ರತ್ಲಾಮ್: ದೀಪಾವಳಿ ವೇಳೆ ಮಧ್ಯಪ್ರದೇಶದ ರತ್ಲಾಮ್ ಜಿಲ್ಲೆಯಲ್ಲಿರೋ ಮಹಾಲಕ್ಷ್ಮೀ ದೇವಸ್ಥಾನಕ್ಕೆ ಭೇಟಿ ನೀಡೋ ಭಕ್ತರಿಗೆ ಥಟ್ ಅಂತ ಕಾಣಿಸೋದು ಸಾವಿರಾರು ನೋಟುಗಳು ಹಾಗೂ ಚಿನ್ನಾಭರಣಗಳು. ಅದ್ರಲ್ಲೂ ಈ ಬಾರಿ ಒಂದಲ್ಲ, ಎರಡಲ್ಲ ಬರೋಬ್ಬರಿ 100 ಕೋಟಿ ರೂ. ನಗದು ಹಣದಿಂದ ಯಾರೂ ಕಂಡು ಕೇಳರಿಯದ ರೀತಿಯಲ್ಲಿ ಮಹಾಲಕ್ಷ್ಮಿ ದೇವಿಗೆ ಅಲಂಕಾರ ಮಾಡಿದ್ದು, ಭಕ್ತಾದಿಗಳ ಕಣ್ಮನ ಸೆಳೆಯುತ್ತಿದೆ.
ಪ್ರತಿ ವರ್ಷ ದೀಪಾವಳಿ ಹಬ್ಬದ ಪ್ರಯುಕ್ತ ಭಕ್ತಾದಿಗಳು ತಮ್ಮ ನಗದು ಹಣ, ಆಭರಣ ಮತ್ತು ಬೆಲೆ ಬಾಳುವ ವಸ್ತುಗಳನ್ನು ತಂದು ಅರ್ಚಕರಿಗೆ ನೀಡುತ್ತಾರೆ. ಅದನ್ನು ದೇಗುಲದ ಗರ್ಭಗುಡಿ ಒಳಗಡೆ ಇಟ್ಟು ಮಹಾಲಕ್ಷ್ಮಿ ದೇವಿಗೆ ಅಲಂಕಾರ ಮಾಡುತ್ತಾರೆ. ಈ ಸಂಪ್ರದಾಯವು ಪ್ರತಿವರ್ಷವು ನಡೆದುಕೊಂಡು ಬರುತ್ತಿದೆ. ಈ ಬಾರಿ ಮೋದಿ ಸರ್ಕಾರ ತಂದ ಹೊಸ ಹೊಸ ಗರಿ ಗರಿ ನೋಟುಗಳು, ಚಿನ್ನ, ಬೆಳ್ಳಿ, ವಜ್ರ ಹಾಗೂ ಮೌಲ್ಯಯುತ ವಸ್ತುಗಳಿಂದ ಅಲಂಕಾರ ಮಾಡಿದ್ದು, ಮಹಾಲಕ್ಷ್ಮಿ ದೇವಿ ಹಣದ ಮಧ್ಯೆ ಕೂತು ರಾರಾಜಿಸುತ್ತಿರುವುದನ್ನು ನೋಡಲು ಭಕ್ತರು ಬರುತ್ತಿದ್ದಾರೆ.
ನಾನು ಮಹಾಲಕ್ಷ್ಮಿ ದೇವಸ್ಥಾನಕ್ಕೆ ಕಳೆದ 6 ವರ್ಷಗಳಿಂದ ಬರುತ್ತಿದ್ದೇನೆ. ನಾನು ಬೇಡಿಕೊಂಡಿದ್ದು ನಿಜವಾಗಿದೆ. ಆದ್ದರಿಂದ ನನಗೆ ತುಂಬಾ ಸಂತೋಷವಾಗಿದೆ ಎಂದು ಭಕ್ತರಾದ ಮಮತಾ ಪೊರ್ವಾಲ್ ಹೇಳಿದ್ದಾರೆ.
ದೀಪಾವಳಿ ಸಂದರ್ಭದಲ್ಲಿ ಈ ದೇವಾಲಯಕ್ಕೆ ಭಕ್ತರು ದೂರದೂರುಗಳಿಂದ ಬರುತ್ತಾರೆ. ಅವರು ತಮ್ಮ ಅಮೂಲ್ಯವಾದ ವಸ್ತುಗಳನ್ನು ತಂದು ಕೊಡುತ್ತಾರೆ. ನಾವು ಅದನ್ನು ದೇವಿಗೆ ಮತ್ತು ಗರ್ಭಗುಡಿಯ ಒಳಗೆ ಅಲಂಕಾರ ಮಾಡಿ ದೇವಿ ಮುಂದೇನೂ ಆಭರಣ, ಹಣ ಎಲ್ಲವನ್ನೂ ಇಡುತ್ತೇವೆ. ಈ ವರ್ಷ ಹಣ, ಆಭರಣ ಎಲ್ಲದರ ಒಟ್ಟು ಮೌಲ್ಯ ಸುಮಾರು 100 ಕೋಟಿ. ರೂ.ಗಳಷ್ಟಿದೆ. ಭಕ್ತರು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದು, ದೇವಾಲಯದ ಒಳಗೆ ಹಣವನ್ನು ಇಡಲು ಜಾಗವೇ ಸಾಕಾಗುತ್ತಿಲ್ಲ ಎಂದು ದೇವಾಲಯದ ಮುಖ್ಯ ಅರ್ಚಕರಾದ ಸಂಜಯ್ ಅವರು ತಿಳಿಸಿದರು.
ದೇವಾಲಯದಲ್ಲಿ ಅಧಿಕ ಹಣ, ಬೆಲೆಬಾಳುವ ವಸ್ತುಗಳಿರುವುದರಿಂದ ಕಳ್ಳತನವಾಗದಂತೆ ನೋಡಿಕೊಳ್ಳಲು ಭದ್ರತೆಯನ್ನೂ ಏರ್ಪಡಿಸಲಾಗಿರುತ್ತದೆ. ನಾವು ದೇವಾಲಯದ ಗರ್ಭಗುಡಿ ಒಳಗೆ ನಿತಂತರವಾಗಿ ಪೊಲೀಸ್ ಸಿಬ್ಬಂದಿಯನ್ನು ಭದ್ರತೆಗಾಗಿ ನಿಯೋಜಿಸಿದ್ದೇವೆ ಎಂದು ಅಸಿಸ್ಟೆಂಟ್ ಸೂಪರಿಂಟೆಂಡೆಂಟ್ ಪ್ರದೀಪ್ ಸಿಂಗ್ ಹೇಳಿದ್ದಾರೆ.
ದೀಪಾವಳಿ ಹಬ್ಬಕ್ಕೆ ಮುನ್ನವೇ ಸಾವಿರಾರು ಭಕ್ತರು ಈ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ. ಭಕ್ತರು ನೀಡುವ ಕೊಡುಗೆಗಳ ದಾಖಲೆಯನ್ನು ಒಂದು ಪುಸ್ತಕದಲ್ಲಿ ಬರೆದುಕೊಳ್ಳಲಾಗುತ್ತದೆ. ದೀಪಾವಳಿ ಮುಗಿದ ನಂತರ ದೇವಾಲಯದ ಅಧಿಕಾರಿಗಳು ಬೆಲೆ ಬಾಳುವ ವಸ್ತುಗಳನ್ನು ಭಕ್ತರಿಗೆ ಹಿಂದಿರುಗಿಸುತ್ತಾರೆ. ಇದುವರೆಗೂ ಭಕ್ತರು ದೇವಾಲಯದಲ್ಲಿ ಇರಿಸಲಾಗಿದ್ದ ಅಮೂಲ್ಯ ವಸ್ತುಗಳನ್ನು ಯಾರೂ ಕಳೆದುಕೊಂಡಿಲ್ಲ ಎಂದು ಹೇಳಿದ್ದಾರೆ.