ಹೈದರಾಬಾದ್: ತಾಯಿಯ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಲು ಹೋಗುತ್ತಿದ್ದಾಗ ಅಪಘಾತ ಸಂಭವಿಸಿ ಮಗ ಮೃತಪಟ್ಟಿರುವ ಮಲಕಲಕುವಂತಹ ಘಟನೆ ತೆಲಂಗಾಣದ ಕೊಡದ್ ನಗರದಲ್ಲಿ ನಡೆದಿದೆ.
ಇನ್ಫೋಸಿಸ್ ನಲ್ಲಿ ಉದ್ಯೋಗಿಯಾಗಿರುವ ಅರುಮಿಲ್ಲಿ ವೀರಾ ವೆಂಕಟ ಸತ್ಯನಾರಾಯಣ(32) ಮತ್ತು ಸತ್ಯನಾರಾಯಣ ಅವರ ನಾದಿನಿ ಗುಲ್ಲಾಪಳ್ಳಿ ವೆಂಕಟ ಮಾಧುರಿ ಮೃತ ದುರ್ದೈವಿಗಳು. ಈ ಘಟನೆ ಕೊಡದ್ ರಾಷ್ಟ್ರೀಯ ಹೆದ್ದಾರಿ 65ರಲ್ಲಿ ಸಂಭವಿಸಿದೆ.
Advertisement
ಮೃತ ಸತ್ಯನಾರಾಯಣ ಕುಟುಂಬವು ಪಶ್ಚಿಮ ಗೋದಾವರಿ ಜಿಲ್ಲೆಯ ಪೆನುಗಾಂಟದಲ್ಲಿ ಸಿದ್ದಂತನ್ ನಲ್ಲಿ ವಾಸವಾಗಿತ್ತು. ಇವರ ತಾಯಿ ಭಾನುವಾರ ಸುಮಾರು 12.15 ಗಂಟೆಗೆ ಹೃದಯಾಘಾತದಿಂದ ಮೃತಪಟ್ಟಿದ್ದರು. ತಾಯಿಯ ಸಾವಿನ ಸುದ್ದಿ ತಿಳಿಯುತ್ತಿದ್ದಂತೆಯೇ ಸತ್ಯನಾರಾಯಣ ಕ್ಯಾಬ್ ಬುಕ್ ಮಾಡಿ ಪತ್ನಿ ಮತ್ತು ನಾದಿನಿ ಜೊತೆ ಹೈದರಾಬಾದ್ ನಿಂದ ಗೋದಾವರಿ ಜಿಲ್ಲೆಗೆ ಹೊರಟಿದ್ದರು.
Advertisement
ಈ ವೇಳೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರಿಗೆ ಲಾರಿ ಬಂದು ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಸತ್ಯನಾರಾಯಣನ ಮತ್ತು ನಾದಿನಿ ಮಾಧುರಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಇನ್ನು ಪತ್ನಿ ಗರ್ಭಿಣಿಯಾಗಿದ್ದು, ಸಣ್ಣ ಪುಟ್ಟ ಗಾಯಗಳಾಗಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇನ್ನು ಕ್ಯಾಬ್ ಚಾಲಕನಿಗೂ ಗಾಯಗಳಾಗಿದ್ದು, ಇಬ್ಬರನ್ನೂ ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.
Advertisement
ಕ್ಯಾಬ್ ಚಾಲಕ ಸೀಟ್ ಬೆಲ್ಟ್ ಧರಿಸಿದ್ದು, ಉಳಿದವರು ಸೀಟ್ ಬೆಲ್ಟ್ ಹಾಕಿರಲಿಲ್ಲ. ಆದ್ದರಿಂದ ಅಪಘಾತದಲ್ಲಿ ತಲೆಗೆ ಗಂಭೀರವಾಗಿ ಗಾಯವಾಗಿದ್ದು, ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ಸಬ್ ಇನ್ಸ್ ಪೆಕ್ಟರ್ ವಿಜಯ್ ಪ್ರಕಾಶ್ ಹೇಳಿದ್ದಾರೆ.
Advertisement
ಅಪಘಾತಕ್ಕೆ ಲಾರಿ ಚಾಲಕನ ನಿರ್ಲಕ್ಷ್ಯವೇ ಕಾರಣ ಎಂದು ಮೃತನ ಸಂಬಂಧಿಕರು ಆರೋಪಿಸಿದ್ದಾರೆ. ಈ ಘಟನೆ ಕುರಿತು ಮೃತ ಸತ್ಯನಾರಾಯಣ ಚಿಕ್ಕಪ್ಪ ದೂರು ನೀಡಿದ್ದು, ಅವರ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಇತ್ತ ಪತಿ ಕಳೆದುಕೊಂಡ ಪತ್ನಿ ಮತ್ತು ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ.