ಬೆಂಗಳೂರು: ರಾಜ್ಯದಲ್ಲಿ ಸೈಬರ್ ಕ್ರೈಂ ವಿಭಾಗದಲ್ಲಿ ಅಪರಾಧಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇನ್ಫೋಸಿಸ್ ಸಹಯೋಗದಲ್ಲಿ ತರಬೇತಿ ಹಾಗೂ ಸಂಶೋಧನಾ ಕೇಂದ್ರ ನಿರ್ಮಿಸಲಾಗಿದೆ ಎಂದು ರಾಜ್ಯ ಗೃಹ ಸಚಿವ ಎಂಬಿ ಪಾಟೀಲ್ ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸೈಬರ್ ಕ್ರೈಂ ತರಬೇತಿ ಹಾಗೂ ಸಂಶೋಧನಾ ಕೇಂದ್ರ ನಿರ್ಮಿಸಲು ಇನ್ಫೋಸಿಸ್ ಸಂಸ್ಥಾಪಕಿಯಾದ ಸುಧಾಮೂರ್ತಿ ಅವರು 22 ಕೋಟಿ ರೂ. ನೆರವು ನೀಡಿದ್ದಾರೆ. ಈ ಮೂಲಕ ಅಮೆರಿಕ ಸೇರಿದಂತೆ ಹಲವು ಕಡೆ ತರಬೇತಿ ಪಡೆಯುವಂತಹ ಸೌಲಭ್ಯವನ್ನು ಸುಧಾಮೂರ್ತಿ ಅವರು ಕಲ್ಪಿಸಿಕೊಟ್ಟಿದ್ದಾರೆ ಎಂದರು.
Advertisement
Advertisement
ಸೈಬರ್ ಕ್ರೈಂ ಸಂಶೋಧನಾ ಕೇಂದ್ರದ ಸಿಎಂ ಕುಮಾರಸ್ವಾಮಿ ಅವರು ಉದ್ಘಾಟನೆ ಮಾಡಿದರು. ಬಳಿಕ ಸುದ್ದಿಗೋಷ್ಠಿ ನಡೆಸಿ ಗೃಹ ಸಚಿವರು, ರಾಜ್ಯ ಸರ್ಕಾರದ ಗೃಹ ಇಲಾಖೆಯಲ್ಲಿ ಇದು ಮೈಲಿಗಲ್ಲಾಗಿದ್ದು, ಇತ್ತೀಚೆಗೆ ಸೈಬರ್ ಕ್ರೈಂ ವಿಭಾಗದಲ್ಲಿ ಅಪರಾಧಗಳು ಹೆಚ್ಚಾಗುತ್ತಿವೆ. ಡೇಟಾ ಕಳ್ಳತನ ಎನ್ನುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿದೆ. ಬೆಂಗಳೂರು ನಗರ ಪ್ರತಿಷ್ಠಿತ ನಗರಗಳೊಂದಿಗೆ ಪೈಪೋಟಿಯಲ್ಲಿದೆ. ಹೀಗಾಗಿ ಕೇಂದ್ರದಲ್ಲಿ ಸಂಶೋಧನಾ ವಿದ್ಯಾರ್ಥಿಗಳಿಗೆ 2 ತಿಂಗಳ ಇಂಟರ್ನ್ ಶಿಪ್ ಕೂಡ ನೀಡಲಾಗುತ್ತದೆ. ಈ ಮೂಲಕ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುವುದು. ಸೈಬರ್ ಸೆಕ್ಯೂರಿಟಿಯನ್ನು ಮತ್ತಷ್ಟು ಬಲಿಷ್ಠವಾಗಿಸುವ ಸಲುವಾಗಿ ಈ ತರಬೇತಿ ಕೇಂದ್ರ ತೆರೆಯಲಾಗಿದೆ ಎಂದರು.
Advertisement
ಕೇವಲ ಸಂಶೋಧನಾ ಕೇಂದ್ರ ಸ್ಥಾಪನೆ ಮಾಡುವುದೇ ಅಲ್ಲದೇ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗೆ ಅಮೆರಿಕ ಸೇರಿದಂತೆ ವಿವಿಧ ದೇಶಗಳ ಉನ್ನತ ಸಂಸ್ಥೆಗಳಲ್ಲಿ ತರಬೇತಿ ಪಡೆಯಲು ಸುಧಾಮೂರ್ತಿ ಅವರು ಅವಕಾಶ ನೀಡಿದ್ದಾರೆ. ಅವರ ಈ ಕಾರ್ಯಕ್ಕೆ ಸಂಪೂರ್ಣ ಸಹಕಾರ ನೀಡಿ ಮತ್ತಷ್ಟು ಉತ್ತಮ ಕಾರ್ಯಗಳನ್ನು ನಡೆಸಲು ಮುಂದಾಗುತ್ತೇವೆ ಎಂದರು.
Advertisement
ಕೊಟ್ಟ ಮಾತು ಉಳಿಸಿಕೊಂಡಿದ್ದೇನೆ: ಈ ವೇಳೆ ಮಾತನಾಡಿದ ಸುಧಾಮೂರ್ತಿ ಅವರು, ಸರ್ಕಾರಕ್ಕೆ ಕೊಟ್ಟ ಮಾತಿನಂತೆ 60 ದಿನಗಳಲ್ಲಿ ಇದನ್ನು ಪೂರ್ಣಗೊಳಿಸಿದ್ದೇವೆ. ಕಟ್ಟಡ ನವೀಕರಣ ಸೇರಿದಂತೆ ಬೇಕಾದ ಸಲಕರಣೆ ಹಾಗೂ ಉನ್ನತ ಮಟ್ಟ ತಂತ್ರಜ್ಞಾನವನ್ನು ನೀಡಿದ್ದೇವೆ. 5 ವರ್ಷ ಕೇಂದ್ರವನ್ನು ನಮ್ಮ ಸಂಸ್ಥೆಯೇ ನಿರ್ವಹಣೆ ಮಾಡಲಿದೆ. ಇದಕ್ಕಾಗಿ 22 ಕೋಟಿ ರೂ. ನೀಡಿದ್ದೇವೆ. ಅತ್ಯಂತ ಸುಸಜ್ಜಿತವಾಗಿ ಕಟ್ಟಡ ನಿರ್ಮಾಣ ಮಾಡಿದ್ದೇವೆ. ಅಂತರ್ಜಾಲದಲ್ಲಿ ಡೇಟಾ ಕಳ್ಳತನ ಮಾಡುವುದು ಇತರೇ ಕಳ್ಳತನಕ್ಕಿಂತ ದೊಡ್ಡದು. 2 ವಾರಗಳ ಕಾಲದ ತರಬೇತಿಗೆ ಸಿಬ್ಬಂದಿಯನ್ನ ಅಮೆರಿಕಗೆ ಕಳುಹಿಸಲಾಗುತ್ತದೆ ಎಂದರು.
ನಮ್ಮ ತಂಡ 24 ಗಂಟೆ ಕಾರ್ಯ ಮಾಡಿ ಕೇವಲ 60 ದಿನಗಳಲ್ಲಿ ಈ ಕೆಲಸ ಮಾಡಿದ್ದೇವೆ. ಕೊಟ್ಟ ಮಾತು ಉಳಿಸಿಕೊಂಡಿದ್ದೇನೆ. ರಾಜ್ಯ ಜನರಿಗೆ ಹೆಚ್ಚಿನ ಅನುಕೂಲ ಆಗಲಿ ಎಂಬುವುದು ಇದರ ಉದ್ದೇಶ. ಆದರಂತೆ ಸೈಬರ್ ಕ್ರೈಂ ತಡೆಗಟ್ಟುವ ಕಾರ್ಯ ಮಾಡಲಾಗುವುದು ಎಂದು ತಿಳಿಸಿದ್ರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv