ಬಳ್ಳಾರಿ: ಬಾಣಂತಿಯರ ಸರಣಿ ಸಾವಿನ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಆಘಾತಕಾರಿ ಘಟನೆ ಬೆಳಕಿಗೆ ಬಂದಿದ್ದು, ಬಿಮ್ಸ್ ಆಸ್ಪತ್ರೆಯಲ್ಲಿ (BIMS) ಹೆರಿಗೆ ಬಳಿಕ ಮಗು ಮೃತಪಟ್ಟಿದೆ.
ಸಿರಗುಪ್ಪ ತಾಲೂಕಿನ ಸಿರಗೇರಿ ಗ್ರಾಮದ ಬಾಣಂತಿ (Pregnant Women) ಗಂಗೋತ್ರಿ ನಾರ್ಮಲ್ ಹೆರಿಗೆ ಮಾಡಿಸಲು ದಾಖಲಾಗಿದ್ದರು. ಆದರೆ ವೈದ್ಯರು ಸಿಸೇರಿಯನ್ ಮಾಡಿದ್ದಾರೆ. ಹೆರಿಗೆ ಬಳಿಕ ಆರಂಭದಲ್ಲಿ ಗಂಡು ಮಗು ಆರೋಗ್ಯವಾಗಿದೆ ಎಂದಿದ್ದರು. ಇದನ್ನೂ ಓದಿ: ಬಳ್ಳಾರಿಯಲ್ಲಿ ಬಾಣಂತಿಯರ ಸರಣಿ ಸಾವು – ಜಿಲ್ಲಾ ಉಸ್ತುವಾರಿ ಸಚಿವರು ನಾಪತ್ತೆ: ಜನಾಕ್ರೋಶ
ಗಂಡು ಮಗುವಿನ ಜನನವಾಯಿತು ಎಂದು ಗಂಗೋತ್ರಿ ಕುಟುಂಬಸ್ಥರು ಸಂತಸ ಪಟ್ಟಿದ್ದರು. ಆದರೆ ಮಧ್ಯಾಹ್ನ 12 ಗಂಟೆಯ ಬಳಿಕ ಮಗು (Baby) ಏಕಾಏಕಿ ಸಾವನ್ನಪ್ಪಿದೆ ಎಂದು ವೈದ್ಯರು ಹೇಳಿದ್ದಾರೆ.
ಈಗ ವೈದ್ಯರ ನಿರ್ಲಕ್ಷ್ಯಕ್ಕೆ ಮಗು ಸಾವಾಗಿದೆ ಅಂತಾ ಪೋಷಕರು ಆರೋಪಿಸಿದ್ದಾರೆ. ವೈದ್ಯರು ಅವೈಜ್ಞಾನಿಕವಾಗಿ ಹೆರಿಗೆ ಮಾಡಿದ್ದಕ್ಕೆ ಮಗು ಸಾವಾಗಿದೆ ಅಂತಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗರ್ಭದಲ್ಲಿ ಮಲ ತಿಂದು ಮಗುವಿಗೆ ಶ್ವಾಸಕೋಶದ ತೊಂದರೆಯಾಗಿತ್ತು. ಇದೇ ಕಾರಣಕ್ಕೆ ಮಗು ಸಾವನ್ನಪ್ಪಿದೆ ಅಂತಾ ವೈದ್ಯರು ಸಮಜಾಯಿಷಿ ನೀಡಿದ್ದಾರೆ. ಬಳ್ಳಾರಿ ಜಿಲ್ಲಾಸ್ಪತ್ರೆ ಹಾಗೂ ಬಿಮ್ಸ್ ಆಸ್ಪತ್ರೆಯಲ್ಲಿ ಈ ರೀತಿಯ ದುರ್ಘಟನೆಗಳು ಪದೇ ಪದೇ ನಡೆಯುತ್ತಿರುವ ಕಾರಣ ಜಿಲ್ಲೆಯ ಜನ ಆತಂಕಕ್ಕೆ ಒಳಗಾಗಿದ್ದಾರೆ.