ಮಡಿಕೇರಿ: ಕೊಚ್ಚಿ ಹೋದ ಕೊಡಗನ್ನ ಮತ್ತೆ ಕಟ್ಟೋ ಪ್ರಯತ್ನ ಎಲ್ಲರಿಂದಲೂ ನಿರಂತರವಾಗಿ ಆಗ್ತಾನೇ ಇದೆ. ಸರ್ಕಾರ ಒಂದ್ಕಡೆ ಪ್ರಯತ್ನ ಮಾಡ್ತಿದ್ರೆ, ಇನ್ನೊಂದೆಡೆ ಸಂಘ ಸಂಸ್ಥೆಗಳು, ಖಾಸಗಿಯವರು ಕೂಡ ಕೈ ಜೋಡಿಸುತ್ತಲೇ ಇದ್ದಾರೆ. ಸದ್ಯ ಸಂತ್ರಸ್ತರಿಗೆ ಮನೆಗಳನ್ನ ಕಟ್ಟೋ ಕೆಲಸ ಭರದಿಂದ ಸಾಗ್ತಿದ್ದು, ಸರ್ಕಾರದ ಕೆಲಸಕ್ಕೆ ಇದೀಗ ಇನ್ಫೋಸಿಸ್ ಪ್ರಾತಿಷ್ಠಾನ ಕೂಡ ಕೈಜೋಡಿಸಿದೆ. ಸಂಕಷ್ಟದಲ್ಲಿರೋ ಸಂತ್ರಸ್ತರ ಜೊತೆ ನಾವೂ ಕೂಡ ಇದ್ದೀವಿ ಅಂತಾ ಹೆಜ್ಜೆ ಹಾಕಿದೆ.
ಶುಕ್ರವಾರ ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನದವರೆಗೂ ಪ್ರಾಕೃತಿಕ ವಿಕೋಪಕ್ಕೆ ಒಳಗಾದ ಕೊಡಗಿನ ಪ್ರದೇಶಗಳಲ್ಲಿ ಇನ್ಫೋಸಿಸ್ ಪ್ರಾತಿಷ್ಠಾನದ ಸುಧಾಮೂರ್ತಿ ಮಿಂಚಿನ ಓಡಾಟ ನಡೆಸಿದ್ರು. ಕೊಟ್ಟ ಮಾತಿನಂತೆ ಕೊಡಗಿನ ಸಂತ್ರಸ್ತರ ನೆರವಿಗೆ ಎಲ್ಲರ ಪ್ರೀತಿಯ ಸರಳ ಸಜ್ಜನಿಕೆಯ ಸುಧಾಮೂರ್ತಿ ಧಾವಿಸಿದ್ದಾರೆ.
Advertisement
Advertisement
ಕಳೆದ ಬಾರಿ ಮೈಸೂರಿನ ದಸರಾದಲ್ಲಿ ಕೊಡಗಿನ ಸಂತ್ರಸ್ತರ ನೆರವಿಗೆ ಇನ್ಫೋಸಿಸ್ ಪ್ರಾತಿಷ್ಠಾನದಿಂದ 25 ಕೋಟಿ ನೆರವು ನೀಡೋದಾಗಿ ಘೋಷಿಸಿದ್ರು. ಸದ್ಯ 200 ಮನೆಗಳನ್ನ ಕಟ್ಟಿಕೊಡಲು ಇನ್ಫೋಸಿಸ್ ಪ್ರಾತಿಷ್ಠಾನ ತೀರ್ಮಾನಿಸಿದ್ದು, ಎರಡು ಹಂತದಲ್ಲಿ ತಲಾ ನೂರು ಮನೆಗಳನ್ನ ನಿರ್ಮಾಣ ಮಾಡಲು ಮುಂದಾಗಿದೆ. ಅಲ್ಲದೇ ಶಿಥಿಲಗೊಂಡಿರೋ ಮನೆಗಳನ್ನ ದುರಸ್ಥಿ ಮಾಡುತ್ತೇವೆ ಅಂತಲೂ ಸುಧಾಮೂರ್ತಿಯವರು ತಿಳಿಸಿದ್ದಾರೆ.
Advertisement
ಶುಕ್ರವಾರ ಕೊಡಗಿಗೆ ಬೆಳ್ಳಂಬೆಳಗ್ಗೆಯೇ ಪ್ರಯಾಣ ಬೆಳೆಸಿದ ಸುಧಾಮೂರ್ತಿಯವರು ಜಲಪ್ರಳಯದಕ್ಕೆ ಒಳಗಾದ ಹೆಬ್ಬೆಟಗೆರೆ, ದೇಚೂರು, ಮಾದಾಪುರ, ಹೆಮ್ಮೆತಾಳು ಸೇರಿದಂತೆ ಅನೇಕ ಪ್ರದೇಶಗಳಿಗೆ ಖುದ್ದು ಭೇಟಿ ನೀಡಿದ್ರು. ಹಾನಿಗೊಳಗಾದ ಪ್ರದೇಶಗಳನ್ನ ನೋಡಿ, ಸಂತ್ರಸ್ತರ ಸಂಕಷ್ಟಕ್ಕೆ ಸ್ಪಂದಿಸಿದ್ರು. ಅಲ್ಲದೇ ನಿಮ್ಮ ಜೊತೆ ನಾವು ಕೂಡ ಇರುತ್ತೇವೆ, ಹೆದರಬೇಡಿ ಅಂತಾ ಸಾಂತ್ವನದ ಮಾತುಗಳನ್ನ ಆಡಿದ್ರು. ಆ ಬಳಿಕ ಡಿಸಿ ಕಚೇರಿಗೆ ಆಗಮಿಸಿದ ಸುಧಾಮೂರ್ತಿ, ಜಿಲ್ಲಾ ಉಸ್ತುವಾರಿ ಸಚಿವರು ಸೇರಿದಂತೆ ಜಿಲ್ಲಾಡಳಿತದ ಅಧಿಕಾರಿಗಳ ಜೊತೆ ಮಾಹಿತಿಯನ್ನ ಪಡೆದ್ರು. ಸುಧಾಮೂರ್ತಿಯವರ ಮಾನವೀಯ ನಡೆಯನ್ನ ಜಿಲ್ಲಾ ಉಸ್ತುವಾರಿ ಸಚಿವ ಸಾ ರಾ ಮಹೇಶ್ ಮುಕ್ತಕಂಠದಿಂದ ಶ್ಲಾಘಿಸಿ, ಸರ್ಕಾರದಿಂದ ಅವರಿಗೆ ಎಲ್ಲಾ ನೆರವನ್ನ ನೀಡೋದಾಗಿ ಹೇಳಿದ್ರು.
Advertisement
ಮನೆಗಳನ್ನ ಕಟ್ಟಿಕೊಡುವುದು, ರಿಪೇರಿ ಮಾಡಿಸಿಕೊಡುವುದಲ್ಲದೇ ಸಂತ್ರಸ್ತರಿಗೆ ಕೊಟ್ಟಿಗೆಗಳನ್ನ ನಿರ್ಮಾಣ ಮಾಡಿಕೊಡುವುದು, ಪಾಲಿ ಹೌಸ್ ಗಳನ್ನೂ ನಿರ್ಮಾಣ ಮಾಡಿಕೊಡಲು ಇನ್ಫೋಸಿಸ್ ಪ್ರಾತಿಷ್ಠಾನ ಮಾಡ್ತಿದೆ. ಈ ಹಿನ್ನೆಲೆಯಲ್ಲಿ ಸಂತ್ರಸ್ತರ ಮಾಹಿತಿಯನ್ನ ಪಡೆದಿರೋ ಇನ್ಫೋಸಿಸ್ ಪ್ರಾತಿಷ್ಠಾನ ಸಂತ್ರಸ್ತರ ಪ್ರತಿ ಹೆಜ್ಜೆಯಲ್ಲೂ ಕೈ ಜೋಡಿಸಲು ಮುಂದಾಗಿದೆ. ಅದೇನೆ ಆಗಲಿ, ಕೊಟ್ಟ ಮಾತಿನಂತೆಯೇ ಸಂತ್ರಸ್ತರಿಗೆ ಮನೆಗಳನ್ನ ನಿರ್ಮಾಣ ಮಾಡಲು ಇನ್ಫೋಸಿಸ್ ಪ್ರಾತಿಷ್ಠಾನ ಮುಂದಾಗಿದ್ದು, ಮಾತು ಕೊಟ್ಟು ಮರೆತು ಹೋಗೋ ಜನಪ್ರತಿನಿಧಿಗಳಿಗೆ ಮಾದರಿಯಾಗಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv