ಬೆಂಗಳೂರು: ಜೈಲುಗಳಲ್ಲಿ ಇಷ್ಟು ದಿನ ಬಿರಿಯಾನಿ ಪೊಟ್ಟಣ, ಮೂಸಂಬಿ, ಕಿತ್ತಾಳೆಹಣ್ಣುಗಳಲ್ಲಿ ಕೈದಿಗಳಿಗೆ ಗಾಂಜಾ ಸರಬರಾಜಾಗುತ್ತಿದ್ದು ಬೆಳಕಿಗೆ ಬಂದಿತ್ತು. ಆದರೆ ಬಾಳೆಹಣ್ಣಿನಲ್ಲಿ 500 ರೂ. 2000 ರೂ. ನೋಟುಗಳನ್ನು ರವಾನೆ ಮಾಡುವ ಮೂಲಕ ಬಡ್ಡಿ ದಂಧೆ ನಡೆಯುತ್ತಿರುವುದು ಬೆಳಕಿಗೆ ಬಂದಿದೆ.
ಹಲವು ಹಗರಣಗಳಿಂದ ಸದಾ ಸುದ್ದಿಯಲ್ಲಿರುವ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಇದೀಗ ಮೀಟರ್ ಬಡ್ಡಿ ದಂಧೆ ನಡೆಯುತ್ತಿರುವುದು ಬೆಳಕಿಗೆ ಬಂದಿದೆ. ಜೈಲಿನ ಒಳಗಿರುವ ಪ್ರಭಾವಿ ಕೈದಿಗಳು ತಮ್ಮ ಕುಟುಂಬ ಹಾಗು ಸ್ನೇಹಿತರ ಮೂಲಕ ವಾಮ ಮಾರ್ಗದಲ್ಲಿ ಜೈಲಿನ ಒಳಭಾಗಕ್ಕೆ ಹಣ ತರಿಸಿಕೊಂಡು ಆ ಹಣವನ್ನು ಜೈಲಿನಲ್ಲಿ ಇರುವ ಕೈದಿಗಳಿಗೆ ನೀಡಿ ಬಡ್ಡಿ ವಸೂಲಿ ಮಾಡುತ್ತಿರುವ ಘಟನೆ ನಡೆಯುತ್ತಿದೆ. ಕೈದಿಗಳು ಒಳಭಾಗದಲ್ಲಿ 100 ರೂಪಾಯಿಗೆ 10 ರೂಪಾಯಿಯಂತೆ ಬಡ್ಡಿ ಹಣ ಪಡೆದು ಜೈಲಿನ ಒಳಭಾಗದಲ್ಲೂ ತಮ್ಮ ವೃತ್ತಿಯನ್ನು ವಿಸ್ತರಿಸಿದ್ದಾರೆ.
Advertisement
ಜೈಲಿನ ಕೈದಿಗಳಿಗೆ ಅವರ ಕುಟುಂಬದವರು ನೀಡಿದ್ದ ಬಾಳೆ ಹಣ್ಣನ್ನು ಪರಿಶೀಲಿಸಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ. ಬಾಳೆಹಣ್ಣಿನಲ್ಲಿ ಹೊಸ 500 ಹಾಗೂ 2000 ರೂಪಾಯಿಗಳ ನೋಟುಗಳನ್ನು ಸುರುಳಿ ಸುತ್ತಿ ಕಳುಹಿಸಲು ಯತ್ನಿಸಿದ್ದು ಇದೀಗ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದು ಈ ವಿಡಿಯೋ ಇದೀಗ ವೈರಲ್ ಆಗಿದೆ. ಇನ್ನು ಜೈಲಿನಲ್ಲಿ ಬಡ್ಡಿ ದಂಧೆ ನಡೆಯುತ್ತಿದೆ ಎಂದು ಡಿಐಜಿ ರೂಪಾ ಈ ಹಿಂದೆ ನೀಡಿದ್ದ ಜೈಲಿನ ಭ್ರಷ್ಟಾಚಾರದ ವರದಿಯಲ್ಲಿ ತಿಳಿಸಿದ್ದರು. ಈಗ ಈ ವಿಡಿಯೋದಿಂದ ರೂಪಾ ಮಾಡಿದ್ದ ಅರೋಪ ಸಾಬೀತಾಗಿದೆ.
Advertisement
ರೂಪ ವರ್ಗಾವಣೆ ನಂತರ ಪರಪ್ಪನ ಅಗ್ರಹಾರ ಜೈಲಿನ ಅಕ್ರಮಗಳಿಗೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ಗೃಹ ಇಲಾಖೆ ಹಲವು ಬದಲಾವಣೆಗಳನ್ನು ಮಾಡಿ ಇನ್ನು ಮುಂದೆ ಜೈಲಿನಲ್ಲಿ ಯಾವುದೇ ಅಕ್ರಮಗಳು ನಡೆಯಲು ಅವಕಾಶ ನೀಡುವುದಿಲ್ಲವೆಂದು ಹೇಳಿದ್ದ ಸಚಿವ ರಾಮಲಿಂಗಾರೆಡ್ಡಿ ಇದಕ್ಕೆ ಯಾವ ರೀತಿ ಉತ್ತರಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
Advertisement
https://youtu.be/SYfLxC_73bY