ಬೆಂಗಳೂರು: ರಾಜ್ಯದಲ್ಲಿ ಇತಿಹಾಸದಲ್ಲೇ ಅತಿದೊಡ್ಡ, ಐತಿಹಾಸಿಕ ವಿದ್ಯಮಾನವೊಂದು ಜರುಗಿದೆ. ಶತ ಶತಮಾನಗಳಿಂದ ಹಿಂದೂ ಧರ್ಮದ ಭಾಗವಾಗಿ ಇದ್ದ ವೀರಶೈವ-ಲಿಂಗಾಯತರು ಇನ್ನು ಮುಂದೆ ಹಿಂದೂಗಳಲ್ಲ. ಅವರು ಅಲ್ಪಸಂಖ್ಯಾತರು. ಹೀಗೆಂದು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ನಿರ್ಣಯ ತೆಗೆದುಕೊಂಡಿದೆ.
ರಾಜ್ಯ ಸರ್ಕಾರ ಪ್ರತ್ಯೇಕ ಧರ್ಮದ ವಿಚಾರದಲ್ಲಿ ಅಡ್ಡಗೋಡೆ ಮೇಲೆ ದೀಪ ಇಟ್ಟಿದ್ದು, ಧರ್ಮ ಇಬ್ಭಾಗದ ತಂತ್ರ ಅನುಕರಿಸಿದೆ. ನ್ಯಾಯಮೂರ್ತಿ ನಾಗಮೋಹನ್‍ದಾಸ್ 2ನೇ ಶಿಫಾರಸ್ಸಿನ ಅನ್ವಯ, ಪ್ರತ್ಯೇಕ ಲಿಂಗಾಯತ ಧರ್ಮದ ಬದಲಿಗೆ, ಲಿಂಗಾಯತ ಮತ್ತು ವೀರಶೈವ, ಬಸವತತ್ವದಡಿ ನಂಬಿಕೆ ಇರುವವರಿಗೆ ಪ್ರತ್ಯೇಕ ಧರ್ಮಕ್ಕೆ ರಾಜ್ಯಸರ್ಕಾರ ಶಿಫಾರಸು ಮಾಡಿದೆ. ನಾಗಮೋಹನ್‍ದಾಸ್ ವರದಿ ಪ್ರಕಾರ ಅಲ್ಪಸಂಖ್ಯಾತ ಕೋಟಾದಡಿ ಮುಸ್ಲಿಮರಿಗೆ ಸಿಗುತ್ತಿರುವ ಸೌಲಭ್ಯಗಳು ಲಿಂಗಾಯತ-ವೀರಶೈವ ಧರ್ಮಕ್ಕೆ ಸಿಗುವುದಿಲ್ಲ.
Advertisement
Advertisement
ಸಿಎಂ ನಿವಾಸ ಕಾವೇರಿಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಭಾರೀ ನಾಟಕೀಯ ಬೆಳವಣಿಗೆಗಳು ನಡೆದಿತ್ತು. ಮಧ್ಯಾಹ್ನ 12 ಗಂಟೆಗೆ ಆರಂಭವಾದ ಈ ಸಭೆಯಲ್ಲಿ ಭಾರೀ ಚರ್ಚೆಗಳು ನಡೆದು ಸಂಜೆ 3.30ರ ವೇಳೆಗೆ ಅಂತಿಮ ನಿರ್ಧಾರಕ್ಕೆ ಬರಲಾಯಿತು. ಹೀಗಾಗಿ ಸಭೆಯಲ್ಲಿ ಏನು ಚರ್ಚೆ ನಡೆಯಿತು, ಯಾರು ಏನು ಹೇಳಿದರು ಎನ್ನುವ ಮಾಹಿತಿ ಮೂಲಗಳಿಂದ ಪಬ್ಲಿಕ್ ಟಿವಿಗೆ ಸಿಕ್ಕಿದೆ.
Advertisement
ತೋಟಗಾರಿಕಾ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರು ಇಬ್ಬರು ಸಚಿವರು ರಾಜೀನಾಮೆ ನೀಡಿದ್ರೆ ಏನಾಗುತ್ತೆ ಅಂತ ವಿನಯ್ ಕುಲಕರ್ಣಿ ಹೇಳಿದ್ದಾನೆ. ನಾವು ಏಕೆ ರಾಜೀನಾಮೆ ಕೊಡಬೇಕು. ಅವನೇ ರಾಜೀನಾಮೆ ಕೊಟ್ಟು ಹೋಗಲಿ ಎಂದು ಹೇಳಿದ್ದಾರೆ. ಇದಕ್ಕೆ ಜಲಸಂಪನ್ಮೂಲ ಸಚಿವ ಎಂಬಿ ಪಾಟೀಲ್, ನಮ್ಮ ಜೊತೆ ನೀವು ಬರುವುದಾದರೆ ಬನ್ನಿ. ಇಲ್ಲಾಂದ್ರೆ ಸುಮ್ಮನಿರಿ. ನಮ್ಮ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ ಎಂದು ಮರು ಉತ್ತರ ನೀಡಿದ್ದಾರೆ.
Advertisement
ಈ ಉತ್ತರಕ್ಕೆ ಗರಂ ಆದ ಎಸ್.ಎಸ್. ಮಲ್ಲಿಕಾರ್ಜುನ್, ಅನಗತ್ಯವಾಗಿ ಸಮುದಾಯವನ್ನು ಹಾಳ್ ಮಾಡ್ತಾ ಇದ್ದೀರಿ. ನಿಮ್ ಇಬ್ರಿಂದಾನೆ (ಎಂ.ಬಿ. ಪಾಟೀಲ್, ಕುಲಕರ್ಣಿ) ಏನೋ ಮಾಡೋಕೆ ಹೋಗಿ ಏನೋ ಆಗಿದೆ. ವೀರಶೈವ ಲಿಂಗಾಯತ ಸ್ವತಂತ್ರ ಧರ್ಮಕ್ಕೆ ಮಹಾಸಭಾ ಮನವಿ ಕೊಟ್ಟಿದ್ದು. ಆದ್ರೀಗ, ಲಿಂಗಾಯತ ಸ್ವತಂತ್ರ ಧರ್ಮ ಅಂತ ಗುಲ್ಲೆಬ್ಬಿಸಿ ಹಾಳ್ ಮಾಡಕ ಹತ್ತೀರಿ ಎಂದಿದ್ದಾರೆ.
ಮಲ್ಲಿಕಾರ್ಜುನ್ ಆರೋಪಕ್ಕೆ ವಿನಯ ಕುಲಕರ್ಣಿ, ಹಾಳ್ ಮಾಡ್ತಿರೋದು ನಾವಲ್ಲ, ನೀವು. ನಮ್ಮ ಬಸವಣ್ಣ ಸ್ಥಾಪನೆ ಮಾಡಿದ್ದೇ ನಿಜವಾದ ಧರ್ಮ. ಬಸವ ಧರ್ಮ. ಲಿಂಗಾಯತ ಸ್ವತಂತ್ರ ಧರ್ಮ ಆಗಬೇಕು ಅಂತ ಸ್ವಾಮೀಜಿಗಳೇ ಸಿಎಂ ಹತ್ರ ಬಂದು ಒತ್ತಾಯ ಮಾಡ್ತಿದ್ದಾರೆ. ನೀವು ಅದನ್ನ ದಿಕ್ಕು ತಪ್ಪಿಸ್ತಾ ಇದ್ದೀರಿ ಎಂದು ಸಿಟ್ಟಿನಿಂದ ಹೇಳಿದರು. ಇದಾದ ಬಳಿಕ ಸಂಪುಟ ಸಭೆಯಿಂದ ಸಚಿವ ವಿನಯ ಕುಲಕರ್ಣಿ ಸಿಟ್ಟಿನಿಂದ ಹೊರಬಂದು 10 ನಿಮಿಷಗಳ ಬಳಿಕ ಮತ್ತೆ ವಾಪಸ್ ಹಾಜರಾದರು.
ಈ ವೇಳೆ ಆರೋಗ್ಯ ಸಚಿವ ರಮೇಶ್ ಕುಮಾರ್ ಮಾತನಾಡಿ, ಎಲ್ಲರೂ ನಿಮ್ಮ ಅಭಿಪ್ರಾಯಗಳನ್ನಷ್ಟೇ ತಿಳಿಸಿ. ಮುಖ್ಯಮಂತ್ರಿಗಳು ಅಂತಿಮ ನಿರ್ಧಾರ ಕೈಗೊಳ್ಳುತ್ತಾರೆ. ಸುಮ್ಮನೆ ಕೂಗಾಟ-ಕಿತ್ತಾಟ ಸರಿಯಲ್ಲ ಎಂದು ಸಲಹೆ ನೀಡಿದರು.
ಈ ಚರ್ಚೆ ವೇಳೆ ಮಧ್ಯಪ್ರವೇಶಿಸಿ ಸಿಎಂ ಸಿದ್ದರಾಮಯ್ಯ, ಲಾಭ ನಷ್ಟದ ಲೆಕ್ಕಚಾರದ ಬಗ್ಗೆ ನನಗೆ ಹೇಳ್ತೀರಾ ನೀವು. ರಾಜಕೀಯ ಲಾಭ-ನಷ್ಟ ನನಗೂ ಗೊತ್ತಿದೆ. ಇದೇನ್ ಕ್ಯಾಬಿನೆಟ್ ಅಂತಾ ತಿಳ್ಕೊಂಡಿದ್ದೀರೋ? ಏನು? ಇಷ್ಟೊಂದು ವೈಯಕ್ತಿಕ ಮಟ್ಟಕ್ಕೆ ಇಳಿದು ಜಗಳ ಮಾಡಿದ್ರೆ ಏನು ಆಗಲ್ಲ. ಸುಮ್ಮನಿರಿ. ಈ ವಿಚಾರದ ಬಗ್ಗೆ ನಿಮ್ಮ ನಿಮ್ಮ ಅಭಿಪ್ರಾಯಗಳನ್ನಷ್ಟೇ ತಿಳಿಸಿ ಎಂದರು. ಈ ಸಂದರ್ಭದಲ್ಲಿ ಪ್ರತ್ಯೇಕ ಧರ್ಮದ ಸಾಧಕ-ಬಾಧಕ ಬಗ್ಗೆ ಅಡ್ವೋಕೇಟ್ ಜನರಲ್ ಮಧುಸೂದನ್ ನಾಯಕ್ ಅವರನ್ನು ಸಂಪುಟ ಸಭೆಗೆ ಕರೆಸಿ ಸಿದ್ದರಾಮಯ್ಯ ಮಾಹಿತಿ ಪಡೆದರು.
ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಬಹುತೇಕ ಸಚಿವರು ಒಪ್ಪಿಗೆ ನೀಡಿದರು. ಆದರೆ ಸಚಿವ ಈಶ್ವರ ಖಂಡ್ರೆ ಹಾಗೂ ಎಸ್.ಎಸ್. ಮಲ್ಲಿಕಾರ್ಜುನ್ ವಿರೋಧ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಈಶ್ವರ ಖಂಡ್ರೆ ಮಾತನಾಡಿ, ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಸರ್ಕಾರ ಶಿಫಾರಸು ಮಾಡಿದರೆ ಕನಿಷ್ಠ 20 ಸ್ಥಾನಗಳನ್ನು ನಾವು ಕಳೆದುಕೊಳ್ಳಬೇಕಾಗುತ್ತದೆ ಎಂದಾಗ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ, ನನಗೂ ಕೂಡ ಹೀಗೆ ಅನಿಸುತ್ತಿದೆ. ಈಡಿಗರಿಗೂ ಪ್ರತ್ಯೇಕ ಧರ್ಮದ ಸ್ಥಾನ ನೀಡುತ್ತೀರಾ ಎಂದು ಪ್ರಶ್ನಿಸಿದರು.
ಶಿಕ್ಷಣ ಸಚಿವ ತನ್ವೀರ್ ಸೇಠ್ ಮಾತನಾಡಿ, ನೀವು ಅಲ್ಪಸಂಖ್ಯಾತರ ಸ್ಥಾನಮಾನ ನೀಡಿ. ಆದರೆ, ಅಲ್ಪಸಂಖ್ಯಾತರಿಗೆ ಯಾವುದೇ ದುಷ್ಪರಿಣಾಮ ಆಗದಂತೆ ಎಚ್ಚರಿಕೆ ವಹಿಸಿ ಎಂದು ಸಲಹೆ ನೀಡಿದರು. ಎಲ್ಲರ ಮಾತು ಕೇಳಿ ಕೊನೆಗೆ ಪ್ರತ್ಯೇಕ ಲಿಂಗಾಯತ ಧರ್ಮದ ಬದಲಿಗೆ ಲಿಂಗಾಯತ ಮತ್ತು ವೀರಶೈವ ಲಿಂಗಾಯತ, ಬಸವ ತತ್ವ ಪಾಲಕರಿಗೆ ಪ್ರತ್ಯೇಕ ಧರ್ಮ ಎನ್ನುವ ಸಾಲು ಸೇರಿಸಿ. ಮುಂದೆ ಏನಾಗುತ್ತೋ ಅಂತ ನೋಡೋಣ ಎಂದು ಹೇಳಿ ಸಭೆಯನ್ನು ಮುಕ್ತಾಯಗೊಳಿಸಿದರು ಎಂದು ಹೇಳಲಾಗುತ್ತಿದೆ.
ಸಚಿವ ಸಂಪುಟದ ನಿರ್ಣಯಗಳೇನು?
* ಬಸವ ತತ್ವ ಒಪ್ಪಿ ಬರುವವರಿಗೆ ಪ್ರತ್ಯೇಕ ಧರ್ಮದ ಸ್ಥಾನಮಾನ
* ಲಿಂಗಾಯತ ಮತ್ತು ವೀರಶೈವ, ಬಸವತತ್ವದಡಿ ನಂಬಿಕೆ ಇರುವವರಿಗೆ ಅನ್ವಯ
* ಪ್ರತ್ಯೇಕ ಧರ್ಮಕ್ಕೆ ಒಳಗಾಗುವವರಿಗೆ ಧಾರ್ಮಿಕ ಅಲ್ಪಸಂಖ್ಯಾತ ಸ್ಥಾನಮಾನ
* ಕರ್ನಾಟಕ ಅಲ್ಪಸಂಖ್ಯಾತ ಕಾಯ್ದೆಯ ಸೆಕ್ಷನ್ 2ಡಿ ಅಡಿ ಶಿಫಾರಸು
* ಕೇಂದ್ರದ ಅಲ್ಪಸಂಖ್ಯಾತ ಆಯೋಗದ 2 (ಸಿ) ಕಾಯ್ದೆ ಅನ್ವಯ
ಅಲ್ಪಸಂಖ್ಯಾತರ ಸ್ಥಾನಮಾನ ಯಾರಿಗೆ?
* ರಾಜ್ಯ ಸರ್ಕಾರವೇನೋ ಶಿಫಾರಸು ಮಾಡಿದೆ ಆದ್ರೆ ಕೇಂದ್ರ ಸಂಪುಟ ಒಪ್ಪಿಗೆ ನೀಡಬೇಕು
* ಅಲ್ಪಸಂಖ್ಯಾತರ ಸ್ಥಾನಮಾನ ಬೇಕಾದರೆ ವೀರಶೈವರು ಕೂಡ ಬಸವ ತತ್ವ ಪಾಲನೆ ಮಾಡಬೇಕು
* ವೀರಶೈವರು ತಮ್ಮದೇ ಆದ ತತ್ವ ಸಿದ್ಧಾಂತ ಹೊಂದಿರುವುದರಿಂದ ಬಸವ ತತ್ವ ಅನುಕರಣೆ ಅಸಾಧ್ಯ
* ಅಲ್ಪಸಂಖ್ಯಾತರ ಸ್ಥಾನಮಾನ ಸಿಕ್ಕಿದ್ರೆ, ಲಿಂಗಾಯತರು ಮತ್ತು ವೀರಶೈವರು ಹಿಂದುಗಳಲ್ಲ!