ಕಳಸದಲ್ಲಿ 20 ಅಡಿ ಆಳಕ್ಕೆ ಬಿತ್ತು ಇನ್ನೋವಾ – 9 ಮಂದಿ ಪ್ರಾಣಾಪಾಯದಿಂದ ಪಾರು

Public TV
1 Min Read
innova car falls 200 feet tourists escape in kalasa chikmagaluru 3

ಚಿಕ್ಕಮಗಳೂರು: ರಸ್ತೆ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಇನ್ನೋವಾ ಕಾರೊಂದು (Innova Car) ಸುಮಾರು 20 ಅಡಿ ಎತ್ತರದಿಂದ ಕೆಳಕ್ಕೆ ಬಿದ್ದಿರುವ ಘಟನೆ ಜಿಲ್ಲೆಯ ಕಳಸ (Kalasa) ತಾಲೂಕಿನ ಕಲ್ಮಕ್ಕಿ ಗ್ರಾಮದಲ್ಲಿ ನಡೆದಿದೆ.

ಕಾರಿನಲ್ಲಿ ಮಗು ಸೇರಿ 9 ಜನ ಕೋಲಾರ ಜಿಲ್ಲೆಯಿಂದ ಹೊರನಾಡು ಅನ್ನಪೂರ್ಣೇಶ್ವರಿ ದರ್ಶನಕ್ಕೆ (Horanadu Annapoorneshwari Temple) ಹೊರಟಿದ್ದರು. ಕಾರು ಕಳಸ ತಾಲೂಕಿನ ಕಲ್ಮಕ್ಕಿಗೆ ಬರುತ್ತಿದ್ದಂತೆ ರಸ್ತೆಯ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ.  ಇದನ್ನೂ ಓದಿ: ಶವ ಸಾಗಿಸ್ತಿದ್ದ ಅಂಬುಲೆನ್ಸ್ ಪಲ್ಟಿ – ಪ್ರಾಣಾಪಾಯದಿಂದ ಚಾಲಕ ಪಾರು

ಕಾರು ಸುಮಾರು 20 ಅಡಿ ಎತ್ತರದಿಂದ ಬಿದ್ದ ಪರಿಣಾಮ ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಮನೆಯ ಮುಂಭಾಗಕ್ಕೆ ಬಿದ್ದ ಕಾರು ಮನೆ ಮೇಲೆ ಬಿದ್ದಿದ್ದರೆ ದೊಡ್ಡ ಅನಾಹುತವೇ ಸಂಭವಿಸುತ್ತಿತ್ತು. ಮನೆ ಕೂಡ ಬಹುತೇಕ ನಜ್ಜುಗುಜ್ಜಾಗಿ, ಸಾವು ಸಂಭವಿಸುವ ಮಟ್ಟಕ್ಕೂ ಅನಾಹುತವಾಗುತ್ತಿತ್ತು. ಆದರೆ ಕಾರು ಮನೆ ಮುಂಭಾಗ ಬಿದ್ದಿದ್ದರಿಂದ ಭಾರೀ ಅನಾಹುತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದಂತಾಗಿದೆ.

innova car falls 200 feet tourists escape in kalasa chikmagaluru 1

ಕಾರು 20 ಅಡಿ ಎತ್ತರದಿಂದ ಬಿದ್ದ ಪರಿಣಾಮ ಕಾರಿನಲ್ಲಿದ್ದ ಒಂಬತ್ತು ಜನರಿಗೆ ದೊಡ್ಡ ಮಟ್ಟದ ಗಾಯಗಳಾಗಿವೆ. ಅದರಲ್ಲಿ ಮೂವರ ಪರಿಸ್ಥಿತಿ ಗಂಭೀರವಾಗಿದೆ. ಅಪಘಾತವಾದ ಕೂಡಲೇ ಗಾಯಾಳುಗಳನ್ನು ಕಳಸ ಆಸ್ಪತ್ರೆಗೆ ಸೇರಿಸಿ ಪ್ರಾಥಮಿಕ ಚಿಕಿತ್ಸೆಯ ಬಳಿಕ ಎಲ್ಲರನ್ನೂ ಹೆಚ್ಚಿನ ಚಿಕಿತ್ಸೆಗಾಗಿ ಎರಡು ಅಂಬುಲೆನ್ಸ್‌ನಲ್ಲಿ ಮಂಗಳೂರಿನ ವೆನ್‍ಲಾಕ್ ಆಸ್ಪತ್ರೆಗೆ ರವಾನಿಸಲಾಗಿದೆ. ಕಳಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Web Stories

Share This Article