Connect with us

Cinema

25 ಲಕ್ಷ ಗೆದ್ದ ಸುಧಾಮೂರ್ತಿ – 50 ಲಕ್ಷದ ಪ್ರಶ್ನೆಗೆ ಉತ್ತರಿಸದ್ದಕ್ಕೆ ಬಿಗ್-ಬಿ ಬೇಸರ

Published

on

– ತಮಗಿಂತ ಚಿಕ್ಕೋರಾದ್ರೂ ಕಾಲಿಗೆ ಅಮಿತಾಬ್ ನಮಸ್ಕಾರ

ಹೈದರಾಬಾದ್: ನಟ ಅಮಿತಾಬ್ ಬಚ್ಚನ್ ನಿರೂಪಣೆಯ ‘ಕೌನ್ ಬನೇಗಾ ಕರೋಡ್‍ಪತಿ’ 11ನೇ ಸೀಸನ್ ಮುಕ್ತಾಯವಾಗಿದೆ. ಶೋನ ಕೊನೆಯ ಎಪಿಸೋಡ್‍ನಲ್ಲಿ ಇನ್ಫೋಸಿಸ್ ಫೌಂಡೇಷನ್ ಅಧ್ಯಕ್ಷೆ ಸುಧಾಮೂರ್ತಿ ಪಾಲ್ಗೊಂಡಿದ್ದರು. ಇವರು ಈ ಶೋನಲ್ಲಿ ಬರೋಬ್ಬರಿ 25 ಲಕ್ಷ ಹಣವನ್ನು ಗೆದ್ದಿದ್ದಾರೆ. ಆದರೆ 50 ಲಕ್ಷದ ಪ್ರಶ್ನೆಗೆ ಸುಧಾಮೂರ್ತಿ ಅವರು ಉತ್ತರಿಸದ್ದಕ್ಕೆ ಬಿಗ್ ಬಿ ಬೇಸರ ವ್ಯಕ್ತಪಡಿಸಿದ್ದಾರೆ.

‘ಕೌನ್ ಬನೇಗಾ ಕರೋಡ್‍ಪತಿ’ ಶೋನಲ್ಲಿ ಸುಧಾಮೂರ್ತಿ ಅವರು ತಮ್ಮ ಹಿನ್ನೆಲೆ, ಶಿಕ್ಷಣ ಮತ್ತು ಜೀವನದ ಹಾದಿಯ ಬಗ್ಗೆ ವಿವರಿಸಿದ್ದಾರೆ. “ನಾನು ಎಂಜಿನಿಯರಿಂಗ್ ಓದಬೇಕು ಎಂದಾಗ ನಮ್ಮ ತಂದೆ ಒಪ್ಪಿಕೊಂಡಿರಲಿಲ್ಲ. ಕೊನೆಗೆ ಅವರನ್ನು ಒಪ್ಪಿಸಿ ಹುಬ್ಬಳ್ಳಿಯಲ್ಲಿರುವ ಎಂಜಿನಿಯರಿಂಗ್ ಕಾಲೇಜಿಗೆ ಸೇರಿದೆ. ಆದರೆ 599 ವಿದ್ಯಾರ್ಥಿಗಳಿರುವ ಆ ಕಾಲೇಜಿನಲ್ಲಿ ನಾನೊಬ್ಬಳೇ ವಿದ್ಯಾರ್ಥಿನಿ. ಆಗ ಪ್ರಾಂಶುಪಾಲರು ನನಗೆ ಪ್ರತಿದಿನ ಸೀರೆಯುಟ್ಟು ಬರಬೇಕು, ಕಾಲೇಜಿನ ಕ್ಯಾಂಟೀನ್‍ಗೆ ಹೋಗಬಾರದು ಮತ್ತು ಯಾವುದೇ ಕಾರಣಕ್ಕೂ ಹುಡುಗರ ಬಳಿ ಮಾತನಾಡಬಾರದು ಎಂದು ಮೂರು ಷರತ್ತುಗಳನ್ನು ವಿಧಿಸಿದ್ದರು. ನಾನು ಕಾಲೇಜಿಗೆ ಟಾಪರ್ ಆಗಿದ್ದ ಕಾರಣ ಹುಡುಗರು ಬಂದು ಮಾತನಾಡಿಸುತ್ತಿದ್ದರು ಎಂದು ಕಾಲೇಜು ಜೀವನದ ಬಗ್ಗೆ ವಿವರಿಸಿದರು.

ನಾನು ಶಿಕ್ಷಣ ಪಡೆದ ಕಾಲೇಜಿನಲ್ಲಿ ಶೌಚಾಲಯ ವ್ಯವಸ್ಥೆ ಕೂಡ  ಇರಲಿಲ್ಲ. ಇದರಿಂದ ಮುಂದೆ ಇನ್ಫೋಸಿಸ್ ಪರವಾಗಿ ಸುಮಾರು 16 ಸಾವಿರ ಟಾಯ್ಲೆಟ್‍ಗಳನ್ನು ನಿರ್ಮಿಸಿದೆವು ಎಂದು ಹೇಳಿದ್ದಾರೆ. ನಂತರ ತಾವು ದೇವದಾಸಿ ಪದ್ಧತಿಯನ್ನು ನಿರ್ಮೂಲನೆ ಮಾಡಲು ಕೈಗೊಂಡ ಕಾರ್ಯಕ್ರಮಗಳ ಬಗ್ಗೆ ಮಾತನಾಡಿದ್ದಾರೆ. ಹೀಗೆ ತಮ್ಮ ಜೀವನದ ವಿವಿಧ ಘಟನೆಗಳು ಬಗ್ಗೆ ಮಾತನಾಡುತ್ತಾ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸುತ್ತಾ ಬಂದರು. 11ನೇ ಪ್ರಶ್ನೆಗೆ ಆಡಿಯನ್ಸ್ ಸಹಾಯ ಪಡೆದು, 50:50 ಆಯ್ಕೆ ಮಾಡಿಕೊಂಡು 6 ಲಕ್ಷದ 40 ಸಾವಿರ ಗೆದ್ದರು. ನಂತರ ಮುಂದಿನ ಪ್ರಶ್ನೆಗೆ ತಾವೇ ಉತ್ತರಿಸಿ 12 ಲಕ್ಷದ 50 ಸಾವಿರ ರೂ. ಗೆದ್ದುಕೊಂಡಿದ್ದಾರೆ.

ಅಂತಿಮವಾಗಿ 25 ಲಕ್ಷ ರೂ. ವನ್ನು ಸುಧಾಮೂರ್ತಿ ಗೆದ್ದಿದ್ದಾರೆ. 50 ಲಕ್ಷ ರೂ.ಗೆ “ಸತತ ಎರಡು ವರ್ಷಗಳ ಕಾಲ ಫಿಲಂ ಫೇರ್ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದ ತಾರೆ ಯಾರು?” ಎಂಬ ಪ್ರಶ್ನೆ ಬಂದಿತ್ತು. ಇದಕ್ಕೆ ಶರ್ಮಿಳಾ ಠಾಗೋರ್, ಕಂಗನಾ ರಣಾವತ್, ಕಾಜೋಲ್ ಹಾಗೂ ಜಯಾ ಬಚ್ಚನ್ ಎಂಬ ಆಯ್ಕೆಗಳನ್ನು ಕೊಟ್ಟಿದ್ದರು. ಆದರೆ 50 ಲಕ್ಷದ ಪ್ರಶ್ನೆಗೆ ಉತ್ತರ ಗೊತ್ತಿಲ್ಲದೇ ಆಟವನ್ನು ಕ್ವಿಟ್ ಮಾಡಿದ್ದಾರೆ.

ಕ್ವಿಟ್ ಮಾಡಿದ ಬಳಿಕ ಸುಧಾಮೂರ್ತಿ ಅವರು ಕಾಜೋಲ್ ಹೆಸರನ್ನು ತಿಳಿಸಿದರು. ಸರಿಯಾದ ಉತ್ತರ ಜಯಾ ಬಚ್ಚನ್ ಆಗಿತ್ತು. ಹೀಗಾಗಿ ಈ ಪ್ರಶ್ನೆಗೆ ಸುಧಾಮೂರ್ತಿ ಉತ್ತರಿಸದ ಕಾರಣ ಸ್ವಲ್ಪ ಬೇಸರಗೊಂಡ ಬಿಗ್ ಬಿ, ಮನೆಗೆ ಹೋದ ಬಳಿಕ ನನಗೆ ಸಿಕ್ಕಾಪಟ್ಟೆ ಏಟುಗಳು ಬೀಳುವ ಸಾಧ್ಯತೆಗಳಿವೆ ಎಂದು ತಮಾಷೆ ಮಾಡಿದ್ದಾರೆ.

Click to comment

Leave a Reply

Your email address will not be published. Required fields are marked *