ಕಾರವಾರ: ಮೂರು ದಿನಗಳ ಹಿಂದೆ ಸ್ವೀಕಾರ ಕೇಂದ್ರದಿಂದ ತಪ್ಪಿಸಿಕೊಂಡು ಹೋಗಿದ್ದ ಯುವತಿಯನ್ನು ಪೊಲೀಸರು ಬಂಧಿಸಿ ಅಮಾನವೀಯವಾಗಿ ಎಳೆದುಕೊಂಡು ಹೋದ ಘಟನೆ ನಗರದಲ್ಲಿ ನಡೆದಿದ್ದು, ಸಾರ್ವಜನಿಕ ವಲಯದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.
ಕಾರವಾರ ತಾಲೂಕಿನ ಮಲ್ಲಾಪುರ ಗ್ರಾಮದ ಚಾಂದಿನಿ (17) (ಹೆಸರು ಬದಲಾಯಿಸಲಾಗಿದೆ) ಸ್ವೀಕಾರ ಕೇಂದ್ರದಿಂದ ತಪ್ಪಿಸಿಕೊಂಡು ಬಂದಿದ್ದ ಯುವತಿ. ಚಾಂದಿನಿಯ ತಂದೆ ಜಗದೀಶ್ ಆಕೆಯನ್ನು ಸಾಕಲಾಗದೆ ಏಳು ತಿಂಗಳ ಹಿಂದೆಯೇ ಸ್ವೀಕಾರ ಕೇಂದ್ರದಲ್ಲಿ ಬಿಟ್ಟು ಹೋಗಿದ್ದರು. ಕಾಣೆಯಾಗಿದ್ದ ಮಗಳು ಪತ್ತೆಯಾಗಿದ್ದರೂ ಆಕೆಯನ್ನು ಮನೆಗೆ ಕರೆದುಕೊಂಡು ಹೋಗಲು ಜಗದೀಶ್ ಹಿಂದೇಟು ಹಾಕಿದ್ದಾರೆ.
Advertisement
ನಡೆದದ್ದು ಏನು?: ಚಾಂದಿನಿ, ಜಗದೀಶ್ ನ ಮೊದಲ ಪತ್ನಿಯ ಮಗಳು. ಚಾಂದಿನಿ ಚಿಕ್ಕವಳಿದ್ದಾಗ ತಾಯಿ ಮೃತಪಟ್ಟಿದ್ದಳು. ತಂದೆ ಜಗದೀಶ್ ಮತ್ತೊಂದು ಮದುವೆ ಆಗಿದ್ದಾರೆ. ಇದರಿಂದಾಗಿ ಚಾಂದಿನಿ ನಿಷ್ಕಾಳಜಿಗೆ ಒಳಗಾಗಿದ್ದು, ಮಲತಾಯಿ ಧೋರಣೆಗೆ ತುತ್ತಾದ ಅವಳನ್ನು ಜಗದೀಶ್ 9ನೇ ತರಗತಿಯಲ್ಲಿಯೇ ಬೆಂಗಳೂರಿನ ಬಾಲ ಮಂದಿರಕ್ಕೆ ಸೇರಿಸಿದ್ದರು. ಅಲ್ಲಿ ದೈಹಿಕ ಹಿಂಸೆ ನೀಡುತ್ತಿದ್ದರು ಅಂತಾ ಚಾಂದಿನಿ ತಪ್ಪಿಸಿಕೊಂಡು, ಪುನಃ ಮನೆಗೆ ಬಂದಿದ್ದಾಳೆ.
Advertisement
ಮನೆಯಲ್ಲಿಯೇ ಇದ್ದು ವ್ಯಾಸಂಗ ಮಾಡುತ್ತಿದ್ದ ಚಾಂದಿನಿ ಜಗದೀಶ್ ನನ್ನು ದ್ವೇಷಿಸಲು ಪ್ರಾರಂಭಿಸಿದ್ದಳು. ನಿತ್ಯವೂ ಮಲತಾಯಿ ಜೊತೆಗೆ ಜಗಳವಾಡುತ್ತಿದ್ದಳು. ಅಷ್ಟೇ ಅಲ್ಲದೆ ಮನೆ ಬಿಟ್ಟು ಸುಮಾರು ದಿನ ಸ್ನೇಹಿತೆಯರ ಮನೆಯಲ್ಲಿ ತಂಗುತ್ತಿದ್ದಳು. ಇದರಿಂದ ಬೇಸತ್ತ ದಂಪತಿ ಆಕೆಗೆ ಮಾನಸಿಕ ಕಾಯಿಲೆಯಿದೆ, ನಮ್ಮಿಂದ ಸಾಕಲು ಆಗುವುದಿಲ್ಲವೆಂದು ಕಾರವಾರದ ಸ್ವೀಕಾರ ಕೇಂದ್ರಕ್ಕೆ ತಂದು ಬಿಟ್ಟಿದ್ದರು. ಪಿಯುಸಿ ಪೂರ್ಣಗೊಳಿಸಿದ್ದು, ಮನೆಯಲ್ಲಿ ಇರುವ ಇಚ್ಛೆಯನ್ನು ತಂದೆಗೆ ಹೇಳಿದ್ದರೂ, ಜಗದೀಶ್ ಆಕೆಯನ್ನು ಮನೆಗೆ ಕರೆದುಕೊಂಡೊಯ್ಯಲು ಒಪ್ಪುತ್ತಿರಲಿಲ್ಲ. ಹೀಗಾಗಿ ಮೂರು ದಿನಗಳ ಹಿಂದೆ ಆಕೆ ಸ್ವೀಕಾರ ಕೇಂದ್ರದಿಂದ ತಪ್ಪಿಸಿಕೊಂಡು ಹೋಗಿದ್ದಾಳೆ.
Advertisement
ಚಾಂದಿನಿ ಕಾಣೆಯಾಗಿರುವ ಕುರಿತು ತಂದೆ ಜಗದೀಶ್ ಮಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಬುಧವಾರ ರಾತ್ರಿ ಕಾರವಾರದ ಎಂ.ಜಿ.ರೋಡ್‍ನಲ್ಲಿ ಚಾಂದಿನಿ ಪತ್ತೆಯಾಗಿದ್ದಾಳೆ. ಸ್ಥಳಕ್ಕೆ ಬಂದ ಸ್ವೀಕಾರ ಕೇಂದ್ರದ ಅಧಿಕಾರಿಗಳು, ಮಲ್ಲಾಪುರ ಪೊಲೀಸರು ಹಾಗೂ ಜಗದೀಶ್ ಚಾಂದಿನಿಯನ್ನು ಸ್ವೀಕಾರ ಕೇಂದ್ರಕ್ಕೆ ಕರೆದೊಯ್ಯಲು ಮುಂದಾಗಿದ್ದಾರೆ. ಈ ವೇಳೆ ಅವರಿಂದ ತಪ್ಪಿಸಿಕೊಳ್ಳಲು ಚಾಂದಿನಿ ಚರಂಡಿಯಲ್ಲಿ ಅರ್ಧ ಗಂಟೆ ಬಚ್ಚಿಟ್ಟುಕೊಂಡಿದ್ದಳು. ಅವಳ ಮನವೊಲಿಕೆಗಾಗಿ ಪೊಲೀಸರು ನಾವು ನಿನ್ನನ್ನು ಸ್ವೀಕಾರ ಕೇಂದ್ರಕ್ಕೆ ಕಳುಹಿಸುವುದಿಲ್ಲ ಎಂದು ಹೇಳಿದ್ದರು. ಆದರೆ ಜಗದೀಶ್ ಮಾತ್ರ ಆಕೆಯನ್ನು ಮನೆಗೆ ಕರೆದುಕೊಂಡು ಹೋಗಲು ಸಿದ್ಧರಿರಲಿಲ್ಲ. ಯುವತಿಯ ಪ್ರತಿರೋಧದ ನಡುವೆಯೇ ಮಳೆಯನ್ನು ಲೆಕ್ಕಿಸದೇ ಸ್ವೀಕಾರ ಕೇಂದ್ರದ ಮಹಿಳಾ ಅಧಿಕಾರಿ ಹಾಗೂ ಮಹಿಳಾ ಪೊಲೀಸ್ ಅಮಾನವೀಯವಾಗಿ ಎಳೆದು ಆಟೋದಲ್ಲಿ ಸ್ವೀಕಾರ ಕೇಂದ್ರಕ್ಕೆ ಬಿಟ್ಟಿದ್ದಾರೆ. ಈ ದೃಶ್ಯವನ್ನು ಕಂಡ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.