– ಸಿಎಸ್ಆರ್ ನಿಧಿಯಡಿ ನೆರವಾಗಲು ಔಷಧ ಕಂಪನಿಗಳಿಗೆ ಕರೆ
ಬೆಂಗಳೂರು: ಔಷಧ ವಲಯದ ಉದ್ದಿಮೆಗಳು ತಮ್ಮ ಸಾಂಸ್ಥಿಕ ಹೊಣೆಗಾರಿಕೆ ನಿಧಿಯನ್ನು ಲಸಿಕಾ ಆಂದೋಲನಕ್ಕೆ ದೇಣಿಗೆ ನೀಡುವಂತೆ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಮನವಿ ಮಾಡಿದ್ದಾರೆ.
ಕೇಂದ್ರ ಸರ್ಕಾರ ಶೇಕಡಾ ಎಪ್ಪತ್ತೈದರಷ್ಟು ಲಸಿಕೆಯನ್ನು ರಾಜ್ಯಕ್ಕೆ ಉಚಿತವಾಗಿ ನೀಡುತ್ತಿದೆ. ಉಳಿದ ಇಪ್ಪತ್ತೈದರಷ್ಟನ್ನು ಖಾಸಗಿ ವಲಯಕ್ಕೆ ಹಂಚಿಕೆ ಮಾಡಿದೆ. ಖಾಸಗಿ ವಲಯಕ್ಕೆ ನೀಡಿರುವ ಲಸಿಕೆಯನ್ನು ಸಿಎಸ್‍ಆರ್ ನಿಧಿಯಡಿ ಖರೀದಿಸಿ ದೇಣಿಗೆ ರೂಪದಲ್ಲಿ ನೀಡುವಂತೆ ರಾಜ್ಯದ ಪ್ರಮುಖ ಔಷಧ ಉದ್ದಿಮೆದಾರರ ಸಭೆಯಲ್ಲಿ ಮಂಗಳವಾರ ಕರೆ ನೀಡಿದರು.
Advertisement
Advertisement
ತಜ್ಞರ ಅಭಿಪ್ರಾಯದ ಪ್ರಕಾರ ಮೂರನೇ ಅಲೆ ಅಷ್ಟೇನು ಪರಿಣಾಮಕಾರಿ ಅಲ್ಲ ಎನ್ನಲಾಗುತ್ತಿದೆ. ಆದರೂ ಎಲ್ಲ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕಿದೆ. ಎರಡು ಡೋಸ್ ಲಸಿಕೆ ಪಡೆದವರಿಗೆ ಸೋಂಕು ತೀವ್ರ ಪರಿಣಾಮ ಬೀರುವುದಿಲ್ಲ ಮತ್ತು ಸಾವು ಸಂಭವಿಸುವುದಿಲ್ಲ ಎಂಬುದು ರುಜುವಾತಾಗಿದೆ. ಹೀಗಾಗಿ ತ್ವರಿತವಾಗಿ ಲಸಿಕೆ ನೀಡುವುದರಿಂದ ಸಂಭವನೀಯ ಮೂರನೇ ಅಲೆಯಿಂದ ಸಂರಕ್ಷಣೆ ಸಾಧ್ಯ. ಹೀಗಾಗಿ ಸರ್ಕಾರದ ಜತೆ ಉದ್ದಿಮೆಗಳು ಕೈ ಜೋಡಿಸಿದರೆ ಗುರಿ ಸಾಧ್ಯ ಎಂದರು.
Advertisement
Advertisement
ಔಷಧ ವಲಯ ಮಾತ್ರವಲ್ಲದೆ, ಪೌಷ್ಟಿಕ ಆಹಾರ ಮತ್ತು ಸೌಂದರ್ಯ ವರ್ದಕ ಉದ್ದಿಮೆದಾರರ ಜತೆಗೂ ಮುಂದಿನ ದಿನಗಳಲ್ಲಿ ಸಭೆ ನಡೆಸಿ ಸಿಎಸ್‍ಆರ್ ನಿಧಿಯ ನೆರವನ್ನು ಲಸಿಕಾ ಆಂದೋನಕ್ಕೂ ವಿಸ್ತರಿಸಲು ಮನವಿ ಮಾಡಲಾಗುವುದು. ಇದು ಸರ್ಕಾರ ಮಾತ್ರವಲ್ಲದೆ, ಸಮಾಜದ ಎಲ್ಲರ ಹೊಣೆಗಾರಿಕೆ ಆಗಿರುವುದರಿಂದ ಉದ್ದಿಮೆಗಳು ನೆರವಿನ ಹಸ್ತ ಚಾಚಬೇಕು ಎಂದು ಸಚಿವರು ಮನವಿ ಮಾಡಿದರು.
ಸಚಿವರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಉದ್ದಿಮೆ ಪ್ರತಿನಿಧಿಗಳು, ಔಷಧ ವಲಯದ ಸಂಘಟನೆ ಮೂಲಕ ಮತ್ತು ತಮ್ಮ ಉದ್ದಿಮೆಗಳ ಮೂಲಕ ಸರ್ಕಾರದ ಲಸಿಕಾ ಆಂದೋಲನಕ್ಕೆ ನೆರವಾಗುವುದಾಗಿ ಭರವಸೆ ನೀಡಿದರು. ಸರ್ಕಾರದ ಸಂದೇಶವನ್ನು ತಮ್ಮ ಕಂಪನಿಗಳ ಆಡಳಿತ ಮಂಡಳಿಗೆ ತಿಳಿಸಿ ಆದಷ್ಟು ಬೇಗ ಪ್ರತಿಕ್ರಿಯೆ ನೀಡುವುದಾಗಿ ಸಭೆಯಲ್ಲಿ ಸ್ಪಷ್ಟಪಡಿಸಿದರು. ರಾಜ್ಯದಲ್ಲಿ ಉದ್ದಿಮೆ ಹೊಂದಿರುವ ಮುವತ್ತಕ್ಕೂ ಹೆಚ್ಚು ಕಂಪನಿಗಳ ಪ್ರತಿನಿಧಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.
ಔಷಧ ಉತ್ಪಾದನೆ, ವೈದ್ಯಕೀಯ ಉಪಕರಣಗಳ ಉತ್ಪಾದನೆ ಸೇರಿದಂತೆ ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಉದ್ಯಮಗಳ ಪ್ರತಿನಿಧಿಗಳ ಜೊತೆ ಇಂದು ಸಭೆ ನಡೆಸಲಾಯಿತು.
ರಾಜ್ಯದಲ್ಲಿ ಉದ್ಯಮ ಸರಳೀಕರಣ, ಬಂಡವಾಳ ಹೂಡಿಕೆಗೆ ಉತ್ತೇಜನ, ಲಸಿಕೆ ಅಭಿಯಾನಕ್ಕೆ ಸಿಎಸ್ಆರ್ ನಿಧಿ ಬಳಕೆ ಸೇರಿದಂತೆ ಹಲವು ವಿಷಯಗಳ ಬಗ್ಗೆ ಚರ್ಚಿಸಲಾಯಿತು.@CMofKarnataka @BSBommai
— Dr Sudhakar K (@mla_sudhakar) August 17, 2021
ಆಕ್ಸಿಜನ್ ಕೊರತೆ ನಿವಾರಣೆಗೆ ಕ್ರಮ
ಸಂಭವನೀಯ ಮೂರನೇ ಅಲೆ ಸಂದರ್ಭದಲ್ಲಿ ಆಕ್ಸಿಜನ್ ಕೊರತೆ ಎದುರಾಗದಂತೆ ಉದ್ಯಮಗಳ ಜತೆ ಸರ್ಕಾರ ಸಮನ್ವಯದಿಂದ ಕಾರ್ಯ ನಿರ್ವಹಿಸಲಿದೆ ಎಂದು ಇದಕ್ಕೂ ಮೊದಲು ಆಕ್ಸಿಜನ್ ಉತ್ಪಾದಕ ಕಂಪನಿಗಳ ಪ್ರತಿನಿಧಿಗಳ ಸಭೆಯಲ್ಲಿ ಸಚಿವ ಸುಧಾಕರ್ ಸ್ಪಷ್ಟಪಡಿಸಿದರು. ರಾಜ್ಯದಲ್ಲಿ ಆಕ್ಸಿಜನ್ ಸರಬರಾಜು ಕುರಿತಂತೆ ಉದ್ಯಮದ ಪ್ರತಿನಿಧಿಗಳ ಸಭೆ ನಡೆಸಿದ ಸಚಿವರು, ಉದ್ಯಮಗಳ ಸಹಕಾರದೊಂದಿಗೆ ಎರಡನೇ ಅಲೆಯನ್ನು ಸಮರ್ಥವಾಗಿ ಎದುರಿಸಲಾಗಿದೆ. ಸಂಭವನೀಯ ಮೂರನೇ ಅಲೆಯಲ್ಲೂ ಜನರ ಹಿತದೃಷ್ಟಿಯಿಂದ ಒಗ್ಗಟ್ಟಿನಿಂದ ಕೆಲಸ ಮಾಡೋಣ ಎಂದರು. ಇದನ್ನೂ ಓದಿ: ಬೆಂಗಳೂರಿಗೆ ಗಡಿ ವಾರ್ಡ್ ಗಳೇ ಡೇಂಜರ್ ಝೋನ್ – 172ಕ್ಕೇರಿದ ಆಕ್ಟಿವ್ ಕಂಟೈನ್‍ಮೆಂಟ್ ಝೋನ್
Met with industry representatives to discuss about enhancing EODB & facilitating investment in pharma, medical devices manufacturing & other healthcare related industries in Karnataka. Urged industry leaders to explore possibilities of leveraging CSR funds for vaccination drive. pic.twitter.com/T9YmbxxUXs
— Dr Sudhakar K (@mla_sudhakar) August 17, 2021
ಪ್ರಸ್ತುತ ಒಟ್ಟು ಏಳು ಕಂಪನಿಗಳು 812 ಟನ್ ಗಳಷ್ಟನ್ನು ಪ್ರತಿದಿನ ಉತ್ಪಾದಿಸುತ್ತಿವೆ. ನಮ್ಮಲ್ಲಿ ಒಟ್ಟು 7,900 ಟನ್ ಗಳಷ್ಟಿದೆ. ಸದ್ಯ 5,381 ಟನ್ ಪ್ರಮಾಣದ ದಾಸ್ತಾನು ಇದೆ. ಆಕ್ಸಿಜನ್ ರೀಫಿಲಿಂಗ್ ಘಟಕಗಳು 64 ಇವೆ. ಗದಗ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ಬೀದರ್, ಯಾದಗಿರಿ, ಚಾಮರಾಜನಗರ, ಕೊಡಗು ಮತ್ತು ಮಂಡ್ಯಗಳಲ್ಲಿ ಇಲ್ಲ. ಮುಂದಿನ ದಿನಗಳಲ್ಲಿ ಎಲ್ಲಾ ತಾಲೂಕು ಮತ್ತು ಜಿಲ್ಲೆಗಳಲ್ಲಿ ಆಕ್ಸಿಜನ್ ಘಟಕಗಳನ್ನು ನಿರ್ಮಿಸುವ ಉದ್ದೇಶವಿದೆ ಎಂದು ತಿಳಿಸಿದರು. ಇದನ್ನೂ ಓದಿ: ಹೊರ ರಾಜ್ಯದ ಕೂಲಿ ಕಾರ್ಮಿಕರಿಂದ ಕೊಡಗಿಗೆ ಕೊರೊನಾ ಕಂಟಕ
ಹಿಂದಿನ ತಪ್ಪುಗಳು ಮರುಕಳಿಸದಂತೆ ಎಚ್ಚರವಹಿಸಲಾಗುವುದು. ಹೊಸ ಘಟಕಗಳ ಸ್ಥಾಪನೆ, ಟೆಂಡರ್ ಕರೆಯುವುದು, ಜಂಬೋ ಸಿಲೆಂಡರ್ ಖರೀದಿ, ಹೆಚ್ಚುವರಿ ದಾಸ್ತಾನು ಕೇಂದ್ರ, ಸರಬರಾಜು ವ್ಯವಸ್ಥೆ ಸಹಿತ ಅಗತ್ಯವಿರುವ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಖಾಸಗಿ ಕಂಪನಿಗಳು ತಮ್ಮ ಉತ್ಪಾದನೆ, ದಾಸ್ತಾನು ವ್ಯವಸ್ಥೆಗಳನ್ನು ಬಲವರ್ದನೆಗೊಳಿಸಿಕೊಳ್ಳಬೇಕು. ಸರ್ಕಾರದಿಂದ ಅಗತ್ಯವಿರುವ ಎಲ್ಲಾ ನೆರವು ನೀಡಲಾಗುವುದು ಎಂದು ಭರವಸೆ ನೀಡಿದರು. ಹಿರಿಯ ಅಧಿಕಾರಿಗಳಾದ ಮನೀಷ್ ಮುದ್ಗಿಲ್, ಶಾಲಿನಿ ರಜನೀಶ್, ಉದ್ದಿಮೆಗಳ ಪ್ರತಿನಿಧಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು. ಇದನ್ನೂ ಓದಿ: ಇಂದು 1,298 ಹೊಸ ಕೊರೊನಾ ಪ್ರಕರಣ, 32 ಸಾವು