ಮಣಿಪುರದಲ್ಲಿ ಅಮಾನವೀಯ ಘಟನೆ – ಇಬ್ಬರು ಮಹಿಳೆಯರನ್ನು ಬೆತ್ತಲಾಗಿಸಿ ಮೆರವಣಿಗೆ; ಅತ್ಯಾಚಾರ ಆರೋಪ

Public TV
2 Min Read
manipur

ಇಂಫಾಲ: ಮಣಿಪುರದಲ್ಲಿ (Manipur) ಪುರುಷರ ಗುಂಪೊಂದು ಇಬ್ಬರು ಮಹಿಳೆಯರನ್ನು ಬೆತ್ತಲಾಗಿಸಿ ರಸ್ತೆಯಲ್ಲಿ ಮೆರವಣಿಗೆ ಮಾಡಿರುವ ದೃಶ್ಯದ ಭಯಾನಕ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ. ಈ ಘಟನೆಗೆ ಭಾರೀ ಖಂಡನೆ ವ್ಯಕ್ತವಾಗಿದ್ದು, ಸೂಕ್ತ ಕ್ರಮಕ್ಕಾಗಿ ಎಲ್ಲೆಡೆ ಆಗ್ರಹಿಸಲಾಗುತ್ತಿದೆ.

ವರದಿಗಳ ಪ್ರಕಾರ, ಈ ಘಟನೆ ರಾಜ್ಯ ರಾಜಧಾನಿ ಇಂಫಾಲದಿಂದ ಸುಮಾರು 35 ಕಿ.ಮೀ ದೂರದಲ್ಲಿರುವ ಕಾಂಗ್‌ಪೋಕ್ಪಿ (Kangpokpi) ಜಿಲ್ಲೆಯಲ್ಲಿ ಮೇ 4 ರಂದು ನಡೆದಿದೆ. ಇಬ್ಬರು ಮಹಿಳೆಯರನ್ನು ಸಮೀಪದ ಹೊಲಕ್ಕೆ ಎಳೆದೊಯ್ದು ಸಾಮೂಹಿಕ ಅತ್ಯಾಚಾರ (Gang Rape) ಎಸಗಲಾಗಿದೆ ಎಂದು ಸ್ಥಳೀಯ ಬುಡಕಟ್ಟು ಸಂಘಟನೆ ಆರೋಪಿಸಿದೆ.

 

RApe 1ಈ ಘಟನೆ ನಡೆದ ಹಿಂದಿನ ದಿನವಷ್ಟೇ ಪರಿಶಿಷ್ಟ ಪಂಗಡದ ಮೀಸಲಾಗಿಗಾಗಿ ಮೈತೇಯ್ ಸಮುದಾಯದವರ ಬೇಡಿಕೆಯ ಕುರಿತು ಮೈತೇಯ್ ಹಾಗೂ ಕುಕಿ ಬುಡಕಟ್ಟು ಸಮುದಾಯದವರ ನಡುವೆ ಭಾರೀ ಘರ್ಷಣೆ ಏರ್ಪಟ್ಟಿತ್ತು. ಇದೀಗ ವೀಡಿಯೋಗೆ ಸಂಬಂಧಿಸಿದಂತೆ ಸಂತ್ರಸ್ತ ಮಹಿಳೆಯರು ಕುಕಿ ಸಮುದಾಯಕ್ಕೆ ಸೇರಿದವರು ಎಂದು ಸ್ಥಳೀಯ ಬುಡಕಟ್ಟು ನಾಯಕರ ವೇದಿಕೆ (ITLF) ತಿಳಿಸಿದೆ. ಇದನ್ನೂ ಓದಿ: ಸೀಮಾ ಹೈದರ್‌ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್‌ – ಪಾಕ್‌ ಮಹಿಳೆಯಿಂದ ಭಾರತೀಯ ಯೋಧರಿಗೆ ಫ್ರೆಂಡ್‌ ರಿಕ್ವೆಸ್ಟ್‌

ವೈರಲ್ ಆಗಿರುವ ವೀಡಿಯೋದಲ್ಲಿ ಮೈತೇಯ್ ಸಮುದಾಯದ ಪುರುಷರ ಗುಂಪೊಂದು ಕುಕಿ ಜನಾಂಗಕ್ಕೆ ಸೇರಿದ ಇಬ್ಬರು ಮಹಿಳೆಯರನ್ನು ಸಾಮೂಹಿಕ ಅತ್ಯಾಚಾರ ಮಾಡಲು ಭತ್ತದ ಗದ್ದೆಗೆ ಎಳೆದುಕೊಂಡು ಹೋಗುವುದನ್ನು ತೋರಿಸುತ್ತದೆ. ಪುರುಷರ ಗುಂಪು ಮಹಿಳೆಯರನ್ನು ಬೆತ್ತಲಾಗಿಸಿ, ರಸ್ತೆಯಲ್ಲಿ ಮೆರವಣಿಗೆ ಮಾಡಿದ್ದಲ್ಲದೇ ಅವರಿಗೆ ಕಿರುಕುಳ ನೀಡಿದ್ದಾರೆ. ಮಹಿಳೆಯರು ಅಸಹಾಯಕತೆಯಿಂದ ಅಳುತ್ತ ತಮ್ಮನ್ನು ಬಿಡುವಂತೆ ಮನವಿ ಮಾಡಿರುವುದೂ ವೀಡಿಯೋದಲ್ಲಿ ಕಂಡುಬಂದಿದೆ.

ಹೇಯ ಕೃತ್ಯಕ್ಕೆ ಸಂಬಂಧಿಸಿದಂತೆ ಇಲ್ಲಿಯವರೆಗೆ ಪ್ರಕರಣ ದಾಖಲಾಗಿದೆಯೇ ಅಥವಾ ಯಾರನ್ನಾದರೂ ಬಂಧಿಸಿದ್ದಾರೆಯೇ ಎಂಬ ಬಗ್ಗೆ ಮಣಿಪುರ ಪೊಲೀಸರು ಇನ್ನೂ ಯಾವುದೇ ಹೇಳಿಕೆಗಳನ್ನು ನೀಡಿಲ್ಲ. ಆದರೆ ಭಯಾನಕ ಘಟನೆ ಬೆಳಕಿಗೆ ಬರುತ್ತಲೇ ರಾಜಕೀಯ ನಾಯಕರು ಸೇರಿದಂತೆ ಅನೇಕರು ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ. ಕೃತ್ಯದಲ್ಲಿ ಭಾಗಿಯಾಗಿರುವ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಲ್ಲಿ ಮನವಿ ಮಾಡಿದ್ದಾರೆ. ಇದನ್ನೂ ಓದಿ: 2002 ರ ಗುಜರಾತ್‌ ಗಲಭೆ ಪ್ರಕರಣ – ತೀಸ್ತಾ ಸೆಟಲ್ವಾಡ್‌ಗೆ ಸುಪ್ರೀಂ ಜಾಮೀನು

Web Stories

Share This Article