ಮಂಡ್ಯ: ಜಿಲ್ಲೆಯ ಧಾರ್ಮಿಕ ಕ್ಷೇತ್ರವಾಗಿರುವ ಮೇಲುಕೋಟೆಯನ್ನು ಇನ್ಫೋಸಿಸ್ ಫೌಂಡೇಶನ್ ಹಾಗೂ ರಾಜ್ಯ ಸರ್ಕಾರದ ಸಹಯೋಗದೊಂದಿಗೆ ಅಭಿವೃದ್ಧಿ ಪಡಿಸುವುದಾಗಿ ಸುಧಾಮೂರ್ತಿಯವರು ಹೇಳಿದ್ದಾರೆ.
ಮೇಲುಕೋಟೆ ಅಭಿವೃದ್ಧಿ ವಿಚಾರವಾಗಿ ನಡೆದ ಸಭೆಯ ಬಳಿಕ ಮಾತನಾಡಿದ ಅವರು, ಮೇಲುಕೋಟೆ ನೋಡುವುದಕ್ಕೆ ಖುಷಿಯಾಗುತ್ತದೆ. ಇದೊಂದು ಧಾರ್ಮಿಕ ಕ್ಷೇತ್ರವಾಗಿದೆ. ಇಲ್ಲಿ ಹೊಯ್ಸಳರು ಹಾಗೂ ಮೈಸೂರು ರಾಜರ ಕಾಲದ ಕುರುಹುಗಳಿವೆ. ಹೀಗಾಗಿ ಮೇಲುಕೋಟೆ ಕ್ಷೇತ್ರವನ್ನು ಅಭಿವೃದ್ಧಿ ಹಾಗೂ ನಿರ್ವಹಣೆ ಮಾಡಬೇಕಾಗಿದೆ. ಮೈಸೂರು ದಸರಾ ಉದ್ಘಾಟನೆಗೆ ಬಂದಾಗಲೇ ಸರ್ಕಾರದ ಬಳಿ ಈ ವಿಷಯವನ್ನು ಪ್ರಸ್ತಾಪಿಸಿದ್ದೆ. ಇದರಲ್ಲಿ ಯಾವುದೇ ರಾಜಕೀಯ ಉದ್ದೇಶವಿಲ್ಲವೆಂದು ತಿಳಿಸಿದರು.
ಮೇಲುಕೋಟೆ ಅಭಿವೃದ್ಧಿ ವಿಚಾರಕ್ಕೆ ರಾಜ್ಯ ಸರ್ಕಾರವು ನಮ್ಮೊಂದಿಗೆ ಕೈ ಜೋಡಿಸುವ ಭರವಸೆಯನ್ನು ನೀಡಿದೆ. ಇಲ್ಲಿ ಒಂದು, ಎರಡು ಕೊಳಗಳಿಲ್ಲ. ನೂರಕ್ಕೂ ಹೆಚ್ಚು ಕೊಳಗಳಿವೆ. ಸರ್ಕಾರದ ಸಹಯೋಗದೊಂದಿಗೆ ಮೇಲುಕೋಟೆಯ ಅಭಿವೃದ್ಧಿಯ ಜವಾಬ್ದಾರಿಯನ್ನು ಹೊತ್ತಿದ್ದೇವೆ. ಪಾರಂಪರಿಕ ಕಟ್ಟಡಗಳಿಗೆ ಧಕ್ಕೆಯಾಗದಂತೆ ಕ್ಷೇತ್ರವನ್ನು ಅಭಿವೃದ್ಧಿ ಪಡಿಸಲಿದ್ದೇವೆ. ಆದಷ್ಟು ಬೇಗ ಈ ಯೋಜನೆ ಕಾರ್ಯರೂಪಕ್ಕೆ ಬರುವುದಾಗಿ ಹೇಳಿದರು.
ಇದೇ ವೇಳೆ ಸಣ್ಣ ನೀರಾವರಿ ಸಚಿವ ಸಿ.ಎಸ್.ಪುಟ್ಟರಾಜು ಮಾತನಾಡಿ, ರಾಜ್ಯ ಸರ್ಕಾರ ಹಾಗೂ ಇನ್ಫೋಸಿಸ್ ಸಂಸ್ಥೆ ಜೊತೆಯಾಗಿ ಮೇಲುಕೋಟೆ ಅಭಿವೃದ್ಧಿಗೆ ಮುಂದಾಗಿದೆ. ಸರ್ಕಾರ ಇನ್ಫೋಸಿಸ್ ಸಂಸ್ಥೆಗೆ ಎಲ್ಲಾ ರೀತಿಯ ಸಹಕಾರವನ್ನು ನೀಡಲಿದೆ. ಇದಲ್ಲದೇ ಇನ್ಫೋಸಿಸ್ ಸಹ ರಾಜ್ಯ ಸರ್ಕಾರಕ್ಕೆ ಸಲಹೆಗಳನ್ನು ನೀಡುತ್ತಲೇ ಬಂದಿದೆ. ಈಗ ಮೇಲುಕೋಟೆ ಪಾರಂಪರಿಕ ಸ್ಥಳಗಳ ಅಭಿವೃದ್ಧಿಗೆ ಸಂಸ್ಥೆ ಮುಂದಾಗಿರುವುದು ಖುಷಿ ವಿಚಾರವಾಗಿದೆ. ಮೇಲುಕೋಟೆ ಸಂಪೂರ್ಣ ಅಭಿವೃದ್ಧಿಗೆ ಪ್ರಾಧಿಕಾರ ರಚನೆಯಾಗಲಿದೆ. ಎಲ್ಲಾ ರೀತಿಯ ಮೂಲಭೂತ ಸೌಕರ್ಯಗಳನ್ನು ಒದಗಿಸಿ, ಅಭಿವೃದ್ಧಿ ಪಡಿಸಲಾಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸಭೆಯ ನಂತರ ಮೇಲುಕೋಟೆ ಕಲ್ಯಾಣಿ, ಭುವನೇಶ್ವರಿ ಮಂಟಪವನ್ನು ಸುಧಾಮೂರ್ತಿಯವರು ವೀಕ್ಷಣೆ ಮಾಡಿದರು. ಈ ವೇಳೆ ಮಂಟಪದ ಮೇಲೆ ಬೆಳದಿರುವ ಗಿಡವನ್ನು ನೋಡಿ, ಕೂಡಲೇ ತೆಗೆದು ಹಾಕುವಂತೆ ಸೂಚನೆ ನೀಡಿದರು. ಗಿಡ ಹೀಗೆ ಬೆಳೆದರೆ ಕೆಲವೇ ವರ್ಷಗಳಲ್ಲಿ ಮಂಟಪವನ್ನು ಆಕ್ರಮಿಸಿ ಹಾಳು ಮಾಡುತ್ತದೆಂದು ಆತಂಕ ಹೊರಹಾಕಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv