-ನಿರ್ಮಾಪಕ ರಮೇಶ್ ರೆಡ್ಡಿ ಸಮ್ಮುಖದಲ್ಲೊಂದು ಸಾರ್ಥಕ ಕಾರ್ಯ
ಬೆಂಗಳೂರು: ಕೊರೊನಾ ವೈರಸ್ ಅಟಾಟೋಪದಿಂದಾಗಿ ಹೆಚ್ಚೂ ಕಡಿಮೆ ಇಡೀ ವಿಶ್ವವೇ ಸ್ತಬ್ಧವಾಗಿದೆ. ಅದರಲ್ಲಿ ನಮ್ಮ ದೇಶ, ರಾಜ್ಯವೂ ಹೊರತಾಗಿಲ್ಲ. ಮೇಲ್ನೋಟಕ್ಕೆ ಲಾಕ್‍ಡೌನ್ ಈ ಕ್ಷಣದ ಅನಿವಾರ್ಯತೆಯಾಗಿ ಕಂಡರೂ ಕೂಡಾ ದಿನದ ತುತ್ತನ್ನು ಆ ದಿನವೇ ಸಂಪಾದಿಸಿಕೊಂಡು ಜೀವನ ಸಾಗಿಸುತ್ತಿದ್ದ ಕೋಟಿ ಕೋಟಿ ಜೀವಗಳು ತೀವ್ರತರನಾದ ಸಂಕಷ್ಟಕ್ಕೀಡಾಗಿವೆ. ಆ ಸಾಲಿನಲ್ಲಿ ಕನ್ನಡ ಚಿತ್ರರಂಗದ ಭಾಗವಾಗಿರುವ ಕಾರ್ಮಿಕರೂ ಕೂಡ ಸೇರಿಕೊಂಡಿದ್ದಾರೆ. ಅಂಥವರಿಗೆಲ್ಲ ನೆರವಾಗುವಂಥ ಸಾರ್ಥಕ ಕಾರ್ಯವನ್ನು ಸುಧಾ ಮೂರ್ತಿ ಸಾರಥ್ಯದ ಇನ್ಫೋಸಿಸ್ ಫೌಂಡೇಷನ್ ಕೈಗೊಂಡಿದೆ. ಅದು ಕನ್ನಡ ಚಿತ್ರರಂಗದಲ್ಲಿ ಯಶಸ್ವೀ ನಿರ್ಮಾಪಕರಾಗಿ ಗುರುತಿಸಿಕೊಂಡಿರುವ ರಮೇಶ್ ರೆಡ್ಡಿಯವರ ಇರುವಿಕೆಯಲ್ಲಿ ನಡೆಯುತ್ತಿದೆ.
Advertisement
ಯಾವುದೇ ಸಂಕಷ್ಟದ ಕಾಲದಲ್ಲಿ ನೊಂದವರ ನೆರವಿಗೆ ನಿಲ್ಲುವಂಥಾ ತಾಯ್ತನವನ್ನು ಸುಧಾಮೂರ್ತಿ ಸದಾ ಕಾಲವೂ ಕಾಯ್ದುಕೊಳ್ಳುತ್ತಾರೆ. ಅವರ ನೆರಳಿನಲ್ಲಿಯೇ ಬೆಳೆದು ಬಂದಿರುವ ರಮೇಶ್ ರೆಡ್ಡಿಯವರು ಕೂಡಾ ಅಂಥಾದ್ದೇ ಮನಸ್ಥಿತಿಯನ್ನು ರೂಢಿಸಿಕೊಂಡಿದ್ದಾರೆ. ಅಷ್ಟಕ್ಕೂ ಅವರೂ ಕೂಡಾ ಕಾರ್ಮಿಕರ ಬದುಕಿನ ಅನಿವಾರ್ಯತೆಗಳನ್ನು, ಸಂಕಟಗಳನ್ನು ತಾವೇ ಕಂಡು ಬೆಳೆದು ಬಂದವರು. ಆದ್ದರಿಂದಲೇ ಬಹು ಬೇಗನೆ ಚಿತ್ರರಂಗದ ಕಾರ್ಮಿಕರ ಸಂಕಷ್ಟಗಳಿಗೆ ಕಣ್ಣಾಗಿದ್ದಾರೆ. ಇದರ ಭಾಗವಾಗಿಯೇ ಸುಧಾಮೂರ್ತಿಯವರ ನೆರವು ಕನ್ನಡ ಚಿತ್ರರಂಗದ ಕಾರ್ಮಿಕ ಸಂಘಟನೆಗಳ ಸಮ್ಮುಖದಲ್ಲಿ ಹಲವಾರು ಕಾರ್ಮಿಕರಿಗೆ ಜೀವನಾವಶ್ಯಕ ಸಾಮಾಗ್ರಿಗಳನ್ನು ತಲುಪಿಸಲಾಗಿದೆ.
Advertisement
Advertisement
ನಿರ್ಮಾಪಕ ರಮೇಶ್ ರೆಡ್ಡಿ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಕಲ್ಯಾಣ ನಿಧಿ ಅಧ್ಯಕ್ಷರಾದ ಸಾ.ರಾ ಗೋವಿಂದು, ಕಾರ್ಮಿಕ ಸಂಘಟನೆಯ ಉಪಾಧ್ಯಕ್ಷರಾದ ರವಿಶಂಕರ್ ಮುಂತಾದ ಹಲವರ ಉಪಸ್ಥಿತಿಯಲ್ಲಿ ಇನ್ಫೋಸಿಸ್ ಫೌಂಡೇಷನ್ನಿನ ನೆರವನ್ನು ಕಾರ್ಮಿಕರಿಗೆ ತಲುಪಿಸುವ ಕಾರ್ಯಕ್ಕೆ ಚಾಲನೆ ಸಿಕ್ಕಿದೆ. ಹೀಗೆ ಚಾಲನೆ ಪಡೆದುಕೊಂಡಿರುವ ಈ ನೆರವಿನ ಕಾರ್ಯಕ್ರಮವನ್ನು ಮುಂದಿನ ದಿನಗಳಲ್ಲಿ ಕಾರ್ಮಿಕ ಸಂಘಟನೆಗಳ ಪದಾಧಿಕಾರಿಗಳ ಮೂಲಕ ಮುಂದುವರೆಯಲಿದೆ. ಇದೇ ಸಂದರ್ಭದಲ್ಲಿ ಕಾರ್ಮಿಕರಿಗೆ ನೆರವಾಗಿರುವ ಸುಧಾಮೂರ್ತಿಯವರ ಕಾರ್ಯವನ್ನು ಮೆಚ್ಚಿಕೊಂಡು ಮಾತಾಡಿರುವ ರಮೇಶ್ ರೆಡ್ಡಿಯವರು `ಸುಧಾಮೂರ್ತಿಯವರ ಕಡೆಯಿಂದ ದೇಶ ಮತ್ತು ರಾಜ್ಯದಲ್ಲಿ ಅನೇಕ ಒಳ್ಳೆ ಕೆಲಸಗಳಾಗುತ್ತಿವೆ. ಈ ಕಷ್ಟ ಕಾಲದಲ್ಲಿ ಅವರು ಚಲನಚಿತ್ರ ಕಾರ್ಮಿಕರ ಬಗ್ಗೆ ಕಾಳಜಿ ತೋರಿಸಿರುವುದು ಸ್ವಾಗತಾರ್ಹ’ ಎಂದಿದ್ದಾರೆ.
Advertisement
ಸುಧಾ ಮೂರ್ತಿಯವರ ಈ ಮಾನವೀಯ ನೆರವನ್ನು ಸಾ.ರಾ.ಗೋವಿಂದು ಕೂಡಾ ಮನದುಂಬಿ ಮೆಚ್ಚಿಕೊಂಡಿದ್ದಾರೆ. `ಈ ಕೊರೋನಾ ಕರ್ಫ್ಯೂನಿಂದಾಗಿ ಸಾವಿರಾರು ಚಲನಚಿತ್ರ ಕಾರ್ಮಿಕ ಕುಟುಂಬಗಳು ಸಂಕಷ್ಟಕ್ಕೀಡಾಗಿವೆ. ದಿನನಿತ್ಯದ ಜೀವನಕ್ಕೂ ಪರದಾಡುವ ಸ್ಥಿತಿ ತಲುಪಿಕೊಂಡಿರುವ ಅಂಥವರಿಗೆಲ್ಲ ಸುಧಾಮೂರ್ತಿಯವರ ನೆರವು ನೀಡುತ್ತಿರೋದು ಸಂತಸದ ವಿಷಯ’ ಎಂದಿದ್ದಾರೆ.
ಒಟ್ಟಾರೆಯಾಗಿ ಇದೊಂದು ಸಾರ್ಥಕ ಕಾರ್ಯಕ್ರಮ. ಅದು ಇದೀಗ ಗಾಳಿಪಟ-2 ಚಿತ್ರದ ನಿರ್ಮಾಪಕರೂ ಆಗಿರುವ ರಮೇಶ್ ರೆಡ್ಡಿಯವರ ಸಮ್ಮುಖದಲ್ಲಿಯೇ ನಡೆದಿರೋದು ನಿಜಕ್ಕೂ ಖುಷಿಯ ಸಂಗತಿ. ಯಾಕೆಂದರೆ, ರಮೇಶ್ ರೆಡ್ಡಿಯವರೂ ಕೂಡಾ ನಾನಾ ಪಡಿಪಾಟಲುಗಳನ್ನು ಅನುಭವಿಸುತ್ತಾ, ಗಾರೆ ಕಾರ್ಮಿಕರಾಗಿಯೂ ದುಡಿದು ಅನುಭವ ಹೊಂದಿರುವವರು. ಆ ಕಷ್ಟದ ದಿನಗಳ ನೆನಪಿನ ಪಸೆಯನ್ನು ಇನ್ನೂ ಮನಸಲ್ಲಿಟ್ಟುಕೊಂಡಿರುವ ಅವರೀಗ ಇಂಥಾದ್ದೊಂದು ಮಾನವೀಯ ಕಾರ್ಯಕ್ರಮದ ಭಾಗವಾಗಿರೋದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.