ಭೋಪಾಲ್: 10 ವರ್ಷದ ಪ್ರಾರ್ಥನೆ ಬಳಿಕ ಜನಿಸಿದ್ದ 6 ತಿಂಗಳ ಮಗು ಕಲುಷಿತ ನೀರು ಸೇವನೆಯಿಂದ ಸಾವನ್ನಪ್ಪಿರುವ ಘಟನೆ ಮಧ್ಯಪ್ರದೇಶದ (Madhya Pradesh) ಇಂದೋರ್‌ನಲ್ಲಿ ನಡೆದಿದೆ.
ಸ್ವಚ್ಛತೆಯಲ್ಲಿ ಸತತವಾಗಿ ಮೊದಲ ಸ್ಥಾನ ಪಡೆಯುತ್ತಿರುವ ಇಂದೋರ್‌ನ ಭಾಗೀರಥಪುರದಲ್ಲಿ ಈ ಘಟನೆ ಸಂಭವಿಸಿದೆ. ಮರಾಠಿ ಮೊಹಲ್ಲಾದಲ್ಲಿನ ಆರು ತಿಂಗಳ ಮಗು ಸಾವನ್ನಪ್ಪಿದೆ. ಈ ಮೂಲಕ ಸಾವಿನ ಸಂಖ್ಯೆ 13ಕ್ಕೆ ಏರಿಕೆಯಾಗಿದ್ದು, 1000ಕ್ಕೂ ಅಧಿಕ ಜನರು ಅಸ್ವಸ್ಥರಾಗಿದ್ದಾರೆ. ಇನ್ನೂ 200ಕ್ಕೂ ಅಧಿಕ ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ.ಇದನ್ನೂ ಓದಿ: ಕುಡಿಯುವ ನೀರಿಗೆ ಚರಂಡಿ ನೀರು ಮಿಶ್ರಣ – ಸೇವಿಸಿದ್ದ ಏಳು ಮಂದಿ ಸಾವು
ಈ ಕುರಿತು ಮಗುವಿನ ತಾಯಿ ಸಾಧನಾ ಸಾಹು ಮಾತನಾಡಿ, ಮನೆಗೆ ಪೂರೈಕೆಯಾಗುವ ನೀರನ್ನು ಹಾಲಿಗೆ ಮಿಶ್ರಣ ಮಾಡಿ, ಕುಡಿಸಿದ ಬಳಿಕ ಮಗುವಿಗೆ ವಾಂತಿಯಾಗಲು ಶುರುವಾಗಿ ಅಸ್ವಸ್ಥಗೊಂಡಿತು. ಕೂಡಲೇ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದೆವು, ಬಳಿಕ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಆದರೆ ಅಲ್ಲಿ ಮಗು ಸಾವನ್ನಪ್ಪಿದೆ ಎಂದು ತಿಳಿಸಿದರು ಎಂದಿದ್ದಾರೆ.
ಹತ್ತು ವರ್ಷಗಳ ಪ್ರಾರ್ಥನೆಯ ನಂತರ ಮಗು ಜನಿಸಿತ್ತು. ಆದರೆ ಈಗ ಈ ನೀರಿನಿಂದಾಗಿ ನನ್ನ ಮಗುವನ್ನು ಕಳೆದುಕೊಂಡೆ. ಈ ಸಂಬಂಧ ಹಲವು ಬಾರಿ ದೂರು ನೀಡಿದರೂ ಕೂಡ ಯಾವುದೇ ಬದಲಾವಣೆಯಾಗಿಲ್ಲ. ಅದೇ ಕೊಳಕು ನೀರು ಬರುತ್ತಿದೆ. ಅಲ್ಲದೇ ಇದೀಗ ನನ್ನ 10 ವರ್ಷದ ಮಗಳು ಕೂಡ ಹೊಟ್ಟೆನೋವಿನಿಂದ ಬಳಲುತ್ತಿದ್ದಾಳೆ ಎಂದು ಆರೋಪಿಸಿದ್ದಾರೆ.
ಮುಖ್ಯಮಂತ್ರಿ ಮೋಹನ್ ಯಾದವ್ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ, ಮುನ್ಸಿಪಲ್ ಕಾರ್ಪೊರೇಷನ್ ವಲಯ ಅಧಿಕಾರಿ ಮತ್ತು ಸಹಾಯಕ ಎಂಜಿನಿಯರ್‌ನ್ನು ಅಮಾನತುಗೊಳಿಸಿದ್ದಾರೆ ಹಾಗೂ ಮೃತರ ಕುಟುಂಬಗಳಿಗೆ ರಾಜ್ಯ ಸರ್ಕಾರ 2 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ. ಈ ಸಂಬಂಧ ತನಿಖೆ ನಡೆಸಿ, ಕಠಿಣ ಕ್ರಮ ಕೈಗೊಳ್ಳುವಂತೆ ಆದೇಶಿಸಿದ್ದಾರೆ. ಸದ್ಯ ಸ್ಥಳದಲ್ಲಿ ಆರೋಗ್ಯ ಇಲಾಖೆ ಶುದ್ಧ ಕುಡಿಯುವ ನೀರನ್ನು ಪೂರೈಸಲು ನೀರಿನ ಟ್ಯಾಂಕರ್‌ಗಳ ನಿಯೋಜನೆ ಮಾಡಲಾಗಿದೆ.
ಪ್ರಾಥಮಿಕ ತನಿಖೆಯ ಪ್ರಕಾರ, ನರ್ಮದಾ ನದಿಯಿಂದ ಬರುವ ನೀರಿನ ಮುಖ್ಯ ಪೈಪ್‌ಲೈನ್ ಒಂದು ಸಾರ್ವಜನಿಕ ಶೌಚಾಲಯದ ಕೆಳಗೆ ಹಾದುಹೋಗುತ್ತದೆ. ಅಲ್ಲಿ ಪೈಪ್ ಸೋರಿಕೆಯಿಂದಾಗಿ ಮಲಿನ ಜಲ ಮತ್ತು ಕುಡಿಯುವ ನೀರು ಬೆರೆತು ಹೋಗಿದೆ. ಹೊಸ ಪೈಪ್‌ಲೈನ್ ಹಾಕಲು ಈಗಾಗಲೇ 2.5 ಕೋಟಿ ರೂ. ಟೆಂಡರ್ ಅನುಮೋದನೆಯಾಗಿದ್ದರೂ ಕೂಡ ನಾಲ್ಕು ತಿಂಗಳುಗಳಿಂದ ಕಾರ್ಯಾರಂಭವಾಗಿಲ್ಲ ಎಂದು ತಿಳಿದುಬಂದಿದೆ.
ಮನೆಗಳ ನಲ್ಲಿಯಲ್ಲಿ ಬರುತ್ತಿದ್ದ ನೀರಿನಿಂದ ಕೆಟ್ಟ ವಾಸನೆ ಬರುತ್ತಿತ್ತು ಮತ್ತು ಕಲುಷಿತವಾಗಿತ್ತು. ಕಳೆದ 6 ತಿಂಗಳಿನಿಂದ ಈ ಸಮಸ್ಯೆಯ ಬಗ್ಗೆ ಅಧಿಕಾರಿಗಳಿಗೆ ದೂರು ನೀಡಿದ್ದೇವೆ. ಆದರೆ ಈವರೆಗೆ ಯಾವುದೇ ಕ್ರಮಕೈಗೊಳ್ಳದೇ ಇದ್ದದ್ದು ಈ ದುರಂತಕ್ಕೆ ಕಾರಣವಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.ಇದನ್ನೂ ಓದಿ: ಹೊಸ ವರ್ಷಕ್ಕೂ ಮುನ್ನ ಭರ್ಜರಿ ಬೇಟೆ – 150 ಕೆಜಿ ಸ್ಫೋಟಕ, 200 ಬ್ಯಾಟರಿ, 1,100 ಮೀ ವೈರ್ ಸೀಜ್

