Connect with us

ಬಳ್ಳಾರಿಯಲ್ಲಿ ಅದಿರು ಲಾರಿಗಳ ಅಬ್ಬರಕ್ಕೆ ನಿತ್ಯ ಅಮಾಯಕರು ಬಲಿ!

ಬಳ್ಳಾರಿಯಲ್ಲಿ ಅದಿರು ಲಾರಿಗಳ ಅಬ್ಬರಕ್ಕೆ ನಿತ್ಯ ಅಮಾಯಕರು ಬಲಿ!

-ಜನರ ಪಾಲಿಗೆ ಕಿಲ್ಲರ್ ಲಾರಿಗಳಾದ್ರೂ ಜಿಲ್ಲಾಡಳಿತಕ್ಕಿಲ್ಲ ವರಿ

ಬಳ್ಳಾರಿ: ಜಿಲ್ಲೆಯಲ್ಲಿ ಅದಿರು ಲಾರಿಗಳ ಅಬ್ಬರ ಜೋರಾಗಿಬಿಟ್ಟಿದೆ. ಅದಿರು ಲಾರಿಗಳಿಗೆ ಸಿಲುಕಿ ನಿತ್ಯ ಅಮಾಯಕ ಪ್ರಯಾಣಿಕರು ಬಲಿಯಾಗುತ್ತಿದ್ದಾರೆ. ಗಣಿ ಪ್ರದೇಶವಾದ ಸಂಡೂರು, ತೋರಣಗಲ್‍ನಲ್ಲಿ ಅದಿರು ಲಾರಿಗಳು ಇದೀಗ ಅಕ್ಷರಶಃ ಕಿಲ್ಲರ್ ಲಾರಿಗಳಂತೆ ಓಡಾಡುತ್ತಿವೆ. ಹೀಗಾಗಿ ಜನರು ರಸ್ತೆಯ ಮೇಲೆ ಓಡಾಡಲೂ ಭಯಪಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಗಣಿ ನಾಡು ಬಳ್ಳಾರಿ ಜಿಲ್ಲೆಯಲ್ಲಿ ಅದಿರು ಲಾರಿಗಳ ಅಬ್ಬರಕ್ಕೆ ಬ್ರೇಕ್ ಹಾಕೋರೆ ಇಲ್ಲದಂತಾಗಿ ಬಿಟ್ಟಿದೆ. ಗಣಿಗಾರಿಕೆ ನಿಂತರೂ ಅದಿರು ಲಾರಿಗಳ ಅಬ್ಬರ ಮಾತ್ರ ಇನ್ನೂ ತಗ್ಗಿಲ್ಲ. ಸಾಕ್ಟ್ ಯಾರ್ಡ್ ಕಾರ್ಖಾನೆಗಳಿಗೆ ಬೇಗನೇ ಅದಿರು ಸರಬುರಾಜು ಮಾಡಲು ಲಾರಿಗಳು ಓವರ್ ಸ್ಪೀಡ್ ಆಗಿ ಓಡುತ್ತಿರುವುದರಿಂದ ನಿತ್ಯ ಒಂದಿಬ್ಬರು ಅದಿರು ಲಾರಿಗಳಿಗೆ ಆಹಾರವಾಗುವಂತಾಗಿದೆ.

ಕಳೆದ 5 ವರ್ಷಗಳಲ್ಲಿ 73 ಜನರು ಅದಿರು ಲಾರಿಗಳ ಅಪಘಾತದಲ್ಲಿ ಮೃತಪಟ್ಟರೆ ಬರೋಬ್ಬರಿ 304 ಜನರು ಲಾರಿಗಳ ಅಪಘಾತದಿಂದ ಗಾಯಗೊಂಡು ನಿತ್ಯ ನರಕಯಾತನೆ ಪಡುವಂತಾಗಿದೆ. ಕಳೆದ ಜನವರಿ ತಿಂಗಳೊಂದರಲ್ಲೇ 6 ಜನರು ಮೃತಪಟ್ಟು 20ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಹೀಗಾಗಿ ಅದಿರು ಲಾರಿಗಳ ಅಬ್ಬರಕ್ಕೆ ಬ್ರೇಕ್ ಹಾಕೋರೂ ಯಾರು ಇಲ್ವಾ ಅನ್ನೋ ಪ್ರಶ್ನೆ ಎದುರಾಗಿದೆ.

ಅದಿರು ಲಾರಿಗಳ ಅಬ್ಬರಕ್ಕೆ ಅಮಾಯಕ ಜನರು ಬಲಿಯಾಗಿರುವುದನ್ನು ವಿರೋಧಿಸಿ ಸ್ಥಳೀಯ ಸಂಘಟನೆಗಳು ಪ್ರತಿಭಟನೆ ಮಾಡಿದ್ರೆ ಕ್ರಮ ಕೈಗೊಳ್ಳಬೇಕಾದ ಜಿಲ್ಲಾಡಳಿತ ಇದೀಗ ಹೋರಾಟಗಾರರ ವಿರುದ್ಧವೇ ಪ್ರಕರಣ ದಾಖಲಿಸಿ ಹೋರಾಟ ಹತ್ತಿಕ್ಕುತ್ತಿರುವುದು ಅನುಮಾನಕ್ಕೆ ಕಾರಣವಾಗಿದೆ. ಅಲ್ಲದೇ ಜನರ ಜೀವ ಕಾಪಾಡಬೇಕಾದ ಜಿಲ್ಲಾಧಿಕಾರಿಗಳೇ ಜನರ ಜೀವ ತಗೆಯುವ ಲಾರಿಗಳ ಪರವಾಗಿ ನಿಂತಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

 

Advertisement
Advertisement