ಉಡುಪಿ: ಜಿಲ್ಲೆಯ ಮಲ್ಪೆ (Malpe) ಶೌಚಾಲಯದಲ್ಲಿ ನವಜಾತ ಶಿಶುವಿನ ಶವ ಪತ್ತೆಯಾಗಿದೆ. ಶಿಶುವಿನ ತಾಯಿಯನ್ನು ಪೊಲೀಸರು ಪತ್ತೆಹಚ್ಚಿದ್ದು, ಕಾನೂನು ಕ್ರಮಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಟಾಯ್ಲೆಟ್‌ನಲ್ಲಿ ನವಜಾತ ಶಿಶುವಿನ ಶವ ಪತ್ತೆಯಾಗಿದ್ದರಿಂದ ಅಪರಿಚಿತ ವ್ಯಕ್ತಿ ಮೇಲೆ ಮಲ್ಪೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಈ ಬಗ್ಗೆ ಸಿಸಿಟಿವಿ ಮತ್ತು ತಾಂತ್ರಿಕ ಸಾಕ್ಷಿಗಳನ್ನು ಪರಿಶೀಲಿಸಿದಾಗ ಮಗುವಿನ ತಾಯಿ ಯಾರೆಂದು ಪತ್ತೆ ಮಾಡಿದ್ದಾರೆ. ಇದನ್ನೂ ಓದಿ: 5 ವರ್ಷದ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ ಕೊಲೆ ಕೇಸ್ – ಗುಂಡೇಟಿಗೆ ಬಲಿಯಾದ ಆರೋಪಿ ಫೋಟೊ ರಿಲೀಸ್
ಪ್ರಕರಣ ಕುರಿತು ಉಡುಪಿ ಎಸ್‌ಪಿ ಡಾ.ಅರುಣ್ ಕುಮಾರ್ ಮಾತನಾಡಿ, ಮಲ್ಪೆ ಠಾಣಾ ವ್ಯಾಪ್ತಿಯಲ್ಲಿ ನವಜಾತ ಶಿಶು ಶವ ಪತ್ತೆ ಪ್ರಕರಣ ದಾಖಲಾಗಿದೆ. ಜಾಮಿಯಾ ಮಸೀದಿ ಆವರಣದ ಶೌಚಾಲಯದಲ್ಲಿ ಪತ್ತೆಯಾಗಿದೆ. ಕಾರ್ಮಿಕರಿಗೋಸ್ಕರ ನಿರ್ಮಿಸಿದ್ದ ಶೌಚಾಲಯದಲ್ಲಿ ಶವ ಪತ್ತೆಯಾಗಿತ್ತು. ಮಸೀದಿಯವರು ಪ್ರಕರಣ ಗಮನಕ್ಕೆ ಬಂದಾಗ ದೂರು ನೀಡಿದ್ದಾರೆ. ಈ ಮಗುವಿನ ಶವ ಎಲ್ಲಿಂದ ಬಂತು ಎಂದು ತನಿಖೆ ನಡೆಸಲಾಗಿದೆ ಎಂದು ತಿಳಿಸಿದರು.
ಸ್ಥಳೀಯ ಯುವತಿಯೊಬ್ಬಳ ಮಗು ಇದು ಎಂಬುದು ಗೊತ್ತಾಗಿದೆ. ಆಕೆಯಿಂದ ಸ್ವ-ಇಚ್ಛಾ ಹೇಳಿಕೆ ಪಡೆಯಲಾಗಿದೆ. ಆಕೆ ತನ್ನದೇ ಮಗು ಎಂದು ಒಪ್ಪಿಕೊಂಡಿದ್ದಾಳೆ. ಏಳೂವರೆಯಿಂದ ಎಂಟು ತಿಂಗಳು ನಡುವಯಸ್ಸಿನ ಭ್ರೂಣ ಇದಾಗಿದೆ. ಯಾವುದೇ ಪ್ರೊಸೀಜರ್ ಇಲ್ಲದೆ ಗರ್ಭಪಾತ ಮಾಡಿಸಿಕೊಳ್ಳಲು ಪ್ರಯತ್ನಿಸಿದ್ದಾಳೆ. ಏಕಾಏಕಿ ಹೊಟ್ಟೆನೋವು ಬಂದಿರುವುದರಿಂದ ಶೌಚಾಲಯಕ್ಕೆ ತೆರಳಿದ್ದಾಳೆ. ಶೌಚಾಲಯದಲ್ಲಿ ಮಗುವನ್ನು ಬಿಟ್ಟು ಹೋಗಿದ್ದಾಳೆ. ಸದ್ಯ ಆಕೆ ಆಸ್ಪತ್ರೆಗೆ ದಾಖಲಾಗಿದ್ದಾಳೆ. ಆಸ್ಪತ್ರೆಯಿಂದ ಬಿಡುಗಡೆಯಾದ ನಂತರ ಕಾನೂನು ಕ್ರಮಕೈಗೊಳ್ಳಲಾಗುವುದು. ಈ ಬಗ್ಗೆ ಕೆಲವೊಂದು ಅನುಮಾನಾಸ್ಪದ ಆಡಿಯೋಗಳು ವೈರಲ್ ಆಗಿವೆ. ಸುಳ್ಳು ಸುದ್ದಿ ಹಬ್ಬಿಸಿದವರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. ಇದನ್ನೂ ಓದಿ: ವಿಜಯನಗರ ಜಿಲ್ಲೆಯಾದ್ಯಂತ ಬಿರುಗಾಳಿ ಸಹಿತ ಮಳೆ – ವರುಣನ ಅಬ್ಬರಕ್ಕೆ ನೆಲಕಚ್ಚಿದ ಪಪ್ಪಾಯ