ಕಾರವಾರ: ದೇಶದ ಏಕೈಕ ವಿಮಾನ ವಾಹಕ ಯುದ್ದ ನೌಕೆಯನ್ನು ವೀಕ್ಷಿಸಲು ಸಾರ್ವಜನಿಕರಿಗೆ ಡಿಸೆಂಬರ್ 22 ರಂದು ಭಾರತೀಯ ನೌಕಾದಳ ಅವಕಾಶ ಮಾಡಿ ಕೊಟ್ಟಿದೆ.
ಕಾರವಾರದ ಅರಗಾದಲ್ಲಿರುವ ಕದಂಬ ನೌಕಾನೆಲೆಗೆ ವಿಕ್ರಮಾದಿತ್ಯ ಯುದ್ಧ ಹಡಗು ಈ ತಿಂಗಳ ಕೊನೆಯಲ್ಲಿ ಆಗಮಿಸಲಿದ್ದು ನೌಕಾ ನೆಲೆಯ ವೀಕ್ಲಿ ಸೆಲೆಬ್ರೇಶನ್ -2019 ಅಂಗವಾಗಿ ನೌಕಾದಳದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಹಾಗೂ ಮಾಹಿತಿ ನೀಡುವ ನಿಟ್ಟಿನಲ್ಲಿ ಸಾರ್ವಜನಿಕರಿಗೆ ಮುಕ್ತ ಅವಕಾಶ ಮಾಡಿಕೊಟ್ಟಿದೆ.
ಸಾರ್ವಜನಿಕರಿಗೆ ಅವಕಾಶ ಹೇಗೆ?
ಕಾರವಾರ ತಾಲೂಕಿನ ಅರಗಾ ಗ್ರಾಮದ ಕದಂಬ ನೌಕಾನೆಲೆಯ ಮುಖ್ಯ ದ್ವಾರದಲ್ಲಿ ಅವಕಾಶ ಕಲ್ಪಿಸಲಾಗಿದೆ. ಸಾರ್ವಜನಿಕರು, ವಿದ್ಯಾರ್ಥಿಗಳಿಗೆ ಅವಕಾಶ ಮಾಡಿಕೊಟ್ಟಿದ್ದು ಡಿ.22 ರ ಭಾನುವಾರ ಹಡಗನ್ನು ವೀಕ್ಷಿಸುವವರು ತಮ್ಮ ಗುರುತಿನ ಚೀಟಿಯಾದ ಆಧಾರ್ ಕಾರ್ಡ್ ಅಥವಾ ವೋಟರ್ ಐಡಿಯನ್ನು ಕಡ್ಡಾಯವಾಗಿ ತರಬೇಕು. ನಂತರ ಮುಖ್ಯ ದ್ವಾರದಲ್ಲಿ ನೊಂದಣಿ ಮಾಡಿಸಿ ಒಳಗೆ ಪ್ರವೇಶ ನೀಡಲಾಗುತ್ತದೆ. ಖಾಸಗಿ ವಾಹನಗಳಿಗೆ ಪ್ರವೇಶವಿರುವುದಿಲ್ಲ.
ಹಡಗಿನ ವಿಶೇಷವೇನು?
1978 ರಲ್ಲಿ ಈ ಹಡಗು ನಿರ್ಮಾಣಗೊಂಡು ರಷ್ಯಾದ ನೌಕಾನೆಲೆಯಲ್ಲಿ ಸೇವೆ ಸಲ್ಲಿಸಿ ನಂತರ 1996 ರಲ್ಲಿ ಇದಕ್ಕೆ ನಿವೃತ್ತಿ ನೀಡಲಾಯಿತು. ನಂತರ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ರವರು 2004 ರಲ್ಲಿ ಒಪ್ಪಂದದ ಮೂಲಕ 97.4 ಕೋಟಿ ರೂಗಳನ್ನು ನೀಡಿ ಖರೀದಿಸಲು ಮಾತುಕತೆ ನಡೆದಿತ್ತು. ಇದೇ ಸಂದರ್ಭದಲ್ಲಿ ಇದರ ನವೀಕರಣ ನಡೆಸಿ ರಷ್ಯಾದ ಹೆಚ್ಚುವರಿ ಬೇಡಿಕೆಯಂತೆ ಯುಪಿಎ ಸರ್ಕಾರ 235 ಕೋ.ಡಾಲರ್(10,575 ಕೋ.ರೂಪಾಯಿ 2010ರ ದರದಲ್ಲಿ) ನೀಡಿ ನವೀಕರಣಗೊಂಡು 2013ರ ನವೆಂಬರಿನಲ್ಲಿ ಭಾರತೀಯ ನೌಕಾಪಡೆ ಸೇವೆಗೆ ಸಮರ್ಪಿಸಲಾಗಿತ್ತು.
44,500 ಟನ್ ತೂಕ, 284 ಮೀಟರ್ ಉದ್ದ, 60 ಮೀಟರ್ ಎತ್ತರ, 34 ಯುದ್ಧ ವಿಮಾನ ಮತ್ತು ಹೆಲಿಕಾಪ್ಟರ್ ಗಳನ್ನು ಹೊರುವ ಸಾಮರ್ಥ್ಯ ಹೊಂದಿದೆ. 1,600 ಸಿಬ್ಬಂದಿಗಳು, 22 ಅಂತಸ್ತುಗಳಿರುವ ನೌಕೆಗೆ ಒಮ್ಮೆ ಇಂಧನ ಭರ್ತಿಯಾದರೆ 13 ಸಾವಿರ ಕಿ.ಮೀ ಕ್ರಮಿಸುವ ಸಾಮರ್ಥ್ಯ ಹೊಂದಿದೆ. ಸದ್ಯ ಅರಬ್ಬಿ ಸಮುದ್ರದ ಗಡಿಯಲ್ಲಿ ಕಾವಲುಗಾರನಾಗಿ ಸೇವೆ ಸಲ್ಲಿಸುತ್ತಿದ್ದು ಕಾರವಾರದ ಕದಂಬ ನೌಕಾ ನೆಲೆ ಇದರ ತಂಗುದಾಣವಾಗಿದೆ.
ಎಂಟು ತಿಂಗಳ ಹಿಂದೆ ನಡೆದಿತ್ತು ದುರಂತ!
ಕಳೆದ ಎಂಟು ತಿಂಗಳ ಹಿಂದೆ ವಿಕ್ರಮಾದಿತ್ಯ ಹಡಗಿನಲ್ಲಿ ಬಾಯ್ಲರ್ ಸಿಡಿದು ಉತ್ತರ ಪ್ರದೇಶ ಮೂಲದ ಲೆಫ್ಟಿನೆಂಟ್ ಕಮಾಂಡರ್ ಚೌಹಾಣ್ ಮೃತಪಟ್ಟು 7 ಮಂದಿ ಗಂಭೀರವಾಗಿ ಗಾಯಗೊಂಡಿದ್ದರು. ಇದರ ನಂತರ ಮುಂಬೈನಲ್ಲಿ ತಾಂತ್ರಿಕ ಸಮಸ್ಯೆಯನ್ನು ಸರಿಪಡಿಸಿ ಗಡಿಯಲ್ಲಿ ಪಹರೆಗೆ ತೆರಳಿತ್ತು. ಈ ಘಟನೆ ನಂತರ ಸಾರ್ವಜನಿಕರಿಗೆ ವಿಕ್ರಮಾದಿತ್ಯ ಹಡಗು ವೀಕ್ಷಣೆಗೆ ಅವಕಾಶವನ್ನು ನಿರ್ಬಂಧಿಸಲಾಗಿತ್ತು.