ಭೋಪಾಲ್: ಅಪಘಾತದಲ್ಲಿ ಕಾಲಿಗೆ ಗಂಭೀರವಾಗಿ ಗಾಯಗೊಂಡಿದ್ದ ವರ ಜೊತೆ ವೀಲ್‌ಚೇರ್‌ನಲ್ಲಿಯೇ ಏಳು ಪ್ರದಕ್ಷಿಣೆ ಹಾಕಿದ್ದು, ಈ ದೃಶ್ಯವನ್ನು ನೋಡಿದ ಅತಿಥಿಗಳು ಭಾವುಕರಾದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ದಿಲೀಪ್ ಸಕ್ಸೆನಾ ಹಾಗೂ ದೀಪ್ತಿ ಕಶ್ಯಪ್ ಮದುವೆ ಮೊದಲೇ ನಿಗದಿಯಾಗಿತ್ತು. ಜೂನ್ 6ರಂದು ದಿಲೀಪ್ ಆಮಂತ್ರಣ ಪತ್ರಿಕೆ ಹಂಚಲು ಹೋಗುತ್ತಿದ್ದಾಗ ಅಪಘಾತ ಸಂಭವಿಸಿದೆ. ಪರಿಣಾಮ ದಿಲೀಪ್ ಎಡಗಾಲಿಗೆ ಹಾಗೂ ಬಲಗೈ ಮುರಿದಿತ್ತು.
ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ದಿಲೀಪ್‍ನನ್ನು ನಾಲ್ಕು ದಿನ ಐಸಿಯುನಲ್ಲಿ ದಾಖಲಿಸಲಾಗಿತ್ತು. ಬಳಿಕ ದಿಲೀಪ್ ಐಸಿಯುನಿಂದ ಹೊರಬಂದ ಮೇಲೆ ಅವರ ಪೋಷಕರು ಮದುವೆಯನ್ನು ಮುಂದೂಡಲು ನಿರ್ಧರಿಸಿದ್ದರು. ಆದರೆ ವಧು ಇದಕ್ಕೆ ನಿರಾಕರಿಸಿ ನಿಗದಿಯಾದ ದಿನದಂದು ಮದುವೆ ಆಗಿದ್ದಾರೆ.
ಮದುವೆಯ ಸಂದರ್ಭದಲ್ಲಿ ವರ ವೀಲ್‌ಚೇರ್‌ನಲ್ಲಿಯೇ ಕುಳಿತು ಎಲ್ಲಾ ಶಾಸ್ತ್ರಗಳನ್ನು ನೆರವೇರಿಸಿದ್ದಾರೆ. ಬಳಿಕ ಅಗ್ನಿಕುಂಡಕ್ಕೆ 7 ಸುತ್ತು ಪ್ರದಕ್ಷಿಣೆ ಹಾಕುವ ವೇಳೆ ಸ್ವತಃ ವಧು ವರನ ವೀಲ್ ಚೇರ್ ತಳ್ಳಿ ಅರ್ಧ ಸುತ್ತು ಸುತ್ತಿದರೆ, ವರನ ಸ್ನೇಹಿತರು ವೀಲ್‍ಚೇರ್ ತಳ್ಳಿ ಉಳಿದ ಸುತ್ತುಗಳನ್ನು ಸುತ್ತಿಸಿದ್ದಾರೆ.
ಮದುವೆ ನಂತರ ವಧುವಿಗೆ ಬೀಳ್ಕೊಡಿಗೆ ಕೊಡುವ ಸಂದರ್ಭದಲ್ಲೂ ಸ್ವತಃ ವಧು- ವರನ ವೀಲ್‍ಚೇರ್ ತಳ್ಳಿಕೊಂಡು ಕಾರಿನವರೆಗೂ ತಲುಪಿಸಿದ್ದಾರೆ. ಇದನ್ನು ನೋಡಿ ಮದುವೆಗೆ ಬಂದು ಅತಿಥಿಗಳು ಭಾವುಕರಾಗಿದ್ದಾರೆ.