– ಆಸೀಸ್‍ಗೆ 3 ವಿಕೆಟ್ ಗೆಲುವು
– ಕೊನೆಯ ಓವರ್ ನಲ್ಲಿ 14 ರನ್ ಕೊಟ್ಟ ಉಮೇಶ್ ಯಾದವ್
ವಿಶಾಖಪಟ್ಟಣ: ಇಲ್ಲಿನ ವೈ ಎಸ್ ರಾಜಶೇಖರ ರೆಡ್ಡಿ ಕ್ರೀಡಾಂಗಣದಲ್ಲಿ ನಡೆದ ಆಸೀಸ್ ವಿರುದ್ಧ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ ವಿರೋಚಿತ ಸೋಲು ಕಂಡಿದ್ದು, ಆಸ್ಟ್ರೇಲಿಯಾ ಮೂರು ವಿಕೆಟ್‍ಗಳ ಜಯ ಸಾಧಿಸಿದೆ.
127 ರನ್ ಗಳ ಗುರಿಯನ್ನು ಬೆನ್ನಟ್ಟಿದ್ದ ಆಸ್ಟ್ರೇಲಿಯಾಗೆ ಕೊನೆಯ ಓವರ್ ನಲ್ಲಿ 14 ರನ್ ಬೇಕಿತ್ತು. ಉಮೇಶ್ ಯಾದವ್ ಎಸೆದ ಈ ಓವರ್ ನಲ್ಲಿ ಎರಡು ಬೌಂಡರಿ ಸಿಡಿಸಿದ ಪರಿಣಾಮ ಕೊನೆಯ ಎಸೆತದಲ್ಲಿ 2 ರನ್‍ಗಳ ಅಗತ್ಯವಿತ್ತು. ಪ್ಯಾಟ್ ಕಮ್ಮಿನ್ಸ್ ಕೊನೆಯ ಎಸೆತದಲ್ಲಿ 2 ರನ್ ಕದಿಯುವ ಮೂಲಕ ತಂಡಕ್ಕೆ ಗೆಲುವು ತಂದುಕೊಟ್ಟರು. ಈ ಮೂಲಕ 2 ಪಂದ್ಯಗಳ ಸರಣಿಯಲ್ಲಿ ಆಸ್ಟ್ರೇಲಿಯಾ 1-0 ಮುನ್ನಡೆಯನ್ನು ಪಡೆದಿದೆ.
Advertisement
Advertisement
ಟೀಂ ಇಂಡಿಯಾ ಸುಲಭ ಗುರಿಯನನ್ನು ಬೆನ್ನತ್ತಿದ ಆಸೀಸ್ ಪಡೆ ಉತ್ತಮ ಆರಂಭ ಪಡೆಯಲಿಲ್ಲ. ಆರಂಭಿಕ ಸ್ಟೋಯಿನ್ಸ್ 1 ರನ್ ಗೆ ರನೌಟ್ ಆದ್ರೆ, ನಾಯಕ ಫಿಂಚ್ ರನ್ನು ಶೂನ್ಯಕ್ಕೆ ಔಟ್ ಮಾಡುವ ಮೂಲಕ ಬುಮ್ರಾ ಶಾಕ್ ನೀಡಿದರು. ಪರಿಣಾಮ 5 ರನ್ ಗಳಿಗೆ ಆಸೀಸ್ ಪ್ರಮುಖ 2 ವಿಕೆಟ್ ಕಳೆದುಕೊಂಡಿತ್ತು.
Advertisement
ಈ ಹಂತದಲ್ಲಿ ಬಂದ ಸ್ಫೋಟಕ ಆಟಗಾರ ಮ್ಯಾಕ್ಸ್ ವೆಲ್ 43 ಎಸೆತಗಳಲ್ಲಿ 56 ರನ್ ಗಳಿಸಿ ಮಿಂಚಿದರು. ಅರ್ಧ ಶತಕ ಗಳಿಸಿ ಟೀಂ ಇಂಡಿಯಾಗೆ ಮುಳುವಾಗಿದ್ದ ಮ್ಯಾಕ್ಸ್ ವೆಲ್‍ರನ್ನು ಚಹಲ್ ಪೆವಿಲಿಯಗಟ್ಟಲು ಯಶಸ್ವಿಯಾದರೆ, ಆರಂಭಿಕ ಶಾರ್ಟ್ 37 ರನ್ ಗಳಿಸಿ ರನೌಟ್ ಆದರು. ಬಳಿಕ ಬಂದ ಟರ್ನರ್ ಕೂಡ ಬಂದಷ್ಟೇ ವೇಗದಲ್ಲಿ ನಿರ್ಗಮಿಸಿದರು. ಈ ಹಂತದಲ್ಲಿ ಭಾರತ ಪಂದ್ಯ ಗೆಲುವಿನ ಆಸೆ ಮೂಡಿತು. ಇದನ್ನು ಓದಿ: ಕಮ್ ಬ್ಯಾಕ್ ಪಂದ್ಯದಲ್ಲೇ ಅರ್ಧ ಶತಕ ಸಿಡಿಸಿದ ಕೆಎಲ್ ರಾಹುಲ್
Advertisement
ಮಿಂಚಿದ ಬುಮ್ರಾ: 98 ರನ್ ಗಳಿಗೆ 3 ವಿಕೆಟ್ ಗಳಿಸಿ ಸುಸ್ಥಿತಿಯಲ್ಲಿದ್ದ ಆಸೀಸ್‍ಗೆ ಶಾರ್ಟ್ ರನೌಟ್ ಆದ ಬಳಿಕ ರನ್ ವೇಗಕ್ಕೆ ಕಡಿವಾಣ ಬಿತ್ತು. ಕೊನೆಯ 12 ಎಸೆತಗಳಲ್ಲಿ ಆಸೀಸ್ ಗೆಲುವಿಗೆ 16 ರನ್ ಬೇಕಿತ್ತು. ಬೂಮ್ರಾ ಈ ಓವರ್ ನಲ್ಲಿ ಕೇವಲ 2 ರನ್ ಬಿಟ್ಟುಕೊಟ್ಟು 2 ವಿಕೆಟ್ ಕಿತ್ತ ಪರಿಣಾಮ ಪಂದ್ಯ ಕುತೂಹಲ ಘಟ್ಟದತ್ತ ತಿರುಗಿತು. ಆದರೆ ಉಮೇಶ್ ಯಾದವ್ ಓವರ್ ನಲ್ಲಿ 2 ಬೌಂಡರಿ ಹೋದ ಪರಿಣಾಮ ಪಂದ್ಯ ಭಾರತದಿಂದ ಕೈ ಜಾರಿತು. ಬುಮ್ರಾ 4 ಓವರ್ ಎಸೆದು 16 ರನ್ ನೀಡಿ 3 ವಿಕೆಟ್ ಪಡೆದು ಮಿಂಚಿದರು.
ಇದಕ್ಕೂ ಮುನ್ನ ಬ್ಯಾಟಿಂಗ್ ನಡೆಸಿದ ಟೀಂ ಇಂಡಿಯಾ ಪರ ಕೆಎಲ್ ರಾಹುಲ್ ಅರ್ಧ ಶತಕ ಹಾಗೂ ನಾಯಕ ಕೊಹ್ಲಿ 24, ಧೋನಿ 29 ರನ್ ಗಳ ನೆರವಿನಿಂದ 7 ವಿಕೆಟ್ ಕಳೆದುಕೊಂಡು 126 ರನ್ ಗಳಿಸಿತ್ತು.
ಟಾಸ್ ಸೋತು ಬ್ಯಾಟಿಂಗ್ ಅವಕಾಶ ಪಡೆದ ಟೀಂ ಇಂಡಿಯಾ ರೋಹಿತ್ ಶರ್ಮಾ ವಿಕೆಟ್ ಕಳೆದು ಬಹುಬೇಗ ಕಳೆದುಕೊಂಡರೂ ಕೂಡ ಉತ್ತಮ ಆರಂಭ ಪಡೆಯಿತು. ಆರಂಭದ 8.3 ಓವರ್ ಗಳಲ್ಲಿ 69 ರನ್ ಗಳಿಸಿ ಟೀಂ ಇಂಡಿಯಾ ಉತ್ತಮ ಹಂತದಲ್ಲಿತ್ತು. ಕೊಹ್ಲಿ 17 ಎಸೆತಗಳಲ್ಲಿ 24 ರನ್ ಗಳಿಸಿ ಬಿರುಸಿನ ಬ್ಯಾಟಿಂಗ್ ನಡೆಸಿದ್ದರು. ಆದರೆ ಆ್ಯಡಂ ಜಂಪಾ ಕೊಹ್ಲಿ ವಿಕೆಟ್ ಪಡೆಯುವ ಮೂಲಕ ಭಾರತ ರನ್ ವೇಗಕ್ಕೆ ಕಡಿವಾಣ ಹಾಕಲು ಯಶಸ್ವಿಯಾದರು. ಕೊಹ್ಲಿ ಪಂದ್ಯದಲ್ಲಿ ಆಸೀಸ್ ವಿರುದ್ಧ 500 ರನ್ ಪೂರ್ಣಗೊಳಿಸಿದ ಹೆಗ್ಗಳಿಕೆ ಗಳಿಸಿದರು.
ಪಂತ್ ರನೌಟ್ ಆಗುವ ಮೂಲಕ ನಿರಾಸೆ ಮೂಡಿಸಿದರೆ, ಉತ್ತಮವಾಗಿ ಆಡುತ್ತಿದ್ದ ರಾಹುಲ್‍ರನ್ನು ಕಾಲ್ಟರ್ ನೈಲ್ ಪೆವಿಲಿಯಗಟ್ಟಿದರು. ಈ ಹಂತದಲ್ಲಿ ಟೀಂ ಇಂಡಿಯಾ 12.2 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡಿತ್ತು. ಬಳಿಕ ಬಂದ ಧೋನಿ 37 ಎಸೆತಗಳನ್ನು 29 ರನ್ ಗಳಿಸಿ ಅಜೇಯರಾಗಿ ಉಳಿದರು.
ಟೀಂ ಇಂಡಿಯಾ 8.3 ಓವರ್ ಗಳಲ್ಲಿ 1 ವಿಕೆಟ್ ಕಳೆದು ಕೊಂಡು 69 ರನ್ ಗಳಿಸಿದರೆ, ಉಳಿದ 11.3 ಓವರ್ ಗಳಲ್ಲಿ 57 ರನ್ ಗಳಿಗೆ 6 ವಿಕೆಟ್ ಕಳೆದುಕೊಂಡಿತ್ತು. ಇತ್ತ ಧೋನಿ 35 ಪ್ಲಸ್ ಎಸೆತ ಎದುರಿಸಿದರೂ ಕೂಡ 29 ರನ್ ಮಾತ್ರ ಗಳಿಸಿ ಟಿ20 ಮಾದರಿಯಲ್ಲಿ ಭಾರತದ ಪರ ಕಡಿಮೆ ಸ್ಟ್ರೈಕ್ ರೇಟ್ ಹೊಂದಿದ ಆಟಗಾರ ಎನಿಸಿಕೊಂಡರು. ಈ ಹಿಂದೆ 2009ರಲ್ಲಿ ಇಂಗ್ಲೆಂಡ್ ವಿರುದ್ಧ ಜಡೇಜಾ 71.82 ಸ್ಟ್ರೈಕ್ ನಲ್ಲಿ ರನ್ ಗಳಿಸಿದ್ದರು. ಇಂದು ಧೋನಿ 78.37 ಸ್ಟ್ರೈಕ್ ರೇಟ್ ಹೊಂದಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv