ನವದೆಹಲಿ: ನಾನು ಏನಾದರೂ ರಾಜಕೀಯ ಪ್ರವೇಶ ಮಾಡಿದರೆ, ನನ್ನ ನೇರ ಮಾತುಗಳಿಂದಲೇ ಮೂರನೇ ಮಹಾಯುದ್ಧ ನಡೆಯೋದು ಗ್ಯಾರೆಂಟಿ ಎಂದು ಪೆಪ್ಸಿಕೋ ಕಂಪನಿಯ ಮಾಜಿ ಸಿಇಒ ಇಂದ್ರಾ ನೂಯಿ ಹೇಳಿದ್ದಾರೆ.
ಮಾನವೀಯತೆ, ಉದ್ಯಮದಲ್ಲಿ ಸಾಧನೆ ಮತ್ತು ಮಹಿಳಾ ಪರ ನಿಲುವಿಗಾಗಿ ಏಷ್ಯಾ ಸೊಸೈಟಿ ಸಂಸ್ಥೆ 62 ವರ್ಷದ ಇಂದ್ರಾ ನೂಯಿ ಅವರಿಗೆ “ಗೇಮ್ ಚೇಂಜರ್ ಅವಾರ್ಡ್ ಆಫ್ ದಿ ಇಯರ್” ಪ್ರಶಸ್ತಿಯನ್ನು ನೀಡಿ ಗೌರವಿಸಿತು.
ಈ ಸಮಾರಂಭದಲ್ಲಿ ನಡೆದ ಮಾತುಕತೆಯಲ್ಲಿ, ಅಮೇರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮಂತ್ರಿಮಂಡಲವನ್ನ ಸೇರಲು ಇಚ್ಛಿಸುತ್ತೀರ ಎಂಬ ಪ್ರಶ್ನೆಗೆ ಉತ್ತರಿಸಿದ ನೂಯಿ, “ನನಗೂ ಮತ್ತು ರಾಜಕೀಯಕ್ಕೂ ಹೊಂದಿಕೊಳ್ಳಲು ಅಸಾಧ್ಯ. ಏಕೆಂದರೆ ನಾನು ಎಲ್ಲವನ್ನ ನೇರವಾಗಿ ಹೇಳಿಕೊಳ್ಳುತ್ತೇನೆ. ನಾನು ರಾಜತಾಂತ್ರಿಕಳಲ್ಲ. ಯಾವ ರಾಜತಾಂತ್ರಿಕತೆಯ ಬಗ್ಗೆಯೂ ನನಗೆ ಗೊತ್ತಿಲ್ಲ. ನಾನೇನಾದರೂ ರಾಜಕೀಯ ಪ್ರವೇಶ ಮಾಡಿದರೆ ನನ್ನಿಂದಲೇ ಮೂರನೇ ಮಹಾಯುದ್ಧ ಉಂಟಾಗುವುದು ಖಚಿತ. ರಾಜಕೀಯಕ್ಕೆ ನನ್ನನ್ನು ದೂಡುವ ಕೆಲಸವನ್ನ ಮಾಡಬೇಡಿ” ಎಂದರು.
ನೂಯಿಯವರ 40 ವರ್ಷದ ಉದ್ಯಮದ ಕಾರ್ಯ ವೈಖರಿಯ ಬಗ್ಗೆ ಕೇಳಿದಾಗ,”ನಾನು ದಿನದಲ್ಲಿ ಸುಮಾರು 18-20 ತಾಸಿನವರೆಗೆ ಕೆಲಸ ಮಾಡುತ್ತಿದ್ದೆ. ಇಡೀ ದಿನ ಆಫೀಸಿನಲ್ಲಿ ಕೆಲಸ ಮಾಡುವ ನನಗೆ ಈಗ ಹುದ್ದೆಯಿಂದ ಕೆಳಗಿಳಿದ ನಂತರ ಏನು ಮಾಡಬೇಕೆಂದು ಗೊತ್ತಾಗುತ್ತಿಲ್ಲ. ಬೆಳಗ್ಗೆ 4 ಘಂಟೆಗೆ ಶುರುವಾಗುತ್ತಿದ್ದ ನನ್ನ ದಿನಚರಿಯಿಂದ ಈಗ ನನಗೆ ಮುಕ್ತಿ ದೊರೆತಿದೆ ಎಂದು ಹೇಳಿದರು.
ವಿಶ್ವದ ಎರಡನೇ ತಂಪು ಪಾನೀಯದ ಪೆಪ್ಸಿಕೋ ಕಂಪೆನಿಯಲ್ಲಿ ಸಿಇಒ ಆಗಿ ಕಾರ್ಯನಿರ್ವಹಿಸಿದ್ದ ನೂಯಿ 12 ವರ್ಷಗಳ ನಂತರ ಕಂಪೆನಿಯಿಂದ ಹೊರಬರುತ್ತಿದ್ದಾರೆ. ಅಕ್ಟೋಬರ್ 3ಕ್ಕೆ ಅವರ ಅವಧಿ ಮುಕ್ತಾಯವಾಗಿದ್ದು, 2019 ರವರೆಗೂ ಕಾರ್ಯನಿರ್ವಹಿಸುವುದಾಗಿ ಹೇಳಿದ್ದಾರೆ. ಇಂದ್ರಾ ನೂಯಿರವರು 1980 ರಲ್ಲಿ ರಾಜ್ ನೂಯಿ ಎಂಬವರನ್ನು ವಿವಾಹವಾಗಿದ್ದು, ಇಬ್ಬರು ಮಕ್ಕಳಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv