಡು ಹೋಗಿದ್ದಾರೆ. ಮನೆಗೆ ಕರೆದುಕೊಂಡು ಹೋದ ಬಳಿಕ ಅವರ ಮನವೊಲಿಸಲು ಯತ್ನಿಸಿದ್ದರು. ಆದರೆ ಶಾಸಕರು ಅವರ ಮಾತನ್ನು ಕೇಳದೆ ಡಿಕೆಶಿ ಅವರಿಗೆ ತಿರುಗೇಟು ನೀಡಿದ್ದಾರೆ.
ಡಿ.ಕೆ ಶಿವಕುಮಾರ್ ಶಾಸಕರನ್ನು ಮನವೊಲಿಸಲು ಯತ್ನಿಸಿದ್ದರು. ಈ ವೇಳೆ ಶಾಸಕರಾದ ರಾಮಲಿಂಗಾ ರೆಡ್ಡಿ, ಮುನಿರತ್ನ, ಎಸ್.ಟಿ ಸೋಮಶೇಖರ್ ಹಾಗೂ ಭೈರತಿ ಬಸವರಾಜು ನಮಗೆ ಮತ್ತೆ ಮತ್ತೆ ಆಮಿಷವೊಡ್ಡಬೇಡಿ. ನಾವು ಸರ್ಕಾರಿದಲ್ಲಿ ಇದ್ದಾಗ ನೀವು ನಮಗೆ ಕ್ಯಾರೆ ಎನ್ನಲಿಲ್ಲ. ಈಗ ಮಂತ್ರಿ ಮಾಡುತ್ತೇನೆ ಎಂದು ಹೇಳುತ್ತಿದ್ದೀರಾ?. ಇಷ್ಟು ದಿನ ನಾವು ನಿಮ್ಮ ಕಣ್ಣಿಗೆ ಕಾಣಿಸಲಿಲ್ವಾ? ನಾವು ಈಗಾಗಲೇ ರಾಜೀನಾಮೆ ನೀಡಿದ್ದೇವೆ. ಈಗ ನೀವು ನಮ್ಮನ್ನು ಬಿಟ್ಟುಬಿಡಿ ಎಂದು ಡಿಕೆಶಿಗೆ ತಿರುಗೇಟು ನೀಡಿದ್ದಾರೆ.
ಡಿಕೆಶಿ ಮನೆಯಿಂದ ಹಿಂತಿರುಗಿದ ಮುನಿರತ್ನ ಅವರು, ಈ ಬಗ್ಗೆ ನಮ್ಮ ಹಿರಿಯ ನಾಯಕ ರಾಮಲಿಂಗಾ ರೆಡ್ಡಿ ಅವರು ಈ ಹಿಂದೆ ಹೇಳಿದ್ದಾರೆ. ಅವರು ಈಗ ಬರುತ್ತಾರೆ. ಈ ಪ್ರಶ್ನೆಯನ್ನು ಅವರಲ್ಲೇ ಕೇಳಿ ಎಂದು ಮಾಧ್ಯಮಕ್ಕೆ ಸರಿಯಾದ ಪ್ರತಿಕ್ರಿಯೆ ನೀಡದೇ ಹೊರಟು ಹೋದರು.
ರಾಮಲಿಂಗಾ ರೆಡ್ಡಿ ಪ್ರತಿಕ್ರಿಯಿಸಿ, ಶಿವಕುಮಾರ್ ಅವರು ಪಕ್ಷದಿಂದ ಮೊದಲಿನಿಂದಲೂ ಇದ್ದೀರಾ. ಪಕ್ಷ ಬಿಟ್ಟು ಹೋಗಬೇಡಿ ಎಂದು ಹೇಳಿದರು. ಆದರೆ ನಾನು ಈಗಾಗಲೇ ರಾಜೀನಾಮೆ ನೀಡಿದ್ದೇನೆ. ನಾನು ರಾಜೀನಾಮೆ ಹಿಂಪಡೆಯುವುದಿಲ್ಲ. ನಾವು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಕಾಂಗ್ರೆಸ್‍ನಲ್ಲಿ ಇದ್ದೇನೆ. ರಮೇಶ್ ಜಾರಕಿಹೊಳಿ ಗುಂಪಿಗೆ ನಾನು ಸೇರಿಲ್ಲ, ನಾನು ಒಬ್ಬನೇ ಬಂದಿದ್ದೇನೆ. ಸೌಮ್ಯ ರೆಡ್ಡಿ ರಾಜೀನಾಮೆ ಬಗ್ಗೆ ಅವರನ್ನೇ ಕೇಳಬೇಕು ಎಂದು ತಿಳಿಸಿದರು.
ರಾಜೀನಾಮೆ ಕೊಟ್ಟ ಶಾಸಕರು:
* ಎಚ್ ವಿಶ್ವನಥ್- ಹುಣಸೂರು (ಜೆಡಿಎಸ್)
* ರಾಮಲಿಂಗಾ ರೆಡ್ಡಿ- ಬಿಟಿಎಂ ಲೇಔಟ್
* ರಮೇಶ್ ಜಾರಕಿಹೊಳಿ- ಗೋಕಾಕ್
* ಎಸ್ ಟಿ ಸೋಮ ಶೇಖರ್- ಯಶವಂತಪುರ
* ಪ್ರತಾಪ್ ಗೌಡ ಪಾಟೀಲ್- ಮಸ್ಕಿ
* ಬಿ.ಸಿ ಪಾಟೀಲ್- ಹಿರೇಕೆರೂರು
* ಮಹೇಶ್ ಕುಮಟಳ್ಳಿ- ಅಥಣಿ
* ನಾರಾಯಣ ಗೌಡ- ಕೆ. ಆರ್ ಪೇಟೆ
* ಭೈರತೀ ಬಸವರಾಜ್- ಕೆ.ಆರ್ ಪುರಂ
* ಶಿವರಾಂ ಹೆಬ್ಬಾರ್- ಯಲ್ಲಾಪುರ
* ಮುನಿರತ್ನ- ರಾಜರಾಜೇಶ್ವರಿ ನಗರ
* ಗೋಪಾಲಯ್ಯ- ಮಾಹಾಲಕ್ಷ್ಮಿ ಲೇಔಟ್(ಜೆಡಿಎಸ್)