Connect with us

ಕರ್ನೂಲು ರಸ್ತೆಯಲ್ಲಿ ಜಂಪ್ ಆಯ್ತು ಇನ್ನೋವಾ ಕಾರು- ಪೇಜಾವರಶ್ರೀ ಬೆನ್ನು ಉಳುಕು

ಕರ್ನೂಲು ರಸ್ತೆಯಲ್ಲಿ ಜಂಪ್ ಆಯ್ತು ಇನ್ನೋವಾ ಕಾರು- ಪೇಜಾವರಶ್ರೀ ಬೆನ್ನು ಉಳುಕು

ಉಡುಪಿ: ಪೇಜಾವರ ಮಠಾಧೀಶ ವಿಶ್ವೇಶತೀರ್ಥ ಸ್ವಾಮೀಜಿ ಅವರು ಸಂಚರಿಸುತ್ತಿದ್ದ ಕಾರು ರಸ್ತೆಯಲ್ಲಿ ಎಗರಿದೆ. ಬೆನ್ನು ಉಳುಕಿದ್ದು ವೈದ್ಯರು ವಿಶ್ರಾಂತಿ ಪಡೆಯಬೇಕೆಂದು ಸೂಚಿಸಿದ್ದಾರೆ.

ಮಂತ್ರಾಲಯದಿಂದ ಹೈದರಾಬಾದ್ ವಿಮಾನ ನಿಲ್ದಾಣಕ್ಕೆ ಇನ್ನೋವಾ ಕಾರಲ್ಲಿ ಪೇಜಾವರಶ್ರೀ ಅವರು ಸಂಚಾರ ಮಾಡುತ್ತಿದ್ದರು. ಕರ್ನೂಲು ವ್ಯಾಪ್ತಿಯಲ್ಲಿ ಸ್ಪೀಡ್ ಬ್ರೇಕರ್ ಅನ್ನು ಚಾಲಕ ನೋಡದ ಕಾರಣ ಕಾರು ಸುಮಾರು ಒಂದು ಅಡಿ ಹಾರಿದೆ.

ಕಾರು ರಸ್ತೆ ತಲುಪುತ್ತಿದ್ದಂತೆ ಹೊಸದಾಗಿ ನಿರ್ಮಾಣವಾಗುತ್ತಿದ್ದ ಸೇತುವೆ ಸಿಕ್ಕಿದೆ. ಅದು ರಸ್ತೆಯ ಎತ್ತರದಿಂದ ಸ್ವಲ್ಪ ಕೆಳಗಿತ್ತು. ಈ ವೇಳೆ ಕಾರಿನಲ್ಲಿ ಮಲಗಿದ್ದ ಪೇಜಾವರಶ್ರೀ ಒಂದು ಬಾರಿ ಎಗರಿ ಸೀಟಿಗೆ ಬಿದ್ದಿದ್ದಾರೆ. ಈ ಸಂದರ್ಭ ಬೆನ್ನು ಉಳುಕಿದೆ. ಕೂಡಲೇ ಸ್ಥಳೀಯ ಖಾಸಗಿ ಆಸ್ಪತ್ರೆಗೆ ಸ್ವಾಮೀಜಿಯವರನ್ನು ದಾಖಲು ಮಾಡಲಾಯ್ತು.

ಪ್ರಥಮ ಚಿಕಿತ್ಸೆ ಪಡೆದ ಸ್ವಾಮೀಜಿ ಅಲ್ಲಿಂದ ವಿಮಾನ ಮೂಲಕ ಮಂಗಳೂರಿಗೆ ಕರೆದುಕೊಂಡು ಬಂದಿದ್ದಾರೆ. ಓಡಾಡಲು ಆಗದ ಸ್ಥಿತಿಯಲ್ಲಿರುವ ಸ್ವಾಮೀಜಿಯನ್ನು ಎತ್ತಿಕೊಂಡೇ ತಂದೆವು. ಬೆನ್ನು ಬಹಳ ನೋವಿದೆ ಅಂತ ಹೇಳುತ್ತಾರೆ. ಪರ್ಯಾಯದಲ್ಲಿ ಎರಡು ವರ್ಷ ಬಿಡುವಿಲ್ಲದೆ ಪೂಜಾಕೈಂಕರ್ಯದಲ್ಲಿ ತೊಡಗಿದ್ದರಿಂದ ದೇಹವು ದಣಿದಿದೆ. ಅವರಿಗೆ ಸಂಪೂರ್ಣ ವಿಶ್ರಾಂತಿ ಅಗತ್ಯವಿದೆ. ಆದ್ರೆ ಸ್ವಾಮೀಜಿ ನಮ್ಮ ಮಾತು ಕೇಳುವುದಿಲ್ಲ. ಅವರು ಹೇಳಿದ್ದೆ ಅವರಿಗೆ ಆಗಬೇಕು ಎಂದು ಸ್ವಾಮೀಜಿ ಆಪ್ತ ಸುನೀಲ್ ಮುಚ್ಚಿಣ್ಣಾಯ ಹೇಳಿದರು.

ತಜ್ಞ ವೈದ್ಯರು ವಿಶ್ವೇಶತೀರ್ಥರಿಗೆ ಚಿಕಿತ್ಸೆ ಕೊಟ್ಟಿದ್ದು, ಕುಳಿತುಕೊಳ್ಳಬಾರದು, ದೇಹಕ್ಕೆ ಸುಸ್ತು ಮಾಡಿಕೊಳ್ಳಬಾರದು. ಒಂದು ವಾರ ಎಲ್ಲೂ ಓಡಾಡ್ಬಾರ್ದು ಅಂತ ತಾಕೀತು ಮಾಡಿದ್ದಾರೆ. ಜನವರಿ 18ರಂದು ಕೃಷ್ಣನ ಪೂಜಾಧಿಕಾರ ಮುಗಿಸಿದ್ದ ಸ್ವಾಮೀಜಿ 19ರಂದು ಉಡುಪಿಯಲ್ಲಿ 3-4 ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಮಧ್ಯಾಹ್ನ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿರುವ ಸೋಂದ ಮಠಕ್ಕೆ ಭೇಟಿಕೊಟ್ಟಿದ್ದರು. ಅಲ್ಲಿಂದ ಗದಗ, ಅಲ್ಲಿಂದ ಮಂತ್ರಾಲಯದ ಉತ್ಸವದಲ್ಲಿ ಭಾಗಿಯಾಗಿದ್ದರು.

ಮಂತ್ರಾಲಯದಿಂದ ಹೈದರಾಬಾದ್ ಹೋಗಿ ಮಂಗಳೂರು ಹೊರಟಿದ್ದರು. ದಾರಿಮಧ್ಯೆ ಕರ್ನೂಲಿನಲ್ಲಿ ಈ ಘಟನೆ ಸಂಭವಿಸಿದೆ. ಮೂರು ದಿನದ ಹಿಂದೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ್ದ ಸ್ವಾಮೀಜಿ ತನಗೆ ಬೆನ್ನು ನೋವು, ದೇಹದಲ್ಲಿ ಶಕ್ತಿಯಿಲ್ಲ, ಓಡಾಟ ಕಷ್ಟ. ಅಂತ ಹೇಳಿಕೊಂಡಿದ್ದರು. ಆದ್ರೆ ಪೇಜಾವರ ಅಭಿಮಾನಿಗಳು- ಶಿಷ್ಯರು ದೇಶದೆಲ್ಲೆಡೆ ಇದ್ದು ಪ್ರಮುಖ ಕಾರ್ಯಕ್ರಮಗಳಾದಾಗ ಆಹ್ವಾನ ನೀಡುತ್ತಾರೆ. ಪಾದಪೂಜೆಗೆ ಬರುವಂತೆ ಒತ್ತಾಯ ಮಾಡುತ್ತಾರೆ.

Advertisement
Advertisement